ಹಾವೇರಿ: ಭದ್ರಾ ಮೇಲ್ದಂಡೆ ಯೋಜನೆಗೆ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಒಪ್ಪಿಗೆ ನೀಡಿದೆ. ಆದಷ್ಟು ಬೇಗನೇ ಈ ಯೋಜನೆಗೆ ಕಾಯಕಲ್ಪ ಆಗುತ್ತದೆ. ಕೇಂದ್ರ ಮತ್ತು ರಾಜ್ಯದ ಸಹಕಾರದಿಂದ ಭದ್ರಾ ಮೇಲ್ದಂಡೆ ಯೋಜನೆ ಯಶಸ್ವಿಯಾಗುವ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಪಟ್ಟಣ ಪಂಚಾಯತ ವತಿಯಿಂದ ನಿರ್ಮಿಸಲಾದ ಕುಮದ್ವತಿ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ವಾಣಿಜ್ಯ ಸಂಕೀರ್ಣ ಇವತ್ತು ಉದ್ಘಾಟನೆ ಆಗುತ್ತಿರುವುದು ಸಂತಸದ ಸಂಗತಿ, ಶಾಸಕರು ಆಸಕ್ತಿ ವಹಿಸಿ ಪೂರ್ಣಗೊಳಿಸಿದ್ದಾರೆ. ಹೆಚ್ಚಿನ ಆದಾಯ ಬಂದು ಪಟ್ಟಣ ಪಂಚಾಯತಿಗೆ ಅನುಕೂಲವಾಗುತ್ತದೆ. ಪಟ್ಟಣ ಪಂಚಾಯತಿ ಸದಸ್ಯರು ಮತ್ತು ಶಾಸಕರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ರಟ್ಟಿಹಳ್ಳಿ ಈಗ ತಾಲೂಕು ಪಂಚಾಯತಿ, 1998 ರಲ್ಲಿ ನಾನು ವಿಧಾನ ಪರಿಷತ್ತಿಗೆ ಚುನಾವಣೆಗೆ ನಿಂತಾಗ ರಟ್ಟಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬಂದು ಚುನಾವಣಾ ಪ್ರಚಾರ ಮಾಡಿದ್ದೆ. ಆಗ ಎಲ್ಲರೂ ಪಕ್ಷಾತೀತವಾಗಿ ಸಹಾಯ ಮಾಡಿದ್ದರು. ಈ ಊರು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗಲು ಎಲ್ಲ ಅವಕಾಶಗಳಿವೆ. ತಾಲೂಕಾ ಕೇಂದ್ರಕ್ಕೆ ಬೇಕಾಗಿರುವ ಆಡಳಿತ ಸಂಕೀರ್ಣ, ಆಸ್ಪತ್ರೆ, ಕಾಲೇಜು, ಮಿನಿ ವಿಧಾನಸೌಧ ಆಗುವ ಅವಶ್ಯಕತೆ ಇದೆ. ಇದರ ಜೊತೆಗೆ ಊರಿನ ಅಭಿವೃದ್ಧಿ ಯೋಜನಾ ಬದ್ಧವಾಗಿ ಆಗಬೇಕು.
ಪಟ್ಟಣ ಪಂಚಾಯತಿ ಸದಸ್ಯರು ಯೋಜನೆಯನ್ನು ಸಂಪೂರ್ಣವಾಗಿ ಮನಗಂಡು ವಿಸ್ತರಣೆ ಮಾಡಿದರೆ ಜನ ಮೆಚ್ಚುತ್ತಾರೆ. ಇಲ್ಲದಿದ್ದರೆ ಹಳೆ ಊರು ಆದಂಗೆ ಆಗುತ್ತದೆ. ಯೋಜನಾ ಬದ್ಧವಾಗಿ ಅಭಿವೃದ್ಧಿ ಮಾಡುವುದು ಅವಶ್ಯಕತೆ ಇದೆ. ನಮ್ಮ ಕಾಲದಲ್ಲಿ ಸುಮಾರು 7 ಸಾವಿರ ಕೋಟಿ ರೂ. ಪಟ್ಟಣ ಪಂಚಾಯತಿ, ಪುರಸಭೆಗೆ ಹಣ ಕೊಟ್ಟಿದ್ದೇವು. ನ್ಯಾಯಸಮ್ಮತವಾಗಿ ಹಣ ರಟ್ಟಿಹಳ್ಳಿ, ಹಿರೆಕೆರೂರು, ರಾಣೆಬೆನ್ನೂರು ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ಟೇಟ್ ಫೈನಾನ್ಸ್ ಕಮಿಷನ್ ಶಿಫಾರಸ್ಸು ಮಾಡಿರುವ ಹಣ್ಣ ಬಂದಿಲ್ಲ. ಅದು ಬಂದರೆ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತದೆ. ಅದನ್ನು ತರಲು ಶಾಸಕರೊಂದಿಗೆ ಕೈ ಜೋಡಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
ಅಭಿವೃದ್ದಿಗೆ ಆದ್ಯತೆ
ಗ್ರಾಮ, ತಾಲೂಕು, ಜಿಲ್ಲಾ, ವಿಧಾನಸಭೆ, ಎಂಪಿ ಐದೂ ಸಂಸ್ಥೆಗಳು ಒಂದಾಗಿ ಕೆಲಸ ಮಾಡಬೇಕು. ಐದು ವರ್ಷದಲ್ಲಿ ಒಂದು ತಿಂಗಳು ರಾಜಕೀಯ ಮಾಡೋಣ. ಉಳಿದ ಅವಧಿ ಅಭಿವೃದ್ಧಿ ಮಾಡೋಣ. ಆಗ ಜನರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಡುತ್ತಾರೆ. ಆ ನಿಟ್ಟಿನಲ್ಲಿ ರಟ್ಟಿಹಳ್ಳಿ ಪಟ್ಟಣ ಪಂಚಾಯತಿ ಸದಸ್ಯರು ಉತ್ಸಾಹದಲ್ಲಿದ್ದಾರೆ. ಅವರು ಅಭಿವೃದ್ಧಿ ಕೆಲಸ ಮಾಡಲು ಮುಂದಾಗಿದ್ದಾರೆ. ಅವರಿಗೆ ಖಂಡಿತವಾಗಿ ಬೆಂಬಲ ಕೊಡುತ್ತೇವೆ.
ಈ ದೇಶದಲ್ಲಿ ಶೇ 40 ರಷ್ಟು ಜನ ನಗರ ವಾಸಿಗಳಾಗಿದ್ದಾರೆ. ನಗರೀಕರಣ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಈಗಿನಿಂದಲೇ ಪುರಸಭೆ, ಪಟ್ಟಣ ಪಂಚಾಯತಿ, ನಗರ, ಮಹಾನಗರ ಪಾಲಿಕೆಗಳನ್ನು ಸದೃಢ ಮಾಡಿ ಯೋಜನಾ ಬದ್ಧವಾಗಿ ಅಭಿವೃದ್ಧಿ ಮಾಡಿದರೆ ಉತ್ತಮ ನಾಡು, ದೇಶ ಕಟ್ಟಲು ಸಾಧ್ಯ. ಇಲ್ಲದಿದ್ದರೆ ಸ್ಲಮ್‌ಗಳ ಸಂಖ್ಯೆ ಹೆಚ್ಚಾಗುತ್ತವೆ. ಇದರಿಂದ ಸ್ಪಮ್ ಗಳ ಭಾರತ ಆಗುತ್ತದೆ. ಅದು ಆಗದಂತೆ ನೋಡಿಕೊಳ್ಳಬೇಕು. ಯೋಜನೆಗಳು ಕೆಳಗಿನಿಂದ ಹೋಗಬೇಕು. ಅನುದಾನ ಮೇಲಿನಿಂದ ಬರಬೇಕು. ಹಣಕಾಸು ಜೇನು ತುಪ್ಪದಂತೆ ನೇರವಾಗಿ ಕೆಳಗೆ ಬರಬೇಕು. ಅದು ಗ್ರೀಸ್ ಆದಂತೆ ಮಧ್ಯದಲ್ಲಿ ನಿಂತಿದೆ. ಈ ವ್ಯವಸ್ಥೆಯನ್ನು ನಾವೆಲ್ಲರೂ ಸೇರಿ ಸರಿ ಮಾಡೋಣ. ರಟ್ಟಿಹಳ್ಳಿ ಪಟ್ಟಣ ಪಂಚಾಯತಿ ತಾಲೂಕು ಹೊಸದಾಗಿ ಆಗಿದೆ. ಯುವ ತಾಲೂಕು ಈಗಲೇ ಶಕ್ತಿ ತುಂಬಿದರೆ ಉತ್ತಮ ನಗರ ಮಾಡಲು ಸಾಧ್ಯ ಆ ಕೆಲಸ ನಾವು ನೀವು ಸೇರಿ ಮಾಡೋಣ ಎಂದು ಹೇಳಿದರು.
ನೀರಾವರಿಗೆ ಆದ್ಯತೆ
ಈ ಭಾಗದಲ್ಲಿ ಇನ್ನಷ್ಟು ನೀರಾವರಿ ಆಗಬೇಕಿದೆ. ಜನ, ಅಭಿವೃದ್ಧಿ, ನೆಲ, ಜಲ ವಿಚಾರದಲ್ಲಿ ನಾವೆಲ್ಲ ಒಂದಾಗಿದ್ದೇವೆ. ಆ ನಿಟ್ಟಿನಲ್ಲಿ ಕೆಲಸ ಮಾಡೋಣ. ತುಂಗಾ ಮೇಲ್ದಂಡೆ ಯೋಜನೆ ದೊಡ್ಡ ಸವಾಲಾಗಿತ್ತು. ಅದನ್ನು ನಾವು ಯಶಸ್ವಿಯಾಗಿ ನಿಭಾಯಿಸಿದ್ದೇವು. ನಾಲ್ಕು ಜನ ಗುತ್ತಿಗೆದಾರರು ಯೋಜನೆ ಬಿಟ್ಟು ಹೋಗಿದ್ದರು. ನಾನು 2012 ಕ್ಕೆ ನೀರು ಕೊಡುವುದಾಗಿ ಹೇಳಿದ್ದೆ. ನನ್ನ ಗೆಳೆಯ ಇಂಜನೀಯರ್ ಇದ್ದ ಅವನಿಗೆ ಹೇಳಿದೆ ಅವನು ಕೊಂಕಣ ರೈಲ್ವೆ ಎಂಜನೀಯರ್ ಅವರನ್ನು ಕರೆದುಕೊಂಡು ಹೋಗುವಂತೆ ಹೇಳಿದ ಅವರನ್ನು ಕರೆಯಿಸಿ ಯೋಜನೆ ಯಶಸ್ವಿ ಮಾಡಿದೆವು. ಅಸಾಧ್ಯ ಇದ್ದನ್ನು ಸಾಧ್ಯ ಮಾಡಿ ನೀರು ಹರಿಸಿದ್ದು ಸಂತೋಷ ಆಗಿತ್ತು.
ಭದ್ರಾ ಮೇಲ್ದಂಡೆ ಯೋಜನೆ ಕೂಡ ಸವಾಲಾಗಿತ್ತು. ಅದನ್ನೂ ನಾವೇ ಶುರು ಮಾಡಿದ್ದೇವು. ಮುಂದಿನ ಕೆಲಸಕ್ಕಾಗಿ ಕೇಂದ್ರದ ನೆರವಿಗೆ ಗುರುಗಳು ದೆಹಲಿಗೆ ಬಂದಿದ್ದರು. ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಕೂಡ ಒಪ್ಪಿಗೆ ನೀಡಿದೆ. ಆದಷ್ಟು ಬೇಗನೇ ಅಪ್ಪರ್ ಭದ್ರಾ ಯೋಜನೆಗೆ ಕಾಯಕಲ್ಪ ಆಗುತ್ತದೆ. ಆ ಯೋಜನೆಗೂ ಕೇಂದ್ರ ಮತ್ತು ರಾಜ್ಯದ ಸಹಕಾರದಿಂದ ಯಶಸ್ವಿಯಾಗುವ ವಿಶ್ವಾಸ ಇದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಗತ್ಯ
ನಮ್ಮ ಹಾವೇರಿಗೆ ಒಂದು ಡಿಸಿಸಿ ಬ್ಯಾಂಕ್ ಬೇಕು ಎಂದು ಹೋರಾಟ ಮಾಡುತ್ತ ಬಂದಿದ್ದೇವೆ. ಕೆಎಂಎಫ್ ಮತ್ತು ಡಿಸಿಸಿ ಬ್ಯಾಂಕ್ ಗಾಗಿ ಹೋರಾಟ ಮಾಡಿದ್ದೇವು. ನಾನು ಸಿಎಂ ಆಗಿದ್ದಾಗ ಕೆಎಂಎಫ್ ತಂದಿದ್ದೇವೆ. ಮೆಗಾ ಡೈರಿಗೆ 100 ಕೋಟಿ ರೂ. ಕೊಟ್ಟಿದ್ದೇನೆ. ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿದೆವು ಅವರು ಒಂದು ಜಿಲ್ಲೆಗೆ ಒಂದು ಡಿಸಿಸಿ ಬ್ಯಾಂಕ್ ಅಂತ ಆದೇಶ ಮಾಡಿದ್ದಾರೆ. ಆ ಆದೇಶ ನಬಾರ್ಡ್‌ಗೆ ಬಂದಿದ್ದು, ಅದರ ಮೂಲಕ ರಾಜ್ಯ ಸರ್ಕಾರಕ್ಕೆ ಬಂದಿದೆ. ರಾಜ್ಯ ಸರ್ಕಾರ ಆರ್‌ಬಿಐ ಗೆ ಶಿಫಾರಸ್ಸು ಮಾಡಿದರೆ ಆದಷ್ಟು ಬೇಗ ನಮ್ಮದೇ ಆದ ಡಿಸಿಸಿ ಬ್ಯಾಂಕ್ ಆಗುತ್ತದೆ. ಅತಿ ಹೆಚ್ಚು ಠೇವಣಿ ಇರುವುದು ಹಾವೇರಿ ಜಿಲ್ಲೆಯದು, ಅದು ಬಹಳ ಮುಖ್ಯ ನಮ್ಮ ಠೇವಣಿ ಹಣ ನಮ್ಮ ರೈತರಿಗೆ ಹೆಚ್ಚಿನ ಸಾಲ ಸಿಗಬೇಕು. ಆದಷ್ಟು ಬೇಗ ಆಗುತ್ತದೆ ಎನ್ನುವ ವಿಶ್ವಾಸ ಇದೆ. ಎಲ್ಲರೂ ಸಹಕಾರ ಕೊಡುವ ವಿಶ್ವಾಸ ಇದೆ. ಶಾಸಕರ ಸಹಕಾರವೂ ಇರಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಯು.ಬಿ.ಬಣಕಾರ, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ರವೀಂದ್ರಪ್ಪ ಮುದಿಯಪ್ಪನವರ, ಉಪಾಧ್ಯಕ್ಷರಾದ ಶಿವಕುಮಾರ ಉಪ್ಪಾರ ಸೇರಿದಂತೆ ಪಟ್ಟಣ ಪಂಚಾಯತ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
