ಬೆಂಗಳೂರು:ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 50 ವರ್ಷಗಳ ನಂತರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರವಾಗಿ ತಿದ್ದುಪಡಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನಪರಿಷತ್‍ನ ಅಧಿವೇಶನದಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಎಸ್.ವ್ಹಿ.ಸಂಕನೂರ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದರಿಯವರು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಆಕ್ಷೇಪಣೆ ವ್ಯಕ್ತಪಡಿಸಿ ಇಲಾಖೆಗೆ ಹಿಂದಿರುಗಿಸಿದ್ದು, ಆಡಳಿತ ಸುಧಾರಣಾ ಇಲಾಖೆಯ ಸೂಚನೆಯನ್ವಯ ಸೂಕ್ತ ಮಾರ್ಪಾಡುಗಳನ್ನು ಮಾಡಿ ಪುನಃ ಪ್ರಸ್ತಾವನೆಯನ್ನು ಶೀಘ್ರವಾಗಿ ಸಲ್ಲಿಸಲಾಗುತ್ತಿದೆ ಎಂದರು.
ಇಲಾಖೆಯಲ್ಲಿ 2009ರಲ್ಲಿ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ವೃಂದದ ಜೇಷ್ಠತಾ ಪಟ್ಟಿ ಹಾಗೂ 2012ರಲ್ಲಿ ಹಿರಿಯ ವೈದ್ಯಾಧಿಕಾರಿಗಳ ವೃಂದದ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಲಾಗಿರುತ್ತದೆ. ವೈದ್ಯರ ವೃಂದದ ಸಮಗ್ರ ಮಾಹಿತಿಯು ಲಭ್ಯವಿಲ್ಲದ ಕಾರಣ ಜೇಷ್ಠತಾ ಪಟ್ಟಿ ಇಲ್ಲಿಯವರೆಗೂ ಅಂತಿಮಗೊಂಡಿರುವುದಿಲ್ಲ ಎಂದು ತಿಳಿಸಿದರು.
2024ರಲ್ಲಿ ವೈದ್ಯರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿದ್ದು, ಸದರಿ ಪಟ್ಟಿಗೆ ಆಕ್ಷೇಪಣೆಗಳು ಸ್ವೀಕೃತಿಯಾದ ಕಾರಣ, ವೈದ್ಯರ ಸಮಗ್ರ ಸೇವಾ ವಿವರದ ಮಾಹಿತಿಗಳು ಕೇಂದ್ರ ಕಚೇರಿಯಲ್ಲಿ ಲಭ್ಯವಿಲ್ಲದ ಕಾರಣ ಜೇಷ್ಠತಾ ಪಟ್ಟಿ ಅಂತಿಮಗೊಳಿಸಲು ವಿಳಂಬವಾಗಿರುತ್ತದೆ. ಸದರಿ ಮಾಹಿತಿಯನ್ನು ಜಿಲ್ಲೆಗಳಿಂದ ಪಡೆದು ಗಣಕೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಪಾರದರ್ಶಕವಾಗಿ ಹಾಗೂ ಆಡಳಿತಾತ್ಮಕವಾಗಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಕಳೆದ ವರ್ಷ 5,700 ಸಿಬ್ಬಂದಿಗಳ ವರ್ಗಾವಣೆ ಮಾಡಲಾಗಿದೆ. ಮುಂದಿನ ತಿಂಗಳು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
