ಬೆಂಗಳೂರು:ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗಿದೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ವದಂತಿಗಳಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿ ಪೆಟ್ರೋಲ್ ಬಂಕ್‍ಗಳಲ್ಲಿ ಬಾಟಲಿ ಹಾಗೂ ಕ್ಯಾನ್‍ಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಇಂಧನ ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟೀಕರಣ ನೀಡಿದೆ.
ಸಾಕಷ್ಟು ದಾಸ್ತಾನು ಲಭ್ಯ: ಕೇಂದ್ರ ಸರ್ಕಾರದಿಂದ ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸುಗಮವಾಗಿ ನಡೆಯುತ್ತಿದೆ. ಯಾವುದೇ ರೀತಿಯ ಕೊರತೆ ಉಂಟಾಗಿಲ್ಲ.
ವದಂತಿಗಳನ್ನು ನಂಬಬೇಡಿ: ಇಂಧನ ಕೊರತೆಯ ಬಗ್ಗೆ ಹರಡುತ್ತಿರುವ ಸುದ್ದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲ.
ಸುರಕ್ಷತೆಯ ಎಚ್ಚರಿಕೆ: ಚಿಲ್ಲರೆ ಮಾರಾಟ ಮಳಿಗೆಗಳು ವಾಹನಗಳ ಇಂಧನ ಟ್ಯಾಂಕ್‍ಗಳಿಗೆ ಮಾತ್ರ ನೇರವಾಗಿ ಇಂಧನವನ್ನು ಪೂರೈಸುತ್ತವೆ. ಯಾವುದೇ ರೀತಿಯ ಕ್ಯಾನ್ ಅಥವಾ ಬಾಟಲಿಯಲ್ಲಿ ಇಂಧನ ಪೂರೈಸಲು ಅವಕಾಶವಿಲ್ಲ. ಪ್ರತ್ಯೇಕ ಕಂಟೈನರ್‍ಗಳಲ್ಲಿ ಇಂಧನ ಸಂಗ್ರಹಿಸುವುದು ಅತ್ಯಂತ ಅಪಾಯಕಾರಿ ಹಾಗೂ ಕಾನೂನುಬಾಹಿರವಾಗಿದ್ದು, ಅನಾಹುತಗಳಿಗೆ ಕಾರಣವಾಗಬಹುದು.
ಕಟ್ಟುನಿಟ್ಟಿನ ಸೂಚನೆ: ಇಂಧನವನ್ನು ಕೇವಲ ವಾಹನಗಳ ಟ್ಯಾಂಕ್‍ಗಳಿಗೆ ಮಾತ್ರ ಭರ್ತಿ ಮಾಡಬೇಕು. ಬಾಟಲಿ ಅಥವಾ ಪ್ರತ್ಯೇಕ ಕಂಟೈನರ್‍ಗಳಲ್ಲಿ ಇಂಧನ ನೀಡದಂತೆ ಪೆಟ್ರೋಲ್ ಬಂಕ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸಾರ್ವಜನಿಕರು ಸಹಕರಿಸಿ, ಅಗತ್ಯಕ್ಕಿಂತ ಹೆಚ್ಚಿನ ಇಂಧನವನ್ನು ಸಂಗ್ರಹಿಸಿ ಆತಂಕ ಸೃಷ್ಟಿಸಬಾರದೆಂದು ಈ ಮೂಲಕ ವಿನಂತಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರಾಜ್ ಬಿ.ಇ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
