ಸಮಗ್ರ ಸುದ್ದಿ

ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಕೇಂದ್ರ ಸರಕಾರದ ಅಸ್ತು | ಮೈಸೂರು ಮತ್ತು ಬೆಂಗಳೂರು ನಡುವಿನ ರೇಲು ಸಂಪರ್ಕಕ್ಕೆ ಮತಷ್ಟು ಉತ್ತೇಜನ; ರಾಮನಗರದ ನಿತ್ಯ ಪ್ರಯಾಣಿಕರಿಗೆ ಹೆಚ್ಚು ಅನುಕೂಲ

Share

ನವದೆಹಲಿ:ರಾಜ್ಯದ ಪ್ರಾದೇಶಿಕ ರೈಲು ಸಂಪರ್ಕಕ್ಕೆ ಮಹತ್ವದ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿದ್ದು, ಮೈಸೂರು-ಕೆಎಸ್ಆರ್ ಬೆಂಗಳೂರು ನಡುವೆ ನಿತ್ಯವು ಸಂಚರಿಸಲಿರುವ ಒಡೆಯರ್ ಎಕ್ಸ್‌ಪ್ರೆಸ್‌ ರೇಲು ರಾಮನಗರದಲ್ಲಿ ನಿಲುಗಡೆಗೆ ಅನುಮೋದನೆ ನೀಡಲಾಗಿದೆ.

ಈ ಬಗ್ಗೆ ಕೇಂದ್ರದ ರೈಲ್ವೆ ಸಚಿವರಾದ ಅಶ್ವಿನ್‌ ವೈಷ್ಣವ್‌ ಅವರಿಗೆ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಮನವಿ ಫಲಪ್ರಧವಾಗಿದೆ.

ಮಾರ್ಚ್ 24 ರಂದು ರೈಲ್ವೆ ಸಚಿವಾಲಯ ಈ ಬಗ್ಗೆ ಆದೇಶ ಹೊರಡಿಸಿದೆ. ಈ ಮೂಲಕ ರಾಮನಗರದಿಂದ ನಿತ್ಯವೂ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಆಗಲಿದೆ. ಈ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 4 ರಂದು ಹೆಚ್.ಡಿ. ಕುಮಾರಸ್ವಾಮಿ ಅವರು ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.

ಪ್ರತಿನಿತ್ಯವೂ ರಾಮನಗರದಿಂದ ಸಾವಿರಾರು ಪ್ರಯಾಣಿಕರು ಬೆಂಗಳೂರಿಗೆ ಉದ್ಯೋಗ, ಶಿಕ್ಷಣ, ವ್ಯಾಪರ ಇತ್ಯಾದಿ ಉದ್ದೇಶಗಳಿಗೆ ಹೋಗಿ ಬರುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಗಾರ್ಮೆಂಟ್ಸ್ ಉದ್ಯಮದಲ್ಲಿ ಸಾವಿರಾರು ಮಹಿಳೆಯರು ಕೆಲಸಕ್ಕಾಗಿ ರಾಜಧಾನಿಗೆ ದಿನನಿತ್ಯವೂ ಹೋಗಿ ಬರುತ್ತಾರೆ. ಅಲ್ಲದೆ, ಶಿಕ್ಷಣಕ್ಕೆ ವಿದ್ಯಾರ್ಥಿಗಳು ಹೋಗಿ ಬರುತ್ತಾರೆ. ಕೂಲಿ ಕಾರ್ಮಿಕರಿಗೆ ಕೂಡ ಈ ರೈಲು ನಿಲುಗಡೆಯಿಂದ ಹೆಚ್ಚು ಪ್ರಯೋಜನ ಆಗಲಿದೆ ಎಂದು ಕುಮಾರಸ್ವಾಮಿ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಮನಗರದಲ್ಲಿ ಒಡೆಯರ್‌ ಎಕ್ಸ್‌ ಪ್ರೆಸ್‌ ರೇಲು ನಿಲುಗಡೆ ನೀಡಬೇಕು ಎಂಬುದು ಈ ಭಾಗರದ ದೀರ್ಘಕಾಲದ ಸಾರ್ವಜನಿಕ ಬೇಡಿಕೆ ಆಗಿತ್ತು. ಜನರ ಬೇಡಿಕೆಗೆ ಕೇಂದ್ರ ಸರಕಾರ ಸ್ಪಂದಿಸಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ದೊಡ್ಡ ಪ್ರಮಾಣದಷ್ಟು ಜನರು ಪ್ರಯಾಣ ಮಾಡುತ್ತಾರೆ. ರಾಜ್ಯದಲ್ಲಿಯೇ ಅತಿಹೆಚ್ಚು ಜನರು ಸಂಚರಿಸುವ ಕಾರಿಡಾರ್‌ಗಳಲ್ಲಿ ಇದೂ ಒಂದಾಗಿದ್ದು, ಈ ಉಪಕ್ರಮದಿಂದ ರಾಮನಗರ ಜಿಲ್ಲೆಯ ಜನರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಮೈಸೂರು ಮತ್ತು ಕೆಎಸ್‌ ಆರ್ ಬೆಂಗಳೂರು ನಡುವೆ ಒಡೆಯರ್ ಎಕ್ಸ್‌ಪ್ರೆಸ್‌ ರಾಮನಗರದಲ್ಲಿ ನಿಲ್ಲುತ್ತದೆ. ಈ ನಿಲುಗಡೆಗೆ ಅನುಮೋದನೆ ನೀಡಿದ ಕೇಂದ್ರದ ರೇಲ್ವೆ ಸಚಿವ ಅಶ್ವಿನ್‌ ವೈಷ್ಣವ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.‌ ಇತ್ತೀಚೆಗೆ ರೇಲ್ವೆ ಸಚಿವರ ಜತೆ ನಡೆದ ಭೇಟಿ ಸಂದರ್ಭದಲ್ಲಿ ಈ ಬಗ್ಗೆ ಮನವಿ ಮಾಡಲಾಗಿತ್ತು. ಈ ವಿನಂತಿ ಮೇರೆಗೆ ರೇಷ್ಮೆನಾಡು ರಾಮನಗರ ಜಿಲ್ಲೆಯ ರೇಲು ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಪ್ರಧಾನಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ರಾಷ್ಟ್ರದ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸಲಾಗುತ್ತಿದೆ ಎಂದು ಕೇಂದ್ರ ಸಚಿವ
ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.


Share

You cannot copy content of this page