ಸಮಗ್ರ ಸುದ್ದಿ

ರಾಜ್ಯದಲ್ಲಿ ವಾಣಿಜ್ಯ ಎಲ್.ಪಿ.ಜಿ ಪೂರೈಕೆ ಶೇ. 68ಕ್ಕೆ ಏರಿಕೆ: ಸಚಿವ ಕೆ.ಹೆಚ್.ಮುನಿಯಪ್ಪ ಮಾಹಿತಿ

Share

​ಬೆಂಗಳೂರು: ದೇಶಾದ್ಯಂತ ಉಂಟಾಗಿರುವ ಎಲ್.ಪಿ.ಜಿ ಕೊರತೆಯ ನಡುವೆ ಕರ್ನಾಟಕದ ವಾಣಿಜ್ಯ ಬಳಕೆದಾರರಿಗೆ ಸಮಾಧಾನಕರ ಸುದ್ದಿಯೊಂದು ಲಭಿಸಿದೆ. ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯಕ್ಕೆ ವಾಣಿಜ್ಯ ಸಿಲಿಂಡರ್ ಪೂರೈಕೆಯನ್ನು ಇದೀಗ ಶೇ. 68% ಕ್ಕೆ ಹೆಚ್ಚಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
​ಈ ಹೆಚ್ಚುವರಿ ಪೂರೈಕೆಯ ಹಿನ್ನೆಲೆಯಲ್ಲಿ, ಮಾರ್ಚ್ 29 ರಿಂದ ಅನ್ವಯವಾಗುವಂತೆ ವಿವಿಧ ವಲಯಗಳಿಗೆ ಆದ್ಯತೆಯ ಮೇರೆಗೆ ಸಿಲಿಂಡರ್ ಹಂಚಿಕೆಯನ್ನು ಪರಿಷ್ಕರಿಸಲಾಗಿದೆ.

​ಸರ್ಕಾರವು ವಿವಿಧ ಕ್ಷೇತ್ರಗಳನ್ನು 5 ಆದ್ಯತಾ ವಲಯಗಳಾಗಿ ವಿಂಗಡಿಸಿ ಪ್ರತಿದಿನ ಸಿಲಿಂಡರ್ ಹಂಚಿಕೆ ಮಾಡಿದೆ.

​ಆದ್ಯತೆ 1 (4,200 ಸಿಲಿಂಡರ್): ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳು ಮತ್ತು ಆಸ್ಪತ್ರೆಗಳು.
​ಆದ್ಯತೆ 2 (1,200 ಸಿಲಿಂಡರ್): ಸರ್ಕಾರಿ ಕಚೇರಿಗಳು, ಪಿ.ಎಸ್.ಯು ಸಂಸ್ಥೆಗಳು, ವಿಮಾನ ನಿಲ್ದಾಣ ಹಾಗೂ ರೈಲು/ಬಸ್ ನಿಲ್ದಾಣದ ಕ್ಯಾಂಟೀನ್ ಗಳು.
​ಆದ್ಯತೆ 3 (17,500 ಸಿಲಿಂಡರ್): ಹೋಟೆಲ್, ರೆಸ್ಟೋರೆಂಟ್, ಕಾರ್ಖಾನೆಗಳು, ಕೆ.ಎಂ.ಎಫ್ ಡೈರಿ ಮತ್ತು ಪಿ.ಜಿಗಳು.
​ಆದ್ಯತೆ 4 (6,000 ಸಿಲಿಂಡರ್): ಕೃಷಿ ಸಂಬಂಧಿತ ಕ್ಷೇತ್ರಗಳು, ಮೀನುಗಾರಿಕೆ, ಕೋಳಿ ಮತ್ತು ರೇಷ್ಮೆ ಸಾಕಣೆ ಹಾಗೂ ಔಷಧೋದ್ಯಮ.
​ಆದ್ಯತೆ 5 (563 ಸಿಲಿಂಡರ್): ಇತರ ಅವಶ್ಯಕತೆಗಳ ಆಧಾರದ ಮೇಲೆ ವಿವರಿಸಲಾಗುತ್ತದೆ ಎಂದು ತಿಳಿಸಿದರು.

ಆಟೋ ಎಲ್.ಪಿ.ಜಿ ಮತ್ತು ಇತರ ವಲಯಗಳಿಗೆ ಹಳೆಯ ಆದೇಶದಂತೆಯೇ ಸರಬರಾಜು ಮುಂದುವರಿಯಲಿದೆ.

ಕಾಳಸಂತೆ ಮಾರಾಟಗಾರರಿಗೆ ಎಚ್ಚರಿಕೆ

​ಕೆಲವು ಖಾಸಗಿ ವಿತರಕರು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಗೃಹಬಳಕೆ ಅಥವಾ ವಾಣಿಜ್ಯ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಪರವಾನಗಿ ರದ್ದುಗೊಳಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಎಲ್ಲಾ ವಿತರಕರು ಕಡ್ಡಾಯವಾಗಿ ಸರ್ಕಾರ ನಿಗದಿಪಡಿಸಿದ ದರದಲ್ಲೇ ಸಿಲಿಂಡರ್ ಮಾರಾಟ ಮಾಡಬೇಕು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿ ರಚಿಸಲಾಗಿದ್ದು, ನಿರಂತರ ದಾಳಿ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ.

ಸಾರ್ವಜನಿಕರಲ್ಲಿ ಮನವಿ

​ವಾಣಿಜ್ಯ ಬಳಕೆದಾರರು ಮತ್ತು ಹೋಟೆಲ್ ಮಾಲೀಕರು ಅನಾವಶ್ಯಕವಾಗಿ ಮುಂಗಡ ಬುಕಿಂಗ್ ಮಾಡಬಾರದೆಂದು ಸಚಿವರು ವಿನಂತಿಸಿದ್ದಾರೆ. ಅಲ್ಲದೆ, ಸಾಧ್ಯವಾದಷ್ಟು ಪಿ.ಎನ್.ಜಿ, ಸೋಲಾರ್ ಅಡುಗೆ ವ್ಯವಸ್ಥೆ ಹಾಗೂ ವಿದ್ಯುತ್ ಸ್ಟೌವ್‌ಗಳನ್ನು ಬಳಸುವಂತೆ ಸಚಿವರು ಸಲಹೆ ನೀಡಿದ್ದಾರೆ.


Share

You cannot copy content of this page