ಸಮಗ್ರ ಸುದ್ದಿ

ದೇಶದಲ್ಲಿ ‘ಸೌರಶಕ್ತಿ’ಯಂತೆ ”ಪಿ.ಎನ್.ಜಿ”ಗೆ ಪ್ರಾಶಸ್ತ್ಯ| 50 ಲಕ್ಷ ಹೊಸ ಪಿ.ಎನ್.ಜಿ ಸಂಪರ್ಕಕ್ಕೆ ಕೇಂದ್ರ ಸರ್ಕಾರ ಅಸ್ತು -ಸಚಿವ ಪ್ರಲ್ಹಾದ್ ಜೋಶಿ

Share

ನವದೆಹಲಿ: ಭಾರತ ಸಾಂಪ್ರದಾಯಿಕ ಇಂಧನ ಮೂಲಗಳಿಗೆ ಪರ್ಯಾಯವಾಗಿ “ಸೌರಶಕ್ತಿ”ಗೆ ಆದ್ಯತೆ ನೀಡುತ್ತಿರುವ ಬೆನ್ನಲ್ಲೇ ಇದೀಗ ಎಲ್.ಪಿ.ಜಿ ಗೆ ಪರ್ಯಾಯವಾಗಿ ಪಿ.ಎನ್.ಜಿ ಸಂಪರ್ಕಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಸಲಹೆಯಂತೆ 50 ಲಕ್ಷ ಹೊಸ ಪಿ.ಎನ್.ಜಿ. ಸಂಪರ್ಕ ಕಲ್ಪಿಸಲು ಕೇಂದ್ರ ನಿರ್ಣಯ ಕೈಗೊಂಡಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ “ಪೈಪ್ಡ್ ನೈಸರ್ಗಿಕ ಅನಿಲ (PNG) ಸೇವೆಗಳ ವಿಸ್ತರಣೆ ಮತ್ತು ಅಗತ್ಯ ಸೇವೆ ನಿರ್ವಹಣೆ” ಕುರಿತ ದುಂಡು ಮೇಜಿನ ಸಭೆಯಲ್ಲಿ ಕೇಂದ್ರ ಸರ್ಕಾರ ಈ ಮಹತ್ವಾಕಾಂಕ್ಷಿ ಗುರಿ ಸಾಧನೆಗೆ ನಿರ್ಣಯಿಸಿತು.

ಜಾಗತಿಕ ಯುದ್ಧ ಬಿಕ್ಕಟ್ಟಿನ ಪ್ರಸ್ತುತ ಸನ್ನಿವೇಶದಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸಮ್ಮುಖದಲ್ಲಿ ವಿವಿಧ ರಾಜ್ಯಗಳ ಪ್ರತಿನಿಧಿಗಳೊಂದಿಗೆ ನಡೆದ ದುಂಡು ಮೇಜಿನ ಸಭೆಯಲ್ಲಿ ಪಿ.ಎನ್.ಜಿ ಸಂಪರ್ಕ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಅಲ್ಲದೆ, ರಾಜ್ಯ ಹಾಗೂ ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳು ಸಹ ಪಿ.ಎನ್.ಜಿ ಅಳವಡಿಕೆ ಉತ್ತೇಜಿಸಲು ಒಮ್ಮತದ ವ್ಯಕ್ತವಾಗಿದೆ.

ವಿಶೇಷವಾಗಿ ಈಗಾಗಲೇ ಮೂಲಸೌಕರ್ಯ ಲಭ್ಯವಿರುವ ಪ್ರದೇಶಗಳಲ್ಲಿ ಎಲ್.ಪಿ.ಜಿ ಗೆ ಬದಲಾಗಿ ಪಿ.ಎನ್.ಜಿ ಸಂಪರ್ಕ ತ್ವರಿತಗೊಳಿಸುವಂತೆ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದರು. ಅದರಂತೆ ಪ್ರಥಮದಲ್ಲಿ ಶಾಲಾ-ಕಾಲೇಜು, ಸಾರ್ವಜನಿಕ ಸಂಸ್ಥೆಗಳಲ್ಲಿ ಪಿ.ಎನ್.ಜಿ ಗೆ ಆದ್ಯತೆ ನೀಡಲಾಯಿತು.

ದೇಶಾದ್ಯಂತ ಪಿ.ಎನ್.ಜಿ ಸಂಪರ್ಕ ಜಾಲ ವಿಸ್ತರಣೆಗೆ ಆಯಾ ರಾಜ್ಯಗಳು ಒತ್ತು ನೀಡಬೇಕು ಮತ್ತು ಮೇಲ್ವಿಚಾರಣೆ ಕೈಗೊಳ್ಳಬೇಕು. ಹಂತ ಹಂತವಾಗಿ ಕಾರ್ಯವಿಧಾನಗಳನ್ನು ಬಲಪಡಿಸಬೇಕು. ಅಲ್ಲದೆ, ಗ್ರಾಹಕರು ಎಲ್.ಪಿ.ಜಿ ಯಿಂದ ಪಿ.ಎನ್.ಜಿ ಗೆ ಪರಿವರ್ತನೆಗೊಳ್ಳಲು ಅಗತ್ಯ ಪ್ರೋತ್ಸಾಹ ನೀಡಬೇಕೆಂದು ಸಚಿವ ಜೋಶಿ ಅವರು ದುಂಡು ಮೇಜಿನ ಸಭೆಯಲ್ಲಿ ಗಮನ ಸೆಳೆದರು.

ರಚನಾತ್ಮಕ ಪರಿವರ್ತನೆಗೆ ಸಮ್ಮತಿ: ದೇಶದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ, ಮೂಲಸೌಕರ್ಯ ಹೊಂದಿರುವ ಪ್ರದೇಶಗಳಲ್ಲಿ ಎಲ್.ಪಿ.ಜಿ ಯಿಂದ ಪಿ.ಎನ್.ಜಿ ಗೆ ಹಂತ ಹಂತವಾಗಿ ರಚನಾತ್ಮಕ ಪರಿವರ್ತನೆ ಹಾಗೂ ಸುಗಮ ಅನುಷ್ಠಾನಕ್ಕಾಗಿ ನಗರಾಭಿವೃದ್ಧಿ ಇಲಾಖೆಗಳು, ಪುರಸಭೆ ಸಂಸ್ಥೆಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳ ನಡುವೆ ಸಮನ್ವಯದ ಮಹತ್ವವನ್ನು ಒತ್ತಿ ಹೇಳಿದರು.

ಈ ಮಹತ್ವದ ಸಭೆಯಲ್ಲಿ ರಾಜ್ಯಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಪಿ.ಎನ್.ಜಿ ಅನುಮೋದನೆ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಪರಿಣಾಮಕಾರಿ ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲು ಒಪ್ಪಿಕೊಂಡಿವೆ. ಸಿಜಿಡಿ ಘಟಕಗಳು ಮತ್ತು ಪುರಸಭೆ ಆಯುಕ್ತರು ಪಿ.ಎನ್.ಜಿ ಸಂಪರ್ಕಕ್ಕೆ ಎದುರಾಗುವ ಸವಾಲುಗಳನ್ನು ಪರಿಹರಿಸಿ ಯೋಜನೆ ವಿಸ್ತರಣೆಗೆ ಸಹಕರಿಸಬೇಕು ಎಂದು ಸೂಚಿಸಲಾಯಿತು.

ಕ್ರಿಯಾ ಯೋಜನೆ, ಕಾರ್ಯ ತಂಡ ರಚನೆ: ಬಾಕಿ ಇರುವ ಅನುಮೋದನೆಗಳು ಮತ್ತು ಪಿ.ಎನ್.ಜಿ. ನೆಟ್‌ವರ್ಕ್ ವಿಸ್ತರಣೆ ತ್ವರಿತಗೊಳಿಸುವಲ್ಲಿ ಸಕಾಲಿಕವಾಗಿ ರಚನಾತ್ಮಕ ಕ್ರಿಯಾ ಯೋಜನೆ ಅಳವಡಿಕೆ, ಸ್ಥಳೀಯವಾಗಿ ಕಾರ್ಯ ತಂಡಗಳ ಸ್ಥಾಪನೆ ಮತ್ತು ನಿಯಮಿತ ಮೇಲ್ವಿಚಾರಣೆ, ಪರಿಶೀಲನಾ ಕಾರ್ಯವಿಧಾನಗಳನ್ನು ಜಾರಿಗೆ ತರಲು ದುಂಡು ಮೇಜಿನ ಸಭೆ ಒಪ್ಪಿಗೆ ಸೂಚಿಸಿತು.

ಅಕ್ರಮ ಸಂಗ್ರಹಣೆ ವಿರುದ್ಧ ಬಿಗಿ ಕ್ರಮ: ಜಾಗತಿಕ ಯುದ್ಧ ಬಿಕ್ಕಟ್ಟಿನ ಹಿನ್ನಲೆಯಲ್ಲಿ ದೇಶಾದ್ಯಂತ ಯಾರೂ ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು, ಸಂಗ್ರಹಣೆ ಮಾಡುವಂತಿಲ್ಲ. ಇಂಥದ್ದರ ಮೇಲೆ ಸೂಕ್ತ ನಿಗಾವಹಿಸುವಂತೆ ಸಚಿವ ಪ್ರಲ್ಹಾದ ಜೋಶಿ ಅವರು ಇದೇ ವೇಳೆ ರಾಜ್ಯಗಳ ಪ್ರತಿನಿಧಿಗಳಿಗೆ ಸೂಚನೆ ಸಹ ನೀಡಿದರು.

ಎಲ್ಲಾ ರಾಜ್ಯಗಳಾದ್ಯಂತ ಪುರಸಭೆ ಆಯುಕ್ತರು ಅಗತ್ಯ ವಸ್ತುಗಳ ದೈನಂದಿನ ಬೆಲೆ ಮತ್ತು ಲಭ್ಯತೆ ಕುರಿತಂತೆ ಮೇಲ್ವಿಚಾರಣೆ ಮಾಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಇಂಧನ ಸುರಕ್ಷತೆ ಮತ್ತು ಸ್ಥಿತಿಸ್ಥಾಪಕತ್ವ ಹೆಚ್ಚಿಸಲು PNG ಮೂಲಸೌಕರ್ಯ ಬಲಪಡಿಸುವ ಬಗ್ಗೆ ಗಮನ ಸೆಳೆದರು. ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಅವರು ಆರ್ಥಿಕ ಬೆಳವಣಿಗೆ ಎಂಜಿನ್‌ಗಳಾಗಿ ನಗರಗಳ ನಿರ್ಣಾಯಕ ಪಾತ್ರದ ಬಗ್ಗೆ ತಿಳಿಸಿದರು.

ಈ ದುಂಡು ಮೇಜಿನ ಸಭೆಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯಗಳ ಕೇಂದ್ರ ಸಚಿವರು, ಕಾರ್ಯದರ್ಶಿಗಳು, ಕೇಂದ್ರದ ಹಿರಿಯ ಅಧಿಕಾರಿಗಳು, ರಾಜ್ಯ ಸಚಿವರು, ನಗರಾಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳ ರಾಜ್ಯ ಕಾರ್ಯದರ್ಶಿಗಳು, ಪುರಸಭೆ ಆಯುಕ್ತರು, GAIL, ಇಂಡಿಯನ್ ಆಯಿಲ್‌ನ ಸಿಎಂಡಿ ಗಳು ಮತ್ತು ನಗರ ಅನಿಲ ವಿತರಣಾ ಘಟಕಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
 
ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರ, ಹರಿಯಾಣ ಮತ್ತು ಒಡಿಶಾ ಸೇರಿದಂತೆ ಹಲವಾರು ರಾಜ್ಯಗಳ ಸಚಿವರು ಖುದ್ದಾಗಿ ಹಾಜರಿದ್ದರೆ, ಭಾಗವಹಿಸಿದ್ದರೆ, ತೆಲಂಗಾಣ, ಕರ್ನಾಟಕ ಮತ್ತು ರಾಜಸ್ಥಾನದ ಪ್ರತಿನಿಧಿಗಳು ವರ್ಚುವಲ್ ಆಗಿ ದುಂಡುಮೇಜಿನ ಅಧಿವೇಶನದಲ್ಲಿ ಭಾಗಿಯಾಗಿದ್ದರು.


Share

You cannot copy content of this page