ಬೆಂಗಳೂರು: ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಮೂಲ ನೆಲೆಯಾದ ಬೀದರ್ ಜಿಲ್ಲೆ ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪಕ್ಕೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಮತ್ತೆ 55 ಕೋಟಿ ರೂ. ಬಿಡುಗಡೆ ಮಾಡಿಸಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಅನುಭವ ಮಂಟಪ ಕಾಮಗಾರಿಯನ್ನು ಮುಂದಿನ ವರ್ಷದೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಸಂಕಲ್ಪಿಸಿದ್ದು, ಬಸವ ತತ್ವ ಅನುಯಾಯಿಗಳಾದ ಮುಖ್ಯಮಂತ್ರಿಗಳು ತಮ್ಮ ಕೋರಿಕೆಯ ಮೇರೆಗೆ 2023ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಒಟ್ಟು 280 ಕೋಟಿ ರೂ. ಬಿಡುಗಡೆ ಮಾಡಿದ್ದು, ಎಲ್ಲ ಬಸವಭಕ್ತರ ಮತ್ತು ಬೀದರ್ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಅನುಭವ ಮಂಟಪ ಕಾಮಗಾರಿಗೆ ವೇಗ ನೀಡಲು ಹಣ ಬಿಡುಗಡೆ ಮಾಡುವಂತೆ ತಾವು ಮಾಡಿಕೊಂಡ ಮನವಿಯ ಮೇರೆಗೆ ಮಾರ್ಚ್ 20ರಂದು 50 ಕೋಟಿ ರೂ. ಬಿಡುಗಡೆ ಮಾಡಿದ್ದ ಮುಖ್ಯಮಂತ್ರಿಗಳು ಈಗ ಮತ್ತೆ 55 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.
12ನೇ ಶತಮಾನದಲ್ಲಿ ಬಸವಾದಿ ಶರಣರು ಯಾವುದೇ ಜಾತಿ ಭೇದ, ಲಿಂಗಭೇದವಿಲ್ಲದೆ ಸರ್ವರಿಗೂ ಸಮಾನ ಅವಕಾಶ ನೀಡಿ ಸಮಾಜದ ಹಿತಕ್ಕಾಗಿ ಚಿಂತನ ಮಂಥನ ನಡೆಸುತ್ತಿದ್ದ ಧರ್ಮ ಸಂಸತ್ತು ಅನುಭವ ಮಂಟಪವಿದ್ದ ಬಸವ ಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣ ಮಾಡಬೇಕು ಎಂಬ ತಮ್ಮ ನೇತೃತ್ವದ ನಿಯೋಗದ ಮನವಿಗೆ ಸಮ್ಮತಿಸಿ, 2013ರಿಂದ 2018ರವರೆಗೆ ಪ್ರಥಮ ಬಾರಿಗೆ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅನುಮೋದನೆ ನೀಡಿ, ಬಜೆಟ್ ಘೋಷಣೆ ಮಾಡಿದ್ದ ಸಿದ್ದರಾಮಯ್ಯನವರು ಈಗ ಕಾಮಗಾರಿ ತ್ವರಿತಗತಿಯಲ್ಲಿ ನಡೆಯಲು ಅಗತ್ಯ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಬಸವ ಕಲ್ಯಾಣದಲ್ಲಿ ಅನುಭವ ಮಂಟಪದ ಶೇ. 70ರಷ್ಟು ಕಾಮಗಾರಿ ಮುಗಿದಿದ್ದು, ಉಳಿಕೆ ಕಾಮಗಾರಿ ಪ್ರಗತಿಯಲ್ಲಿದೆ ಮುಖ್ಯಮಂತ್ರಿಗಳು 2024ರ ಮಾರ್ಚ್ 6ರಂದು 100 ಕೋಟಿ, 2025ರ ಫೆ.25ರಂದು 10 ಕೋಟಿ, ಮಾರ್ಚ್ 17ರಂದು 15 ಕೋಟಿ, 2025ರ ಅಕ್ಟೋಬರ್ ನಲ್ಲಿ 50 ಕೋಟಿ ಕಳೆದ ತಿಂಗಳ 20ರಂದು ಮತ್ತೆ 50 ಕೋಟಿ ಬಿಡುಗಡೆ ಮಾಡಿದ್ದರು. ಈಗ ಆರ್ಥಿಕ ವರ್ಷದ ಕೊನೆಯ ದಿನ ಅದರೆ ಮಾರ್ಚ್ 31ರಂದು ಮತ್ತೆ 55 ಕೋಟಿ ಬಿಡುಗಡೆ ಮಾಡಿದ್ದು, ಒಟ್ಟಾರೆ 280 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ವಿವರ ನೀಡಿದ್ದಾರೆ.
770 ಅಮರ ಗಣಂಗಳ ಹೆಸರಲ್ಲಿ ಕಂಬಗಳನ್ನು ನಿರ್ಮಿಸಿ ಅದರಲ್ಲಿ ಅವರ ವಚನಗಳನ್ನು ಕೆತ್ತಿಸುವುದರ ಜೊತೆಗೆ ವೈಜ್ಞಾನಿಕವಾಗಿ ಇಷ್ಟಲಿಂಗ ಪೂಜೆ ಮಾಡುವ ವ್ಯವಸ್ಥೆಯೂ ಇರುವ ಆಧುನಿಕ ಅನುಭವ ಮಂಟಪ ಜಗತ್ತಿನ ಆಕರ್ಷಕ ಮತ್ತು ಪ್ರಮುಖ ಆಧ್ಯಾತ್ಮಿಕ ತಾಣವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ.
