ಸಮಗ್ರ ಸುದ್ದಿ

ಮಂಡ್ಯ ARAI ಪರೀಕ್ಷಾ ಕೇಂದ್ರಕ್ಕೆ ಮೇ ತಿಂಗಳಲ್ಲಿ ಶಿಲಾನ್ಯಾಸ|ಜಾಗ ಬೇಗ ಕೊಟ್ಟರೆ ನಿಗದಿಯಂತೆ ಭೂಮಿಪೂಜೆ; ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

Share

ಮಂಡ್ಯ: ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರಕ್ಕೆ ಮುಂಬರುವ ಮೇ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸುತ್ತೇವೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

ರಾಜ್ಯ ಸರಕಾರ ನೀಡಲು ಉದ್ದೇಶಿಸಿರುವ ಸ್ಥಳಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳು ವರದಿ ನೀಡುವುದು ಬಾಕಿ ಇದ್ದು, ಇನ್ನೊಂದು ವಾರದಲ್ಲಿ ಅವರು ವರದಿ ನೀಡುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಪಾಂಡವಪುರದ ಟಿಎಸ್ ಛತ್ರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಮಾಧ್ಯಮಗಳ ಜತೆ ಸಚಿವ ಕುಮಾರಸ್ವಾಮಿ ಅವರು ಮಾತಾಡಿದರು.

ಸರ್ಕಾರ ಎಷ್ಟು ದಿನಗಳಲ್ಲಿ ಸ್ಥಳವನ್ನು ಅಭಿವೃದ್ಧಿಸಿ ನೀಡಲಿದೆ ಎಂಬುದು ಹೇಳಬೇಕು. ಇಂತಹ ಪರೀಕ್ಷಾ ಕೇಂದ್ರವು ಕರ್ನಾಟಕಕ್ಕೆ ಪ್ರಪ್ರಥಮವಾಗಿ ಬರುತಿದೆ. ಮಂಡ್ಯದಲ್ಲಿ ಈ ಪರೀಕ್ಷಾ ಕೇಂದ್ರ ಸ್ಥಾಪನೆಯಾದರೆ ಮಂಡ್ಯ ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳ ಅಭಿವೃದ್ಧಿ ಮತ್ತು ಇಡೀ ರಾಜ್ಯದಲ್ಲಿ ಆಟೋಮೊಬೈಲ್ ಕ್ಷೇತ್ರ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದು ಸಚಿವರು ಹೇಳಿದರು.

ARAI ಪರೀಕ್ಷಾ ಕೇಂದ್ರ ಸ್ಥಾಪನೆಯಿಂದ ರಾಜ್ಯದಲ್ಲಿ ಮಂಡ್ಯ ಪ್ರಮುಖ ನಗರವಾಗಿ ಬೆಳೆಯುತ್ತದೆ. ಈ ರೀತಿಯ ಯೋಜನೆಗಳನ್ನು ತರಬೇಕಾದರೆ ರಾಜ್ಯ ಸರ್ಕಾರದ ಸಹಕಾರ ಅತ್ಯಗತ್ಯ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಹಕಾರವು ಮುಖ್ಯವಾಗಿರುತ್ತದೆ. ರಾಜ್ಯ ಸರ್ಕಾರದ ಸಹಕಾರದಿಂದ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ದೇಶದಲ್ಲಿ ಕೆಲವು ಕಡೆ ಮಾತ್ರ ಇಂತಹ ಪರೀಕ್ಷಾ ಕೇಂದ್ರಗಳು ಇವೆ. ಪುಣೆ, ಚೆನ್ನೈ, ಮಾನೇಸರ್ ನಲ್ಲಿ ಮಾತ್ರ ಈ ಕೇಂದ್ರಗಳಿವೆ. ಇಂಥ ಪರೀಕ್ಷೆ ಕೇಂದ್ರಗಳು ನಮ್ಮ ರಾಜ್ಯಕ್ಕೂ ಬರಲಿ ಎಂದು ಅನೇಕ ರಾಜ್ಯಗಳು ಪೈಪೋಟಿ ನಡೆಸುತ್ತಿವೆ. ಆದ್ದರಿಂದ ಇಂತಹ ಒಳ್ಳೆಯ ಅವಕಾಶವನ್ನು ನಾವು ಕೈ ಚೆಲ್ಲುವುದು ಬೇಡ. ಮಂಡ್ಯ ಮತ್ತು ಕರ್ನಾಟಕದ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ಯೋಜನೆಯು ಕಾರ್ಯಗತ ಆಗಬೇಕು. ಆಟೋಮೊಬೈಲ್ ಕ್ಷೇತ್ರದಲ್ಲಿ ಕರ್ನಾಟಕವು ಮುಂಚೂಣಿ ರಾಜ್ಯವಾಗಿ ಬೆಳೆಯಬೇಕು ಎಂಬುದೇ ನನ್ನ ಆಶಯವಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಸಂಕಷ್ಟ ಸ್ಥಿತಿಯನ್ನು ಕೇಂದ್ರ ಉತ್ತಮವಾಗಿ ನಿಭಾಯಿಸುತ್ತಿದೆ:

ಕೊಲ್ಲಿ ಯುದ್ಧದ ಪರಿಣಾಮ ಇಡೀ ಜಗತ್ತಿನ ಮೇಲೆ ಇದೆ. ಅನೇಕ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಭಾರತ ಮಾತ್ರ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಸಚಿವರು ಹೇಳಿದರು.

ಕೆಲ ದೇಶಗಳಲ್ಲಿ ಲಾಕ್ ಡೌನ್ ಪರಿಸ್ಥಿತಿ ಸೃಷ್ಟಿಯಾಗಿದೆ. ಭಾರತದಲ್ಲಿ ಇಂಥ ಪರಿಸ್ಥಿತಿ ಇಲ್ಲ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಉತ್ತಮವಾಗಿ ಕೆಲಸ ಮಾಡುತ್ತಿದೆ. ಅವರ ಕಾಲದಲ್ಲಿ ಭಾರತ ಮತ್ತು ಜಾಗತಿಕ ಸಂಬಂಧಗಳು ಗಣನೀಯವಾಗಿ ಸುಧಾರಿಸಿವೆ ಎಂಬುದನ್ನು ಮರೆಯುವಂತಿಲ್ಲ. ಕಳೆದ 11 ವರ್ಷಗಳಲ್ಲಿ ಅನೇಕ ದೇಶಗಳ ಜೊತೆ ಭಾರತವು ಅತ್ಯುತ್ತಮ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಸಾಧಿಸಿದೆ. ಸುಖಾ ಸುಮ್ಮನೆ ಕಾಂಗ್ರೆಸ್ ಪಕ್ಷವು ಅಡುಗೆ ಅನಿಲ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ತೀವ್ರವಾಗಿ ಟೀಕಿಸಿದರು.


Share

You cannot copy content of this page