ಬೆಂಗಳೂರು:ಹಳೆ ಮದ್ರಾಸ್ ರಸ್ತೆಯಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿರುವವರ ವಿರುದ್ಧ ದಂಡ ವಿಧಿಸಿ ತೆರವು ಕಾರ್ಯಾಚರಣೆ ನಡೆಸುವುದರ ಜೊತೆಗೆ, ಸುಗಮ ಪಾದಚಾರಿ ಮಾರ್ಗವನ್ನು ನಿರ್ಮಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಹಳೆ ಮದ್ರಾಸ್ ರಸ್ತೆಯ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಹಲಸೂರು ಕೆರೆವರೆಗೆ ಇಂದು ಅಧಿಕಾರಿಗಳೊಂದಿಗೆ ನಡಿಗೆ ಮೂಲಕ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು.
ಪಾದಚಾರಿ ಮಾರ್ಗಗಳಲ್ಲಿ ತಂಡಗಳನ್ನು ನಿಯೋಜಿಸಿ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು. ಪಾದಚಾರಿ ಮಾರ್ಗಗಳನ್ನು ಧೂಳು ಸೇರಿದಂತೆ ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಸುಂದರವಾಗಿ ಕಾಣುವಂತೆ ಮಾಡಬೇಕು. ಎಲ್ಲೆಲ್ಲಿ ತ್ಯಾಜ್ಯ ಹಾಗೂ ಭಗ್ನಾವಶೇಷಗಳಿದ್ದರೂ ಕೂಡಲೇ ಅವನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು.
ಪಾದಚಾರಿ ಮಾರ್ಗಗಳಲ್ಲಿ ಹಾನಿಗೊಳಗಾದ ಸ್ಲ್ಯಾಬ್‌ಗಳು ಮತ್ತು ಕರ್ಬ್ ಸ್ಟೋನ್‌ಗಳನ್ನು ದುರಸ್ತಿಗೊಳಿಸಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಳೆ ಮದ್ರಾಸ್ ರಸ್ತೆಯ ಎಂಇಜಿ ತಡೆಗೋಡೆ ಮುರಿದಿರುವ ಭಾಗದಲ್ಲಿ ತ್ಯಾಜ್ಯವನ್ನು ಬಿಸಾಡುತ್ತಿರುವುದು ಹಾಗೂ ಗೋಡೆಯ ಮೇಲ್ಭಾಗದಲ್ಲಿ ಪಾದಚಾರಿ ಮಾರ್ಗದ ಕಡೆಗೆ ತಾಗುವ ರೀತಿಯಲ್ಲಿ ಕಬ್ಬಿಣದ ತಂತಿಗಳು ಇರುವುದನ್ನು ಗಮನಿಸಿ, ಇದರಿಂದ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟವರಿಗೆ ದೂರವಾಣಿ ಮೂಲಕ ತಕ್ಷಣ ಸರಿಪಡಿಸಲು ಸೂಚನೆ ನೀಡಿದರು.
ಹಳೆ ಮದ್ರಾಸ್ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದ ಬಳಿ ಪಾದಚಾರಿ ಮಾರ್ಗದಲ್ಲಿ ನರ್ಸರಿ, ಗ್ರಾನೈಟ್ ಮಳಿಗೆ ಹಾಗೂ ಮರ್ಪಿ ರಸ್ತೆಯಲ್ಲಿ ಸಂಪೂರ್ಣವಾಗಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಿ, ಒತ್ತುವರಿ ಮಾಡಿದವರಿಗೆ ದಂಡ ವಿಧಿಸಲು ಸೂಚನೆ ನೀಡಿದರು. ಜೊತೆಗೆ ಪಾದಚಾರಿಗಳಿಗೆ ತಾಗುವ ರೀತಿಯಲ್ಲಿರುವ ಮರದ ರೆಂಬೆ/ಕೊಂಬೆಗಳನ್ನು ತೆರವುಗೊಳಿಸಲು ನಿರ್ದೇಶನ ನೀಡಿದರು.
ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಮಾತನಾಡಿ, ಹಲಸೂರು ಕೆರೆಯಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸವಿಸ್ತಾರ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿ ವಿವರಿಸಬೇಕು. ಜೊತೆಗೆ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಲು ನಾಮಫಲಕಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಲಸೂರು ಕೆರೆ ಸಮಗ್ರ ಅಭಿವೃದ್ಧಿ:
ಹಲಸೂರು ಕೆರೆ 106 ಎಕರೆ ಪ್ರದೇಶದಲ್ಲಿದ್ದು, 33.50 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅದರಡಿಯಲ್ಲಿ ಕೆರೆಯಲ್ಲಿ ಹೂಳೆತ್ತುವುದು, ಎರಡು ಹಂತದ ವಾಯುವಿಹಾರ ಮಾರ್ಗ ಅಭಿವೃದ್ಧಿ, ಗ್ರಿಲ್ ಅಳವಡಿಕೆ, ಇನ್‌ಲೆಟ್ ಬಾಕ್ಸ್ ಕಲ್ವರ್ಟ್ ನಿರ್ಮಾಣ, 6 ಐಲ್ಯಾಂಡ್‌ಗಳ ದುರಸ್ತಿ, ಬಂಡ್ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಳೆಗಾಲಕ್ಕೂ ಮುನ್ನ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದರು.
ಕೆರೆಗೆ ಹೊಂದಿಕೊಂಡಿರುವ ಉದ್ಯಾನವನಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಹಳೆಯ ಕಲ್ಯಾಣಿಯನ್ನು ತೆರವುಗೊಳಿಸಿ ಹೊಸದಾಗಿ ಕಲ್ಯಾಣಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಳೆ ಮದ್ರಾಸ್ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಬಿದಿರು ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು.ಟ್ರಾಕ್ಟರ್‌ಗಳ ಬದಲು ಟಿಪ್ಪರ್‌ಗಳನ್ನು ಖರೀದಿಸಿ ಸ್ವಚ್ಛತಾ ಕಾರ್ಯಗಳಿಗೆ ಬಳಸಬೇಕು.ರಸ್ತೆ ಬದಿಯ ಶೋಲ್ಡರ್ ಡ್ರೇನ್‌ಗಳಲ್ಲಿ ಮಳೆಗಾಲಕ್ಕೂ ಮುನ್ನ ಹೂಳೆತ್ತಬೇಕು.
100 ಅಡಿ ರಸ್ತೆ ಜಂಕ್ಷನ್‌ನ ಮೆಟ್ರೋ ಜಾಗದಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡವನ್ನು ಮೆಟ್ರೋ ಅಧಿಕಾರಿಗಳು ಕೂಡಲೇ ತೆರವುಗೊಳಿಸಬೇಕು. ಜಲಮಂಡಳಿಯ ವಾಲ್‌ನಿಂದ ರಸ್ತೆ ಕುಸಿತ ಉಂಟಾಗಿರುವುದನ್ನು ಸರಿಪಡಿಸಬೇಕು. ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ತೆರವುಗೊಳಿಸಿ, ಸಂಬಂಧಪಟ್ಟವರಿಗೆ ದಂಡ ವಿಧಿಸಬೇಕು ಎಂದರು.
ಈ ಸಂದರ್ಭದಲ್ಲಿ ಕೇಂದ್ರ ನಗರ ಪಾಲಿಕೆ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಕಂದಾಯ ಅಪರ ಆಯುಕ್ತರಾದ ಕೆ. ರಂಗನಾಥ್, ಹೇಮಂತ್ ಶರಣ್, ಬೆಂ.ಘ.ತ್ಯಾ.ನಿ.ನಿದ ಸಿ.ಇ.ಓ ರಮಾಮಣಿ, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
