ಸಮಗ್ರ ಸುದ್ದಿ

ಅಭಿವೃದ್ಧಿ ವಿಷಯದಲ್ಲಿ ನಾನು ಸದಾ ರಾಜ್ಯ ಸರ್ಕಾರದ ಜೊತೆ ನಿಲ್ಲುತ್ತೇನೆ – ಹೆಚ್.ಡಿ. ಕುಮಾರಸ್ವಾಮಿ |ಸಿಂಧನೂರಿನಲ್ಲಿ ಸೈನಿಕ ಶಾಲೆ ಉದ್ಘಾಟನೆ

Share

ರಾಯಚೂರು:ಜಿಲ್ಲೆಯ ಸಿಂಧನೂರು ಪಟ್ಟಣದ ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸೈನಿಕ ಶಾಲೆಯನ್ನು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರದ ರಕ್ಷಣಾ ಖಾತೆ ರಾಜ್ಯ ಸಚಿವರಾದ ಸಂಜಯ್ ಸೇಠ್ ಹಾಗೂ ಆಂಧ್ರ ಪ್ರದೇಶದ ಸಚಿವರಾದ ನಾ.ರಾ. ಲೋಕೇಶ್ ಅವರು ಉದ್ಘಾಟನೆ ನೆರವೇರಿಸಿದರು.

ಸಿಂಧನೂರು ಪಟ್ಟಣದಲ್ಲಿ ಶನಿವಾರ ನಡೆದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ನೂತನ ಸೈನಿಕ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಕುಮಾರಸ್ವಾಮಿಯವರು, ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸಾಟಿ ಇಲ್ಲದ ದೇಶವನ್ನಾಗಿ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಹುದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಇದರ ಭಾಗವಾಗಿಯೇ ಸಿಂಧನೂರಿಗೆ ಸೈನಿಕ ಶಾಲೆಯನ್ನು ಮಂಜೂರು ಮಾಡಲಾಗಿದೆ. ಇದಕ್ಕಾಗಿ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅದೇ ಸಚಿವಾಲಯದ ರಾಜ್ಯ ಸಚಿವರಾದ ಸಂಜಯ್ ಸೇಠ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುವೆ ಎಂದರು.

ಸಿಂಧನೂರಿನಲ್ಲಿ ಸೈನಿಕ ಶಾಲೆ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಈ ನಿಟ್ಟಿನಲ್ಲಿ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಅವರು ಸಾಕಷ್ಟು ಶ್ರಮಿಸಿದ್ದಾರೆ. ಇವತ್ತು ಆಂಧ್ರ ಪ್ರದೇಶದ ಸಚಿವರಾದ ನಾ.ರಾ. ಲೋಕೇಶ್ ಅವರು ಮತ್ತು ಕೇಂದ್ರದ ಸಚಿವರಾದ ಸಂಜಯ್ ಸೇಠ್ ಅವರು ಪಟ್ಟಣಕ್ಕೆ ಬಂದು ಶಾಲೆಗೆ ನಾಂದಿ ಹಾಡಿದ್ದಾರೆ. ರಾಯಚೂರು ಜಿಲ್ಲೆ ಮತ್ತು ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕಟ್ಟಿ ಬದ್ಧವಾಗಿದೆ ಎಂಬುದಕ್ಕೆ ಈ ಶಾಲೆಯ ಮಂಜೂರಾತಿಯೇ ಉದಾಹರಣೆ ಆಗಿದೆ ಎಂದರು.

ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರದ ಜತೆ ಇದ್ದೇನೆ:

ಅಭಿವೃದ್ಧಿ ವಿಷಯದಲ್ಲಿ ಯಾರು ರಾಜಕೀಯ ಮಾಡಬಾರದು. ಎಲ್ಲರೂ ಸಂಘಟಿತವಾಗಿ ಕೆಲಸ ಮಾಡಿದರೆ ಮಾತ್ರ ರಾಜ್ಯಕ್ಕೆ ಒಳ್ಳೆದಾಗುತ್ತದೆ. ಅಭಿವೃದ್ಧಿ ವಿಷಯದಲ್ಲಿ ನಾನು ಎಂದೆಂದಿಗೂ ರಾಜ್ಯ ಸರ್ಕಾರದ ಜೊತೆಗೆ ನಿಲ್ಲುತ್ತೇನೆ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.

ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಯ ಅನೇಕ ಕೆಲಸಗಳು ಆಗಬೇಕಿದೆ. ಅದಕ್ಕಾಗಿ ರಾಜಕೀಯ ಭಿನ್ನಮತ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ನನ್ನ ಕಡೆಯಿಂದ ಏನೇ ಕೆಲಸ ಆಗಬೇಕಿದ್ದರೂ ಯಾರೇ ಆಗಲಿ ನನ್ನನ್ನು ಮುಕ್ತವಾಗಿ ಸಂಪರ್ಕಿಸಬಹುದು. ರಾಜ್ಯಕ್ಕೆ ಒಳ್ಳೆಯದು ಮಾಡುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ ಎಂಬುದಾಗಿ ಸಚಿವರು ಹೇಳಿದರು.

ರಾಯಚೂರು ಜಿಲ್ಲೆಗೆ ಏಮ್ಸ್ (ಅಖಿಲ ಭಾರತ ವೈದ್ಯಕೀಯ ಸಂಸ್ಥೆ) ಬೇಕೆನ್ನುವ ಬೇಡಿಕೆ ಇದೆ. ಹಾಗೆಯೇ ತುಂಗಭದ್ರಾ ಜಲಾಶಯಕ್ಕೆ ಸಮಾನಂತರವಾಗಿ ನವಿಲೇ ಜಲಾಶಯ ನಿರ್ಮಾಣದ ಬೇಡಿಕೆ ಕೂಡ ಇದೆ. ಇವು ಸಣ್ಣ ಬೇಡಿಕೆಗಳಲ್ಲ. ಇವೆಲ್ಲವೂ ಈಡೇರಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಈ ಭಾಗದಲ್ಲಿ ಕೈಗಾರಿಕೆ ಬರಬೇಕು ಎಂದು ಇಲ್ಲಿನ ಶಾಸಕರು, ಹಿರಿಯರು ಆಗಿರುವ ಹಂಪನಗೌಡ ಬಾದರ್ಲಿ ಅವರು ಬೇಡಿಕೆ ಮಂಡಿಸಿದ್ದಾರೆ. ಅದಕ್ಕೆ ಸಂಸದರಾದ ಕುಮಾರ್ ನಾಯಕ ಅವರು ದನಿಗೂಡಿಸಿದ್ದಾರೆ. ಇದಕ್ಕೆ ನನ್ನ ಸಹಮತವೂ ಇದೆ. ಯಾವುದಾದರೂ ಒಂದು ಕೈಗಾರಿಕೆಯನ್ನು ಇಲ್ಲಿಗೆ ತರುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಿಮ್ಮ ಬೇಡಿಕೆಗೆ ಸ್ಪಂದಿಸುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು

ರಾಜಕೀಯ ಬೇರ, ಅಭಿವೃದ್ಧಿ ಬೇರೆ. ಅಭಿವೃದ್ಧಿ ವಿಷಯದಲ್ಲಿ ನಾನು ಯಾವಾಗಲೂ ರಾಜ್ಯದ ಸರ್ಕಾರ ಜತೆ ನಿಲ್ಲುತ್ತೇನೆ ಎಂದು ಕೇಂದ್ರ ಸಚಿವರು ಪುನರುಚ್ಚರಿಸಿದರು.

ನಾ.ರಾ. ಲೋಕೇಶ್ ಮೇಲೆ ಹೊರೆ ಹೊರೆಸುವುದು ಸರಿಯಲ್ಲ:

ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರವಾಗಿ ನವಿಲೇ ಜಲಾಶಯ ನಿರ್ಮಾಣ ಮಾಡಬೇಕು ಎಂಬುದು ಕರ್ನಾಟಕದ ಬೇಡಿಕೆ. ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ಕಾರಣ ಸುಮಾರು 30 ಟಿಎಂಸಿ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಂಡು ವರ್ಷಕ್ಕೆ ಎರಡು ಬೆಳೆ ತೆಗೆಯುವುದಕ್ಕೆ ಉಳಿದ 30 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಬೇಕು. ಅದಕ್ಕಾಗಿ ನವಿಲೇ ಜಲಾಶಯದ ನಿರ್ಮಾಣ ಅಗತ್ಯವಾಗಿದೆ. ಅದರ ಜವಾಬ್ದಾರಿಯನ್ನು ಅಥವಾ ಹೊರೆಯನ್ನು ಇನ್ನೂ ಯುವಕರಾಗಿರುವ ನಾ.ರಾ. ಲೋಕೇಶ್ ಮೇಲೆ ಹಾಕುವುದು ಬೇಡ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದರು.

ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನೀರಾವರಿ ವಿಷಯಗಳ ಸೂಕ್ಷ್ಮತೆ ಮತ್ತು ಜಟಿಲತೆಯನ್ನು ನಾನು ಬಲ್ಲೆ. ಹೀಗಾಗಿ ಇಂತಹ ಜಟಿಲವಾದ ವಿಷಯವನ್ನು ಲೋಕೇಶ್ ಹೆಗಲಿಗೆ ಹಾಕಲಾರೆ. ಏಕೆಂದರೆ ಇದಕ್ಕೆ ಅವರ ರಾಜ್ಯದಲ್ಲಿಯೂ ಪ್ರತಿರೋಧ ಬಂದು ರಾಜಕೀಯ ತಿಕ್ಕಾಟ ಶುರುವಾಗಬಹುದು. ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳು ನೆರೆ ರಾಜ್ಯಗಳು. ಭಾಷಾವಾರು ಪ್ರಾಂತ್ಯಗಳಾಗಿ ಒಂದೇ ಬಳ್ಳಿಯ ಹೂವುಗಳು. ನಾವು ಪರಸ್ಪರ ಸೌಹಾರ್ದತೆ ಮತ್ತು ಒಳ್ಳೆಯ ಚರ್ಚೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಸ್ವಲ್ಪ ಕಾಲಾವಕಾಶ ಅಗತ್ಯವಾಗಿ ಬೇಕಾಗುತ್ತದೆ. ಇಲ್ಲವಾದರೆ ಕೆಲವರಿಗೆ ಇದೇ ರಾಜಕೀಯ ವಿಷಯವಾಗಿ ಪರಿಸ್ಥಿತಿ ಜಟಿಲವಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

ನನಗೆ ಗೊತ್ತಿದೆ. ಈ ಭಾಗದ ರೈತರು ಹಿಂದೆ ವರ್ಷಕ್ಕೆ ಎರಡು ಭತ್ತದ ಬೆಳೆ ತೆಗೆಯುತ್ತಿದ್ದರು. ಈಗ ಒಂದು ಬೆಳೆ ತೆಗೆಯುವುದಕ್ಕೂ ನಾವು ಕಷ್ಟಪಡುತ್ತಿದ್ದೇವೆ. ಅದಕ್ಕೆ ಕಾರಣವೇನು ಎಂಬುದರ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕು. ಅನಿಯಂತ್ರಿತವಾಗಿ ಗಣಿಗಾರಿಕೆ ನಡೆಸಿದ ಫಲವಾಗಿ ಹೂಳು ಬಂದು ಜಲಾಶಯವನ್ನು ತುಂಬಿಕೊಂಡಿದೆ. ಇದಕ್ಕೆ ನಾವು ಮೊದಲೇ ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು ಎಂದು ಸಚಿವರು ನುಡಿದರು.

ನವಿಲೇ ಜಲಾಶಯವನ್ನು ನಿರ್ಮಾಣ ಮಾಡಬಹುದು. ರಾಜಕೀಯಕ್ಕೆ ಅತೀತವಾಗಿ ಪರಸ್ಪರ ನಂಬಿಕೆ ಮತ್ತು ಸೌಹಾರ್ದ ಮನೋಭಾವದಿಂದ ಕುಳಿತು ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕಾದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಗಟ್ಟಿಯಾದ ಪ್ರಯತ್ನ ಮಾಡೋಣ ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿಯಾಗಿ ನನ್ನ ಕೈಲಾದ ಮಟ್ಟಿಗೆ ಒಳ್ಳೆಯ ಕೆಲಸ ಮಾಡಿದ್ದೇನೆ. ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಅನುಕೂಲ ಮಾಡಿಕೊಟ್ಟಿದ್ದೇನೆ. ಸಾಲಮನ್ನಾದಂತಹ ಜನೋಪಕಾರಿ ಕಾರ್ಯಕ್ರಮ ನೀಡಿದ್ದೇನೆ. ನೋವಿನ ವಿಚಾರ ಎಂದರೆ, ಜನರು ನನ್ನ ಕಾರ್ಯಕ್ರಮಗಳ ಬಗ್ಗೆ ನಿರಂತರವಾಗಿ ಮಾತನಾಡುತ್ತಾರೆ. ಆದರೆ ಮತ ಹಾಕುವ ಸಂದರ್ಭ ಬಂದಾಗ ಇನ್ನೊಬ್ಬರಿಗೆ ಮತ ಹಾಕುತ್ತಾರೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

9 ಕೈಗಾರಿಕೆ ಕ್ಲಸ್ಟರ್ ನೆನಪಿಸಿದ ಹೆಚ್ಡಿಕೆ:

ಕರ್ನಾಟಕ ರಾಜ್ಯ ಸಮಾನವಾಗಿ ಅಭಿವೃದ್ಧಿ ಹೊಂದಬೇಕು ಎನ್ನುವ ಉದ್ದೇಶದಿಂದ ಕಾಂಪೀಟ್ ವಿಥ್ ಚೈನಾ ಎನ್ನುವ ಕಾರ್ಯಕ್ರಮ ರೂಪಿಸಿದೆ. 2018ರಲ್ಲಿ ಕಾಂಗ್ರೆಸ್ ಜೊತೆ ನಾನು ಮೈತ್ರಿ ಸರ್ಕಾರ ರಚಿಸಿದಾಗ 9 ಕೈಗಾರಿಕಾ ಕ್ಲಸ್ಟರ್ ಗಳನ್ನು ಸ್ಥಾಪಿಸಿ ರಾಜ್ಯಾದ್ಯಂತ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಒತ್ತಾಸೆ ನೀಡುವ ದೊಡ್ಡ ಪ್ರಯತ್ನ ಮಾಡಿದ್ದೆ. ಅದರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಬೊಂಬೆಗಳ ಕ್ಲಸ್ಟರ್ ಸ್ಥಾಪನೆ ಮಾಡಲು ನಿರ್ಧಾರ ಮಾಡಿದೆ. ಅಷ್ಟರಲ್ಲಿ ನನ್ನ ಸರ್ಕಾರ ಹೋಯಿತು ಆ ಯೋಜನೆಯು ಅಲ್ಲಿಗೆ ನಿಂತಿತು ಎಂದು ಕುಮಾರಸ್ವಾಮಿಯು ಬೇಸರ ವ್ಯಕ್ತಪಡಿಸಿದರು.

ತಮ್ಮ ಮನವಿಗೆ ಓಗೊಟ್ಟು ಸಿಂಧನೂರಿನ ಸೈನಿಕ ಶಾಲೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರದ ರಕ್ಷಣಾ ಖಾತೆ ರಾಜ್ಯ ಸಚಿವರಾದ ಸಂಜಯ್ ಸೇಠ್ ಅವರಿಗೆ ಮತ್ತು ಆಂಧ್ರ ಪ್ರದೇಶದ ಸಚಿವರಾದ ನಾ.ರಾ. ಲೋಕೇಶ್ ಅವರಿಗೆ ಕುಮಾರಸ್ವಾಮಿ ಅವರು ವಿಶೇಷ ಧನ್ಯವಾದ ಅರ್ಪಿಸಿದರು.

ಅಲ್ಲದೆ ಈ ಕಾರ್ಯಕ್ರಮಕ್ಕೆ ಲೋಕೇಶ್ ಅವರನ್ನು ಕರೆದುಕೊಂಡು ಬಂದ ವಿಶಾಖಪಟ್ಟಣಂ ಕ್ಷೇತ್ರದ ಸಂಸದರಾದ ಶ್ರೀಭರತ್ ಅವರಿಗೆ ಸಚಿವ ಕುಮಾರಸ್ವಾಮಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.

ನಾ.ರಾ.ಲೋಕೇಶ್ ಒಬ್ಬ ಸಮರ್ಥ ನಾಯಕನಾಗಿ ಬೆಳೆಯುವ ಎಲ್ಲಾ ಅವಕಾಶಗಳು ಇವೆ. ರಾಜಕೀಯ ಜೀವನದಲ್ಲಿ ಇಷ್ಟೊಂದು ವಿನಯಶೀಲತೆ ಇಟ್ಟುಕೊಂಡ ದೂರದೃಷ್ಟಿಯುಳ್ಳ ಯುವಕನನ್ನು ಕಂಡಿಲ್ಲ. ಅವರ ತಂದೆಯ ಅಗಾಧವಾದ ರಾಜಕೀಯ, ಆಡಳಿತ ಅನುಭವದಿಂದ ರೂಪಿತಗೊಂಡ ಲೋಕೇಶ್ ಅವರ ನಾಯಕತ್ವವು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಏರಲಿ ಎಂದು ಸಚಿವರು ಹಾರೈಸಿದರು.

ಶಾಸಕರು ಹಂಪನಗೌಡ ಬಾದರ್ಲಿ, ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆ ಅಧ್ಯಕ್ಷರು ಹಾಗೂ ಮಾಜಿ ಮಂತ್ರಿ ವೆಂಕಟರಾವ್ ನಾಡಗೌಡರು, ಸಂಸದರಾದ ರಾಘವೇಂದ್ರ ಹಿಟ್ನಾಳ್ ಅವರು, ಕುಮಾರ್ ನಾಯಕ್ ಅವರು, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ ಅವರು, ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಹಿರಿಯರು ಹಾಗೂ ಅಸಂಖ್ಯಾತ ಸಾರ್ವಜನಿಕ ಬಂಧುಗಳು ಮಕ್ಕಳು ಭಾಗಿಯಾಗಿದ್ದರು.

ಬೃಹತ್ ರೋಡ್ ಶೋ ಮತ್ತು ಎನ್ ಟಿ ಆರ್ ಪ್ರತಿಮೆ ಅನಾವರಣ:

ಸೈನಿಕ ಶಾಲೆ ಉದ್ಘಾಟನೆಗೂ ಮೊದಲು ಸಚಿವರಾದ ಕುಮಾರಸ್ವಾಮಿ, ಸಂಜಯ್ ಸೇಠ್, ಆಂಧ್ರ ಪ್ರದೇಶದ ಸಚಿವ ನಾ.ರಾ. ಲೋಕೇಶ್ ಲೋಕೇಶ್ ಅವರನ್ನು ರೋಡ್ ಶೋ ಮೂಲಕ ಬರಮಾಡಿಕೊಳ್ಳಲಾಯಿತು.

ಸಿಂಧನೂರು ಪಟ್ಟಣದ ಜನರು ಗಣ್ಯರಿಗೆ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದ, ಪಟ್ಟಣದ ಮುಖ್ಯರಸ್ತೆಯಲ್ಲಿ ತೆರೆದ ವಾಹನದ ಮೇಲೆ ಮೆರವಣಿಗೆಯ ಮೂಲಕ ಕರೆದುಕೊಂಡು ಹೋದರು.

ನಂತರ ಗಣ್ಯರು ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.


Share

You cannot copy content of this page