ಸಮಗ್ರ ಸುದ್ದಿ

ಪಾಲಿಕೆಯ ಪೌರಕಾರ್ಮಿಕರಿಗೆ 2 ದಿನಗಳ ಕ್ರೀಡಾಕೂಟ ಆಯೋಜನೆ : ಆಯುಕ್ತ ಕೆ ಎನ್ ರಮೇಶ್

Share

ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಸವಿನೆನಪಿಗಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಪೌರಕಾರ್ಮಿಕರು, ಗ್ಯಾಂಗ್‌ಮೆನ್‌ಗಳು ಮತ್ತು ತೋಟಗಾರಿಕೆ ಮಾಲಿಗಳಿಗಾಗಿ ವಿಶೇಷ ಕ್ರೀಡಾಕೂಟವನ್ನು ಏಪ್ರಿಲ್ 9 ಮತ್ತು 10 ರಂದು ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ.

ಸಚಿವ ರಾಮಲಿಂಗಾರೆಡ್ಡಿ ಕ್ರೀಡಾಕೂಟಕ್ಕೆ ಚಾಲನೆ

ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್ ಹಾಗೂ ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬೆಂಗಳೂರಿನ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸದಾ ಕೆಲಸದ ಒತ್ತಡದಲ್ಲಿರುವ ಅವರಿಗೆ ಈ ಕ್ರೀಡಾಕೂಟವು ಒಂದು ಉತ್ತಮ ವಿರಾಮ ಮತ್ತು ಚೈತನ್ಯ ನೀಡುವ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು.

ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಬಹಳ ಮುಖ್ಯ

ಆಯುಕ್ತ ಕೆ.ಎನ್.ರಮೇಶ್ ಮಾತನಾಡಿ, ಕ್ರೀಡಾಕೂಟ ಚಟುವಟಿಕೆಗಳು ಪ್ರತಿಯೊಬ್ಬರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪೂರಕವಾಗಿವೆ ಎಂದು ತಿಳಿಸಿದರು.

ಕ್ರೀಡಾಕೂಟದ ಮೊದಲ ದಿನವಾದ ಇಂದು ಜಯನಗರ, ಬೊಮ್ಮನಹಳ್ಳಿ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಸುಮಾರು 600ಕ್ಕೂ ಹೆಚ್ಚು ಪೌರಕಾರ್ಮಿಕರು ಪಾಲ್ಗೊಂಡಿದ್ದು, ಕ್ರೀಡಾಕೂಟದ ಎರಡನೇ ದಿನವಾದ ನಾಳೆ ಬಿ.ಟಿ.ಎಂ ಲೇಔಟ್ ಮತ್ತು ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ಪೌರಕಾರ್ಮಿಕರು ಭಾಗವಹಿಸಲಿದ್ದಾರೆ.

ಪೌರಕಾರ್ಮಿಕರು ಹಾಗೂ ಇತರ ನೌಕರರಿಗೆ 100 ಮೀಟರ್ ಮತ್ತು 200 ಮೀಟರ್ ಓಟದ ಸ್ಪರ್ಧೆ, ಗುಂಡು ಎಸೆತ ಹಾಗೂ ಕಿಕ್ಕಿಂಗ್ ದಿ ಬಾಲ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿಯ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆ ಇಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.


Share

You cannot copy content of this page