ಕೋಲಾರ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಕೋಲಾರ ಜಿಲ್ಲೆಯು ಶೇಕಡ 87.38 ಫಲಿತಾಂಶ ಪಡೆಯುವ ಮೂಲಕ, ರಾಜ್ಯ ಮಟ್ಟದಲ್ಲಿ 15ನೇ ಸ್ಥಾನಗಳಿಸಿದೆ.
ಕಳೆದ ಬಾರಿ ಶೇಕಡ 72.45ರಷ್ಟು ಫಲಿತಾಂಶ ಪಡೆದುಕೊಂಡು 16ನೇ ಸ್ಥಾನದಲ್ಲಿತ್ತು, ಈ ಭಾರಿ ಶೇಕಡ14.93ರಷ್ಟು ಹೆಚ್ಚಿಸಿಕೊಂಡು ಒಟ್ಟಾರೆಯಾಗಿ ಶೇಕಡ 87.38 ಫಲಿತಾಂಶ ಲಭಿಸಿದ್ದು, ಫಲಿತಾಂಶದಲ್ಲಿ ಜಿಲ್ಲೆಯೂ ಉತ್ತಮ ಸುಧಾರಣೆ ಕಂಡಿದೆ.
ಜಿಲ್ಲೆಯಲ್ಲಿ ಒಟ್ಟು 14 ಸಾವಿರದ 711 ವಿದ್ಯಾರ್ಥಿಗಳು ಪರೀೆಗೆ ಬರೆದಿದ್ದು, 11 ಸಾವಿರದ 566 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಪೈಕಿ ಬಾಲಕರು ಒಟ್ಟು 6 ಸಾವಿರದ 313 ಪರೀಕ್ಷೆ ಬರೆದಿದ್ದು 4 ಸಾವಿರದ 921 ಮಂದಿ ಉತ್ತೀರ್ಣರಾಗಿದ್ದಾರೆ. ಬಾಲಕಿಯರು ಒಟ್ಟು 7 ಸಾವಿರದ 864 ಮಂದಿ ಪರೀಕ್ಷೆ ಬರೆದಿದ್ದು, ಆ ಪೈಕಿ 6 ಸಾವಿರದ 645 ಮಂದಿ ತೇರ್ಗಡೆಯಾಗಿ, ಜಿಲ್ಲೆಗೆ ಉತ್ತಮ ಫಲಿತಾಂಶ ತಂದುಕೊಟ್ಟಿದ್ದಾರೆ. ಈ ಬಾರಿಯೂ ಸಹ ಬಾಯಕಿಯರೆ ಮೇಲುಗೈ ಸಾಧಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮೊದಲ ಬಾರಿಗೆ 5 ಸಾವಿರದ 652 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಆ ಪೈಕಿ 4 ಸಾವಿರದ 853 ವಿದ್ಯಾರ್ಥಿಗಳು ಉತೀರ್ಣರಾಗಿದ್ದು, ಶೇಕಡ 85.86ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ 1 ಸಾವಿರದ 349 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಆ ಪೈಕಿ 874 ವಿದ್ಯಾರ್ಥಿಗಳು ಉತೀರ್ಣರಾಗಿದ್ದು, ಶೇಕಡ 64.79 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 7 ಸಾವಿರದ 176 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಆ ಪೈಕಿ 5 ಸಾವಿರದ 839 ವಿದ್ಯಾರ್ಥಿಗಳು ಉತೀರ್ಣರಾಗಿದ್ದು, ಶೇಕಡ 81.37 ರಷ್ಟು ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ ನಗರದ ಮಹಿಳಾ ಸಮಾಜ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎಂ.ಚಿರಂತನಾ 596 ಅಂಕ ಪಡೆದು ಜಿಲ್ಲೆಗೆ ಮೊದಲಿಗರಾಗಿ, ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ಗೆ ಭಾಜನರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಸಾಯಿ ಪಿಯು ಕಾಲೇಜಿನ ವಿದ್ಯಾರ್ಥಿ ಮದನ್ ವಿಜ್ಞಾನ ವಿಭಾಗದಲ್ಲಿ ಒಟ್ಟು 596 ಅಂಕಗಳಿಸಿ ಶೇಕಡ 99.1ರಷ್ಟು ಫಲಿತಾಂಶ ಪಡೆದಿದ್ದಾರೆ.
ಜಿಲ್ಲೆಯ ಬಂಗಾರಪೇಟೆ ನಗರದ ಎಸ್ಡಿಸಿ ಕಾಲೇಜಿನ ವಿದ್ಯಾರ್ಥಿನಿ ಅರ್ಚನಾ ವಿಜ್ಞಾನ ವಿಭಾಗದಲ್ಲಿ 595 ಅಂಕಗಳೊಂದಿಗೆ ಶೇಕಡ 99.1 ಫಲಿತಾಂಶ ಗಳಿಸಿದ್ದಾರೆ. ರಾಘವರೆಡ್ಡಿ ಮತ್ತು ಸುರೇಖಾ ದಂಪತಿಯ ಪುತ್ರಿಯಾಗಿದ್ದು, ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ನಗರದ ಸಹ್ಯಾದ್ರಿ ಕಾಲೇಜಿನ ಲಯಾ 593 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಹಾಗೂ ಜಿಲ್ಲೆಗೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.
ವಿಕಲಚೇತನ ವಿದ್ಯಾರ್ಥಿ ಸಾಧನೆ
ಕೋಲಾರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ತೀವ್ರ ಶ್ರವಣದೋಷವಿರುವ ವಿಕಲಚೇತನ ವಿದ್ಯಾರ್ಥಿ ಕೆ.ಸಿ.ಚರಣ್ ಪಿಯುಸಿ ಪರೀಕ್ಷೆಯಲ್ಲಿ 534 ಅಂಕಗಳಿಸಿ, ಶೇಕಡ 90ರಷ್ಟು ಫಲಿತಾಂಶ ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ.
