ಸಮಗ್ರ ಸುದ್ದಿ

ಜಯನಗರದ 42 ರಸ್ತೆಗಳಲ್ಲಿ ಪಾರ್ಕಿಂಗ್ ನೀತಿ ಜಾರಿಗೆ ಕ್ರಮ: ಕೆ.ಎನ್. ರಮೇಶ್ | ಎಚ್.ಎಂ. ತಾಂಬೂರಿನ್ ಅಪಾರ್ಟ್‌ಮೆಂಟ್‌ನಲ್ಲಿ ಜನಗಣತಿ 2026-27ರ ಸ್ವಯಂ ಗಣತಿ ಅಭಿಯಾನ ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆ

Share

ಬೆಂಗಳೂರು:ಬೆಂಗಳೂರು ದಕ್ಷಿಣ ನಗರ ಪಾಲಿಕೆ ಜಯನಗರದ 42 ರಸ್ತೆಗಳಲ್ಲಿ ಪಾರ್ಕಿಂಗ್ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಆಯುಕ್ತರಾದ ಕೆ.ಎನ್ ರಮೇಶ್ ತಿಳಿಸಿದರು.

ಕನಕಪುರ ರಸ್ತೆಯ ಎಚ್.ಎಂ ತಾಂಬೂರಿನ್ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟ ಹಾಗೂ ದಕ್ಷಿಣ ನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ನೀತಿ ಜಾರಿಗೆ ತರಲಾಗುತ್ತಿದ್ದು, ಈ ಸಂಬಂಧ ಜಯನಗರ ವಿಭಾಗದ 42 ರಸ್ತೆಗಳಲ್ಲಿ ಪಾರ್ಕಿಂಗ್ ನೀತಿ ಜಾರಿಗಾಗಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಇದೇ ಮಾದರಿಯಲ್ಲಿ ಉಳಿದ ವಿಭಾಗಗಳಲ್ಲಿ ಪಾರ್ಕಿಂಗ್ ನೀತಿಯನ್ನು ಹಂತ-ಹಂತವಾಗಿ ಜಾರಿಗೆ ತರಲಾಗುವುದೆಂದು ತಿಳಿಸಿದರು.

ಜನಗಣತಿ 2026-27 ಅಂಗವಾಗಿ ಸಾಮೂಹಿಕ ಸ್ವಯಂಗಣತಿ:

ಭಾರತ ಸರ್ಕಾರದ ಜನಗಣತಿ-2026-27ರ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಸ್ವಯಂ ಗಣತಿ ‘(Self Enumeration) ಕಾರ್ಯಕ್ರಮದಲ್ಲಿ ನೂರಾರು ಅಪಾರ್ಟ್‌ಮೆಂಟ್ ನಿವಾಸಿಗಳು ಉತ್ಸಾಹದಿಂದ ಭಾಗವಹಿಸಿದರು.

ಈ ಸಂದರ್ಭದಲ್ಲಿ ಆಯುಕ್ತರು ಮಾತನಾಡಿ, ದೇಶದ ಅಭಿವೃದ್ಧಿ ಯೋಜನೆಗಳ ರೂಪಿಸುವಲ್ಲಿ ಜನಗಣತಿಯು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ಇದರಲ್ಲಿ ಪಾಲ್ಗೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದರು.

ಸಾರ್ವಜನಿಕ ಕುಂದುಕೊರತೆಗಳ ಚರ್ಚೆ:

ಜನಗಣತಿ ಕಾರ್ಯಕ್ರಮದ ನಂತರ ನಡೆದ ಸಭೆಯಲ್ಲಿ, ನಿವಾಸಿಗಳು ಪಾಲಿಕೆಯ ವ್ಯಾಪ್ತಿಯಲ್ಲಿರುವ ಹಲವಾರು ಸಮಸ್ಯೆಗಳನ್ನು ಆಯುಕ್ತರ ಗಮನಕ್ಕೆ ತಂದರು.

ರಸ್ತೆ ಡಾಂಬರೀಕರಣ ಮತ್ತು ಗುಂಡಿಗಳ ಸಮಸ್ಯೆ, ಘನತ್ಯಾಜ್ಯ ನಿರ್ವಹಣೆಯಲ್ಲಿನ ನ್ಯೂನತೆಗಳು, ಬಾಟಲ್ ನೆಕ್ ರಸ್ತೆಗಳಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ, ಅಣ್ಣಯ್ಯಪ್ಪ ಕೆರೆ ಉದ್ಯಾನವನದ ಸಾರ್ವಜನಿಕ ಶೌಚಾಲಯದ ಅಸಮರ್ಪಕ ನಿರ್ವಹಣೆ, ಸಾರಕ್ಕಿ ಕೆರೆ ಬಫರ್ ಝೋನ್ ನಿವಾಸಿಗಳ ಸಮಸ್ಯೆಗಳು, ರಿಂಗ್ ರಸ್ತೆಯಲ್ಲಿ ಶಾಲೆ ಪಕ್ಕದಲ್ಲಿರುವ ಪಬ್‌ ಗಳು ಹಾಗೂ ರಿಂಗ್ ರಸ್ತೆಯಲ್ಲಿನ ಅಕ್ರಮ ಪಾರ್ಕಿಂಗ್ ಕಿರಿಕಿರಿ,
ಸಿ.ಎಸ್.ಆರ್ (CSR) ಅಡಿಯಲ್ಲಿ ಜರಗನಹಳ್ಳಿ ಹಾಗೂ ಯಲಚೇನಹಳ್ಳಿಯಲ್ಲಿ ‘ಕಸ ಕಿಯೋಸ್ಕ್’ ಅಳವಡಿಕೆ ಅಪಾರ್ಟ್ ಮೆಂಟ್ ಸಂಘದ ವತಿಯಿಂದ ಸ್ಥಾಪಿಸಲಾಗುವುದು ಇದಕ್ಕೆ ನಗರ ಪಾಲಿಕೆ ವತಿಯಿಂದ ಸಿಬ್ಬಂದಿ ನೀಡುವಂತೆ ಕೋರಿದರು.

ಆಯುಕ್ತರು ಭರವಸೆ:

ನಿವಾಸಿಗಳ ಅಹವಾಲುಗಳನ್ನು ಆಲಿಸಿದ ಬಳಿಕ ಆಯುಕ್ತರು, ಪಾಲಿಕೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಕೆಲವು ಕೆಲಸಗಳು ವಿಳಂಬವಾಗುತ್ತಿವೆ. ಸಕಾಲದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ನಾಗರಿಕರು ಸಹಕರಿಸಬೇಕೆಂದು ಕೋರಿದರು.

ನವೀನ ತಂತ್ರಜ್ಞಾನವುಳ್ಳ ಪರಿಹಾರಗಳಿಗೆ ಆದ್ಯತೆ:

ನಗರ ಪಾಲಿಕೆಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕಾಗಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಹೊಸ ತಂತ್ರಜ್ಞಾನ ಹಾಗೂ ಪರಿಹಾರಗಳೊಂದಿಗೆ ಮುಂದೆ ಬಂದರೆ ಪಾಲಿಕೆಯು ಕೈಜೋಡಿಸಲಿದೆ. ಕೋರಮಂಗಲದ ಅಪಾರ್ಟ್‌ಮೆಂಟ್‌ಗಳ ಮಾದರಿಯಲ್ಲಿ ಒಣ ಕಸವನ್ನು ತಾವೇ ವಿಂಗಡಿಸಿ ವಾರಕ್ಕೆರಡು ಬಾರಿ ಸಂಗ್ರಹಣಾ ಕೇಂದ್ರಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಇಲ್ಲಿಯೂ ಅಳವಡಿಸಿಕೊಳ್ಳಲು ಸಲಹೆ ನೀಡಿದರು.

ಕಾನೂನು ಕ್ರಮ: ಪಬ್‌ಗಳ ಹಾವಳಿ ಹಾಗೂ ಪಾರ್ಕಿಂಗ್ ಸಮಸ್ಯೆಗಳ ಕುರಿತು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಸಾರಕ್ಕಿ ಕೆರೆ ಸಮಸ್ಯೆ: ಉಚ್ಛ ನ್ಯಾಯಾಲಯದ ಆದೇಶದಂತೆ ಕೆರೆಯ ಬಫರ್ ಝೋನ್‌ನಲ್ಲಿ ಅಧಿಕಾರಿಗಳು ಸರ್ವೆ ಕಾರ್ಯ ನಡೆಸುತ್ತಿದ್ದಾರೆ.

ಈ ವೇಳೆ ಪಾಲಿಕೆಯ ಅಧಿಕಾರಿಗಳು ಹಾಗೂ ಅಪಾರ್ಟ್ ಮೆಂಟ್ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Share

You cannot copy content of this page