ಬೀದರ್: ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರದ (ಕೆ.ಕೆ.ಆರ್.ಡಿ.ಬಿ.) 13 ಕೋಟಿ ರೂ. ಆರ್ಥಿಕ ಬೆಂಬಲದಿಂದ ಪುನಾರಂಭಗೊಂಡಿರುವ ಬೀದರ್ -ಬೆಂಗಳೂರು ನಾಗರಿಕ ವಿಮಾನಯಾನ ಸೇವೆಯನ್ನು ಮುಂದುವರಿಸುವಂತೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಬೀದರ್ ನ ಝೀರಾ ಕನ್ವೆನ್ಷನ್ ಹಾಲ್ ನಲ್ಲಿ ನಡೆಯುತ್ತಿರುವ 2 ದಿನಗಳ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಉಡಾನ್ ಯೋಜನೆಯಡಿ ನೀಡುತ್ತಿದ್ದ ಸಬ್ಸಿಡಿ ನಿಲ್ಲಿಸಿದ ಪರಿಣಾಮ ಸ್ಥಗಿತವಾಗಿದ್ದ ವಿಮಾನ ಯಾನ ಸೇವೆಗೆ ಕಳೆದ ವರ್ಷ ಏಪ್ರಿಲ್ 16ರಂದು ನೀವೇ ಮರು ಚಾಲನೆ ನೀಡಿದ್ದಿರಿ. ಈಗ ಅದು ನಿರಂತರ ಸೇವೆಯಾಗಿ ಮುಂದುವರಿಸಿ ಎಂದು ಜಿಲ್ಲೆಯ ಜನತೆಯ ಪರವಾಗಿ ಮನವಿ ಮಾಡಿದರು.
ಕ.ಕ, ಬೀದರ್ ಗೆ ಸಿಎಂ ಅಭೂತಪೂರ್ವ ಬೆಂಬಲ
ಶತಮಾನಗಳ ಶಾಪದಿಂದ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ಮತ್ತು ಬೀದರ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಬೆಂಬಲ ಅಭೂತಪೂರ್ವ ಎಂದ ತಿಳಿಸಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಿ.ಎಂ.ಗೆ ಧನ್ಯವಾದ ಅರ್ಪಿಸಿದ್ದಾರೆ.
ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿ, 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲಕ್ಕೆ ತಂದು, ರಾಜ್ಯದ ತಲಾದಾಯವನ್ನು ಹೆಚ್ಚಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಜೆಟ್ ನಲ್ಲಿ ವಾರ್ಷಿಕ 5 ಸಾವಿರ ಕೋಟಿ ರೂ. ನೀಡುವುದಾಗಿ ಪಕ್ಷ ನೀಡಿದ್ದ ಭರವಸೆಯನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ, ಈ ಪೈಕಿ ಕಳೆದ 3 ವರ್ಷದಲ್ಲಿ ಬೀದರ್ ಜಿಲ್ಲೆಯ ಅಭಿವೃದ್ಧಿಗೆ 8000 ಕೋಟಿ ರೂ. ಲಭ್ಯವಾಗಿದೆ ಎಂದರು.
ಬೀದರ್ ಜಿಲ್ಲೆಯ ನೀರಾವರಿ ಯೋಜನೆಗಳಿಗೆ 600 ಕೋಟಿ ರೂ.; ಲೋಕೋಪಯೋಗಿ ಇಲಾಖೆಯಡಿ ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ 300 ಕೋಟಿ ರೂ. ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಜಲಜೀವನ ಮಿಷನ್ ಅಡಿಯಲ್ಲಿ 600 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದರು.
ಅನುಭವ ಮಂಟಪಕ್ಕೆ 280 ಕೋಟಿ ಕೊಟ್ಟ ಸಿಎಂಗೆ ಧನ್ಯವಾದ ಅರ್ಪಿಸಿದ ಖಂಡ್ರೆ:
ಇಡೀ ಜಗತ್ತಿಗೆ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ಬಸವಕಲ್ಯಾಣದಲ್ಲಿ ಅತ್ಯಾಧುನಿಕ ಅನುಭವ ಮಂಟಪ ನಿರ್ಮಾಣ ಮಾಡಬೇಕೆಂಬ ಕೋರಿದಾಗ, ಹಿರಿಯ ಚಿಂತಕರಾದ ಗೊ.ರೂ. ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಬಜೆಟ್ ನಲ್ಲಿ ಘೋಷಣೆ ಮಾಡಿದರು.
ಅನುಭವ ಮಂಟಪ ಕಾಮಗಾರಿಯನ್ನು ಮುಂದಿನ ವರ್ಷದೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಸರ್ಕಾರ ಸಂಕಲ್ಪಿಸಿದ್ದು, 2023ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಒಟ್ಟು 280 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ.
ಬಸವ ಕಲ್ಯಾಣದಲ್ಲಿ ಅನುಭವ ಮಂಟಪದ ಶೇ. 70ರಷ್ಟು ಕಾಮಗಾರಿ ಮುಗಿದಿದ್ದು, ಉಳಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಅನುಭವ ಮಂಟಪದಲ್ಲಿ ವರ್ಣಭೇದ, ಲಿಂಗಭೇದವಿಲ್ಲದ ಸಮಾಜಕ್ಕಾಗಿ ಶ್ರಮಿಸಿದ 770 ಅಮರ ಗಣಂಗಳ ಹೆಸರಲ್ಲಿ ಕಂಬಗಳನ್ನು ನಿರ್ಮಿಸಿ ಅದರಲ್ಲಿ ಅವರ ಚಿತ್ರ ಮತ್ತು ವಚನಗಳನ್ನು ಕೆತ್ತಿಸಲಾಗುತ್ತಿದೆ. ಜೊತೆಗೆ ವೈಜ್ಞಾನಿಕವಾಗಿ ಇಷ್ಟಲಿಂಗ ಪೂಜೆ ಮಾಡುವ ವಿಧಾನ ಮತ್ತು ಅದರ ಶಕ್ತಿಯ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಯೂ ಇರುವ ಆಧುನಿಕ ಅನುಭವ ಮಂಟಪ ಜಗತ್ತಿನ ಆಕರ್ಷಕ ಮತ್ತು ಪ್ರಮುಖ ಆಧ್ಯಾತ್ಮಿಕ ತಾಣವಾಗಿ ಹೊರಹೊಮ್ಮಲಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉದ್ಘಾಟಿಸಲಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.
ಪ್ರಜಾಪ್ರಭುತ್ವ ಗಟ್ಟಿಯಾಗಲು ಮಾಧ್ಯಮಗಳ ಕೊಡುಗೆ ಅನನ್ಯ:ಈಶ್ವರ ಖಂಡ್ರೆ
ಬೀದರ್, ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ವೇದಿಕೆ, ಏ.11: ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲುವಲ್ಲಿ ಮಾಧ್ಯಮಗಳ ಪಾತ್ರ ಅನನ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಬೀದರ್ ನಗರದ ಝೀರಾ ಕನ್ವೆನ್ಷನ್ ಹಾಲ್ ನಲ್ಲಿ ನಡೆಯುತ್ತಿರುವ 2 ದಿನಗಳ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾವೇ ಮೊದಲು ಎಂಬ ಧಾವಂತದಲ್ಲಿ ತಪ್ಪು ಮಾಹಿತಿಯ ಪ್ರಸಾರ ಆಗದಂತೆ ಮತ್ತು ವ್ಯಕ್ತಿಯ ಚಾರಿತ್ರ್ಯವಧೆ ಆಗದಂತೆ ಮಾಧ್ಯಮಗಳು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದು ಹೇಳಿದರು.
ಯಾವುದೇ ಮಾಧ್ಯಮಕ್ಕೆ ತನ್ನ ವಿಶ್ವಾಸಾರ್ಹತೆಯೇ ಜೀವಾಳ. ಎಂದ ಈಶ್ವರ ಖಂಡ್ರೆ, ಹಿರಿಯ ಪತ್ರಕರ್ತರಾದ ಮಾಜಿ ಸಚಿವ ಎಂ.ಎಸ್. ಗುರುಪಾದ ಸ್ವಾಮಿ ಅವರು, ಎಸ್.ವಿ.ಜಯಶೀಲರಾಯರು, ಅರ್ಜುನ್ ದೇವ್, ಬಿ.ವಿ. ಮಲ್ಲಿಕಾರ್ಜುನಯ್ಯ ಹಾಗೂ ಈಗ ಶಿವಾನಂದ ತಗಡೂರ್ ಪತ್ರಕರ್ತರ ಸಂಘವನ್ನು ಮುನ್ನಡೆಸಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇಂತಹ ಸಮ್ಮೇಳನಗಳ ಮೂಲಕ ಪತ್ರಕರ್ತರಲ್ಲಿ ಮೌಲ್ಯಗಳನ್ನು ಬಳೆಸಬೇಕು ಎಂದರು.
ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಯೋಜನೆ ತಂದಿದ್ದಾರೆ. ಹಿರಿಯ ಪತ್ರಕರ್ತರಿಗೆ ನೀಡುತ್ತಿದ್ದ 3 ಸಾವಿರ ರೂ. ಪಿಂಚಣಿಯನ್ನು 15 ಸಾವಿರಕ್ಕೆ ಹೆಚ್ಚಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಎಚ್ಚರಿಕೆ ಅಗತ್ಯ:
ಇಂದು ನಾವು ಎ.ಐ. ತಂತ್ರಜ್ಞಾನ, ಮಿಷಿನ್ ಲರ್ನಿಂಗ್ ನಂತಹ ಕಾಲಘಟ್ಟದಲ್ಲಿದ್ದೇವೆ. ವಾಟ್ಸ್ ಅಪ್ ನಲ್ಲಿ ಬರುವ ಸುಳ್ಳು ಸುದ್ದಿಗಳೇ ಸತ್ಯವಾಗಬಾರದು ಈ ನಿಟ್ಟಿನಲ್ಲಿ ಅತ್ಯಂತ ವಿವೇಚನಾತ್ಮಕವಾಗಿ ಮಾಧ್ಯಮಗಳು ಕೆಲಸ ಮಾಡಬೇಕು. ಕೆ.ಯುಡ್ಲ್ಯುಜೆ ಒಂದು ವೃತ್ತಿ ಸಂಘಟನೆಯಾಗಿ, ಕಾರ್ಮಿಕ ಸಂಘಟನೆಯಾಗಿ ಕೆಲಸ ಮಾಡಿದೆ. ಪತ್ರಕರ್ತರು ವೃತ್ತಿಯ ಘನತೆ ಕಾಪಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ರಹೀಂ ಖಾನ್, ಡಾ. ಶರಣ ಪ್ರಕಾಶ್ ಪಾಟೀಲ್, ಸಂಸತ್ ಸದಸ್ಯ ಸಾಗರ್ ಖಂಡ್ರೆ, ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್, ಶಾಸಕರುಗಳಾದ ಶರಣು ಸಲಗಾರ್, ಭೀಮರಾವ್ ಪಾಟೀಲ್, ಚಂದ್ರಶೇಖರ ಪಾಟೀಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ್ ದೇವಪ್ಪ ಹಾರಕೋಡು, ಶ್ರೀ ಚನ್ನವೀರ ಶಿವಾಚಾರ್ಯರು, ಭಾಲ್ಕಿ ಹಿರೆಮಠದ ಡಾ. ಬಸವಲಿಂಗ ಪಟ್ಟದ್ದೇವರು ಪಾಲ್ಗೊಂಡಿದ್ದರು.
