ಸಮಗ್ರ ಸುದ್ದಿ

ಯುಹೆಚ್‌ಎಸ್ ಸಂತೆ: ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

Share

ಬೆಂಗಳೂರು:ಇಲ್ಲಿನ ಯಲಹಂಕ ಸಮೀಪದ
ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿಕೆವಿಕೆದಲ್ಲಿ ಪ್ರತಿ ತಿಂಗಳು ಎರಡನೆಯ ಶನಿವಾರ ಯುಹೆಚ್‌ಎಸ್ ಸಂತೆಯನ್ನು ಆಯೋಜಿಸಲಾಗುತ್ತಿದೆ.

ಇಂದು ನಡೆದ ಎರಡನೆಯ “ಯುಹೆಚ್‌ಎಸ್ ಸಂತೆ” ಯಲ್ಲಿ ರೈತರು, ಉದ್ದಿಮೆದಾರರು, ಮಹಿಳೆಯರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ರೈತರು ಹಾಗೂ ರೈತ ಉತ್ಪಾದಕ ಸಂಘಗಳು ಹಾಗೂ ಹೊಸ ಹೊಸ ಉದ್ದಿಮೆದಾರರು ತಾವು ಬೆಳೆದ ತಾಜಾ ತರಕಾರಿ, ಹಣ್ಣು, ಹೂ, ಮೌಲ್ಯ ವರ್ಧಿತ ಪದಾರ್ಥಗಳಾದ ವಿವಿಧ ಸಾಂಬಾರು ಪುಡಿಗಳು, ಶುದ್ದ ನಾಟಿ ಬೆಣ್ಣೆ, ಕೋಲ್ಡ್ ಪ್ರೆಸ್ಡ್ ಆಯಿಲ್, ಗೋವು ಉತ್ಪನ್ನಗಳು, ತರಕಾರಿ ಮತ್ತು ಹೂವಿನ ಬೀಜಗಳು ಹಾಗೂ ಇನ್ನಿತರೆ ಮೌಲ್ಯ ವರ್ಧಿತ ಪದಾರ್ಥಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು 52 ಮಳಿಗೆಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿತ್ತು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೆಗಾ ನರ್ಸರಿಯಲ್ಲಿ ಅಭಿವೃದ್ಧಿ ಪಡಿಸಿದ ಅಲಂಕಾರಿಕ ಸಸಿಗಳು, ಹಣ್ಣಿನ ಕಸಿ ಸಸಿಗಳು, ಪ್ಲಾಂಟೇಶನ್, ಔಷಧಿಯ ಮತ್ತು ಸುಗಂಧಿ ಸಸಿಗಳನ್ನು ಮಾರಾಟ ಮಾಡಲಾಗಿದ್ದು, ನಗರವಾಸಿಗಳಿಗೆ ಹಾಗೂ ಇತರ ಸಾರ್ವಜನಿಕರಿಗೆ ತೋಟಗಾರಿಕೆ ಬೆಳೆಗಳ ತಾಂತ್ರಿಕತೆ ಸಮಗ್ರ ಗಾರ್ಡನಿಂಗ್ ಮಾಹಿತಿ ಹಾಗೂ ಮೌಲ್ಯ ವರ್ಧಿತ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ಈ ಸಂತೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ಗ್ರಾಹಕರು ಭಾಗವಹಿಸಿದ್ದರು. ರೈತರು ಮತ್ತು ಉದ್ದಿಮೆದಾರರಿಗೆ ಸುಮಾರು ಒಟ್ಟಾರೆಯಾಗಿ 5 ರಿಂದ 6 ಲಕ್ಷ ರೂಪಾಯಿಗಳ ವಹಿವಾಟು ಆಗಿದೆ ಎಂದು ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ. ಎಸ್. ಎಲ್. ಜಗದೀಶ್ ತಿಳಿಸಿದ್ದಾರೆ.


Share

You cannot copy content of this page