ಬೆಂಗಳೂರು: ಏಪ್ರಿಲ್ 7 ರಂದು ಆರ್ ಪಿಎಫ್ ಪೋಸ್ಟ್/ದಾವಣಗೆರೆ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ದಾವಣಗೆರೆ ಅಬಕಾರಿ ಇಲಾಖೆಯ ಉಪನಿರೀಕ್ಷಕರು ಮತ್ತು ಸಿಬ್ಬಂದಿಯಿಂದ ಸಂಯುಕ್ತವಾಗಿ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್ ಪ್ರೆಸ್ ರೈಲಿನಲ್ಲಿ
ರಾಣಿಬೆನ್ನೂರು ಮತ್ತು ಹರಿಹರ ರೈಲು ನಿಲ್ದಾಣಗಳ ಮಧ್ಯೆ
ಅಚ್ಚರಿ ತಪಾಸಣೆ ನಡೆಸಿ ಅಂದಾಜು ₹6,830/- ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
ತಪಾಸಣೆಯ ವೇಳೆ ಸಾಮಾನ್ಯ ಬೋಗಿಯ ಮುಂಭಾಗದಲ್ಲಿ ಮೂರು ಚೀಲಗಳು ಕಂಡುಬಂದವು. ಪ್ರಯಾಣಿಕರನ್ನು ವಿಚಾರಿಸಿದಾಗ, ಯಾರೂ ಆ ಚೀಲಗಳು ತಮ್ಮದು ಎಂದು ತಿಳಿಸಲಿಲ್ಲ.
ಮಾಹಿತಿ ಮೇರೆಗೆ ಚೀಲಗಳನ್ನು ಪರಿಶೀಲಿಸಿದಾಗ, ಅವುಗಳಲ್ಲಿ ಒಟ್ಟು 14,250 ಮಿ.ಲೀ. ಸಾಮರ್ಥ್ಯದ 19 ಮದ್ಯದ ಬಾಟಲಿಗಳು ಪತ್ತೆಯಾದವು. ಇವು ಗೋವಾ ರಾಜ್ಯಕ್ಕೆ ಸಂಬಂಧಿಸಿದ ಮದ್ಯವಾಗಿದ್ದು, ಇದರ ಅಂದಾಜು ಮೌಲ್ಯ ₹6,830/- ಆಗಿದೆ. ಬಳಿಕ ಈ ಮದ್ಯದ ಬಾಟಲಿಗಳನ್ನು ಆರ್ ಪಿಎಫ್ ಹರಿಹರ ಔಟ್ಪೋಸ್ಟ್ ಮೂಲಕ ದಾವಣಗೆರೆ ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಯಿತು.
ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿದ ನಂತರ, ದಾವಣಗೆರೆ ಅಬಕಾರಿ ಅಧಿಕಾರಿಗಳು 19 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮಕ್ಕಾಗಿ ತಮ್ಮ ವಶಕ್ಕೆ ಪಡೆದರು. ನಂತರ ದಾವಣಗೆರೆ ಅಬಕಾರಿ ಉಪನಿರೀಕ್ಷಕರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
