ಸಮಗ್ರ ಸುದ್ದಿ

ಡಾ.ಬಿ.ಆರ್. ಅಂಬೇಡ್ಕರ್ 135 ನೇ ಜಯಂತಿ|2026ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರಕಟ- ಐವರು ಗಣ್ಯ ಸಾಧಕರಿಗೆ ಗೌರವ

Share

ಬೆಂಗಳೂರು:ಭಾರತ ರತ್ನ, ಸಂವಿಧಾನ ಶಿಲ್ಪಿ ಹಾಗೂ ಆಧುನಿಕ ಭಾರತದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯ ಸುಸಂದರ್ಭದಲ್ಲಿ, ಕರ್ನಾಟಕ ಸರ್ಕಾರವು 2026ನೇ ಸಾಲಿನ ಪ್ರತಿಷ್ಠಿತ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಯನ್ನು ಘೋಷಿಸಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಶೋಷಿತರ ಪರವಾಗಿ ಹೋರಾಟ/ ಸಾಹಿತ್ಯ, ಪತ್ರಿಕೋದ್ಯಮ, ಸಾಹಿತ್ಯ, ಸಂಘಟನೆ, ದೇವದಾಸಿ ವಿಮುಕ್ತಿ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿರುವ ಐವರು ಸಾಧಕರನ್ನು ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅರ್ಹ ಪುರಸ್ಕøತರನ್ನು ಆಯ್ಕೆ ಮಾಡಲು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಚಿಸಲಾಗಿದ್ದ ಆಯ್ಕೆ ಸಮಿತಿಯು ಶಿಫಾರಸು ಮಾಡಿದ ಅರ್ಹ ಸಾಧಕರ ಪಟ್ಟಿಗೆ ಸರ್ಕಾರವು ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

ಪ್ರಶಸ್ತಿ ಪುರಸ್ಕøತರಿಗೆ ತಲಾ ರೂ. 5.00 ಲಕ್ಷ ನಗದು ಬಹುಮಾನ ಹಾಗೂ 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯನ್ನು ಏಪ್ರಿಲ್ 14 ರಂದು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಪ್ರಶಸ್ತಿ ಪುರಸ್ಕøತರ ವಿವರ:

ಮಂಗ್ಳೂರು ವಿಜಯ (ಹೋರಾಟ / ಸಾಹಿತ್ಯ ಕ್ಷೇತ್ರ):

2026 ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾದ ಮಂಗ್ಳೂರು ವಿಜಯರವರು 1972ರಲ್ಲಿ ಚಿತ್ರದುರ್ಗದಲ್ಲಿ ಇದ್ದಾಗ ‘ಸಮಾಜವಾದಿ ಯುವಜನ ಸಭಾ’ ಎಂಬ ಸಂಘಟನೆಯನ್ನು ಸೇರಿದರು. ಆಗ ಅದನ್ನು ಮುನ್ನಡೆಸುತ್ತಿದ್ದವರು ಪ್ರೊ. ಎಂ.ಡಿ.ನಂಜುಡಸ್ವಾಮಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪ್ರೊ. ಚಂದ್ರಶೇಖರ ಪಾಟೀಲ್, ಪಿ. ಲಂಕೇಶ್ ಮುಂತಾದವರು.

ರಾಜ್ಯದಲ್ಲಿ ‘ದಲಿತ ಸಂಘರ್ಷ ಸಮಿತಿ’ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಮಂಗ್ಳೂರು ವಿಜಯ ಅವರು ಅದರೊಂದಿಗೆ ತಮ್ಮನ್ನು ಗುರುತಿಸಿಕೊಂಡು, ಮೊದಲು ಚಿತ್ರದುರ್ಗದಲ್ಲಿ ನಂತರ ಕಲಬುರ್ಗಿಯಲ್ಲಿ ದಲಿತ ಸಂಘರ್ಷ ಸಮಿತಿ ಮೊಳಕೆಯೊಡೆಯುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಇವರು ಸರ್ಕಾರಿ ಕೆಲಸ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿದ್ದರೂ ಕೂಡ ದಲಿತ ಚಳವಳಿಯಿಂದ ಅವರು ಎಂದೂ ದೂರವಾಗಲಿಲ್ಲ.

ಕರ್ನಾಟಕ ಸರ್ಕಾರ ಪ್ರಕಟಿಸಿದ ‘ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು’ ಮಾಲಿಕೆಗೆ ಮಂಗ್ಳೂರು ವಿಜಯ ಅವರು ಇಂಗ್ಲೀಷ್ ಮೂಲದಿಂದ ಲೇಖನಗಳನ್ನು ಅನುವಾದಿಸಿಕೊಟ್ಟಿದ್ದಾರೆ. ದಲಿತ ಚಳವಳಿಯ ಹತ್ತಾರು ವಿಚಾರಸಂಕಿರಣಗಳಲ್ಲಿ ಭಾಗಿ ಆಗಿದ್ದಾರೆ. “ಸಂಘರ್ಷ ಅಂಬೇಡ್ಕರ್ ಜೀವನ ಮತ್ತು ಸಾಧನೆ” ಎಂಬುದು ಅವರ ಮಹತ್ವದ ಕೃತಿ. ಸರ್ಕಾರಿ ಸೇವೆಯಿಂದ 2014ರಲ್ಲಿ ನಿವೃತ್ತರಾದ ಅವರು ನಂತರದ ದಿನಗಳಲ್ಲಿ ‘ಅಂಬೇಡ್ಕರ್ ವಿಚಾರ ವೇದಿಕೆ’ ಎಂಬ ಸಂಸ್ಥೆಯೊಂದಿಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಯುವಜನರಿಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರ ಈ ಸಾಧನೆಗಳನ್ನು ಗುರುತಿಸಿ 2026 ನೇ ಸಾಲಿಗೆ ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಸಿ.ಎಂ. ಮುನಿಯಪ್ಪ (ಹೋರಾಟ / ಪತ್ರಿಕೋದ್ಯಮ):

2026ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾದ ಸಿ.ಎಂ.ಮುನಿಯಪ್ಪ ರವರು 1978 ರಿಂದ ಸರಿಸುಮಾರು ನಾಲ್ಕು ದಶಕಗಳ ಕಾಲ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾಗಿ ಹಾಗೂ ರಾಜ್ಯ ಸಂಚಾಲಕರಾಗಿ ಮತ್ತು ರಾಜ್ಯ ಸಮಿತಿ ಸದಸ್ಯರಾಗಿ ನಿರಂತರವಾದ ಹೋರಾಟದಲ್ಲಿ ತೊಡಗಿಸಿಕೊಂಡಿರುತ್ತಾರೆ. ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ದಲಿತ ಭೂ ಹೋರಾಟಗಳು, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು, ಕೊಲೆ, ಅತ್ಯಾಚಾರದಂತಹ ಬರ್ಬರ ಕೃತ್ಯಗಳ ವಿರುದ್ದ ಸಮುದಾಯವನ್ನು ಸಂಘಟಿಸಿ, ಪ್ರತಿಭಟನೆ ರೂಪಿಸುವುದರೊಂದಿಗೆ ಎಚ್ಚರ ಮೂಡಿಸಿದ್ದು ಮಹತ್ವದ ವಿಚಾರ.

ಸಿ.ಎಂ.ಮುನಿಯಪ್ಪರವರು ಜೀತಪದ್ದತಿ ನಿರ್ಮೂಲನೆ, ದಲಿತ ಸಮುದಾಯದ ಶೈಕ್ಷಣಿಕ ಉನ್ನತಿ ಹಾಗೂ ಸರ್ಕಾರಿ ಸವಲತ್ತುಗಳನ್ನು ಸಮುದಾಯಕ್ಕೆ ತಲುಪಿಸಲು ಶ್ರಮಿಸಿರುತ್ತಾರೆ. ದಲಿತ ಸಮುದಾಯದ ಸ್ವಾವಲಂಬಿ ಹಾಗೂ ಆತ್ಮಗೌರವದ ಬದುಕಿಗಾಗಿ ವೈಯಕ್ತಿಕ ಬದುಕನ್ನು ಮುಡುಪಾಗಿಟ್ಟಿರುತ್ತಾರೆ. ಇವರು ʼಸಂಚಿಕೆʼ ದಿನಪತ್ರಿಕೆಯ ಸಂಪಾದಕ ಪ್ರಕಾಶಕರಾಗಿ ದಲಿತರ ಪರವಾದ ನೈತಿಕ ದ್ವನಿಯಾಗುವ ದಿಟ್ಟಪ್ರಯತ್ನವನ್ನು ಮಾಡಿರುತ್ತಾರೆ.

2015 ರಲ್ಲಿ ಪತ್ರಿಕಾರಂಗದ ಸೇವೆಗಾಗಿ ʼಮಾಧ್ಯಮ ಅಕಾಡೆಮಿ ಪ್ರಶಸ್ತಿʼ, ಮಾನವ ಬಂಧುತ್ವ ವೇದಿಕೆಯ ʼಬಿ. ಕೃಷ್ಣಪ್ಪ ಪ್ರಶಸ್ತಿʼ, 2016 ರಲ್ಲಿ ಸಮಾಜಸೇವೆಗಾಗಿ ʼಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿʼ ಮತ್ತು 2023 ರಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ʼಗೌರವ ಡಾಕ್ಟರೇಟ್ʼಪದವಿಯನ್ನು ಪಡೆದಿರುತ್ತಾರೆ. ಇವರ ಈ ಸಾಧನೆಗಳನ್ನು ಗುರುತಿಸಿ 2026ನೇ ಸಾಲಿಗೆ ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಹೆಚ್.ಎನ್.ಅಣ್ಣಯ್ಯ (ಹೋರಾಟ):

2026ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾದ ಹೆಚ್.ಎನ್. ಅಣ್ಣಯ್ಯರವರು ಸಕಲೇಶಪುರ ತಾಲ್ಲೂಕಿನಲ್ಲಿ ಹಲವಾರು ಜನ ಮುಖಂಡರೊಂದಿಗೆ ಜೊತೆಗೂಡಿ 250 ಭೂರಹಿತರಿಗೆ ಭೂಮಿಗಾಗಿ ಹೋರಾಟ ಮಾಡಿರುತ್ತಾರೆ. ಬಗರ್ ಹುಕುಂ ಸಾಗುವಳಿ ಭೂಮಿ ಖಾಯಂಗಾಗಿ ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಹೋರಾಟ ಮಾಡಿ, ಸಕಲೇಶಪುರ ನಗರ, ಕುಶಾಲನಗರ ಬಡಾವಣೆಯ 80 ಕುಟುಂಬಗಳಿಗೆ ನಿವೇಶನ ಒದಗಿಸುವಲ್ಲಿ ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ ​ಅಸ್ಪøಶ್ಯತೆ ಅಚರಣೆಯ ವಿರುದ್ದದ ಹೋರಾಟಗಳಲ್ಲಿ ಭಾಗವಹಿಸಿರುತ್ತಾರೆ.

ಹೆಚ್.ಎನ್. ಅಣ್ಣಯ್ಯರವರು ದೇವದಾಸಿ ಪದ್ದತಿಯ ವಿರುದ್ದದ ಹೋರಾಟ ಹಾಗೂ ಚಂದ್ರಗುತ್ತಿಯ ಯಲ್ಲಮ್ಮ ದೇವರಿಗೆ ಹೆಣ್ಣು ಮಕ್ಕಳ ಬೆತ್ತಲೆ ಸೇವೆ ನಡೆಯುತ್ತಿದ್ದುದನ್ನು ನಿಲ್ಲಿಸುವಂತಹ ಹೋರಾಟಗಳನ್ನು ಮಾಡಿರುತ್ತಾರೆ. ಸಕಲೇಶಪುರ ತಾಲ್ಲೂಕಿನಲ್ಲಿ ಎಲ್ಲಾ ಹಳ್ಳಿಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿಗಾಗಿ ಹೋರಾಟ, ದಲಿತರ ಮನೆ ಗುಟುಕು ನೀರನ್ನು ಕುಡಿಯಿರಿ ಕಾರ್ಯಕ್ರಮ, ಈಚಲುಮರದ ಹೆಂಡವನ್ನು ನಿಲ್ಲಿಸುವಿಕೆಗಾಗಿ ಮತ್ತು ಹೋಬಳಿಗೊಂದು ವಸತಿ ಶಾಲೆಗಾಗಿ ಹೋರಾಟಗಳನ್ನು ಮಾಡಿರುತ್ತಾರೆ.

ಭೂಹೀನ ಮಣ್ಣಿನ ಮಕ್ಕಳ ಸಮಗ್ರ ಭೂಮಿ ಹೋರಾಟದ ರಾಜ್ಯ ಸಮ್ಮೇಳನದಲ್ಲಿ ಇವರು ಸಹ ಪ್ರಮುಖರಾಗಿದ್ದರು. ಇವರಿಗೆ “ಮಲೆನಾಡ ದಲಿತ ಕಣ್ಮಣಿ” ಮತ್ತು ದಲಿತಸಿರಿ” ಎಂಬ ಪುರಸ್ಕಾರಗಳನ್ನು ನೀಡಲಾಗಿರುತ್ತದೆ. ಇವರ ಈ ಸಾಧನೆಗಳನ್ನು ಗುರುತಿಸಿ 2026ನೇ ಸಾಲಿಗೆ ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಡಾ.ಹನುಮಂತರಾವ್ ಬಿ ದೊಡ್ಡಮನಿ (ಸಾಹಿತ್ಯ / ಸಂಘಟನೆ):

2026 ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾದ ಡಾ. ಹನುಮಂತ ರಾವ್ ಬಿ. ದೊಡ್ಡಮನಿರವರು ಶೋಷಿತರ, ದಮನಿತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಹೋರಾಟ ಮಾಡಿರುತ್ತಾರೆ. ಇವರು ಡಾ.ಬಿ.ಆರ್. ಅಂಬೇಡ್ಕರ್ ರವರ ಚಿಂತನೆಯಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ತತ್ವಗಳ ಸಿದ್ದಾಂತದ ಅಡಿಯಲ್ಲಿ ಸುಮಾರು 50 ವರ್ಷಗಳಿಂದಲೂ ಹಲವಾರು ಸಂಘಟನೆಗಳಲ್ಲಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಅಧ್ಯಕ್ಷರಾಗಿ ದಲಿತರ ಪರವಾಗಿ ಹೋರಾಟಗಳನ್ನು ಕೈಗೊಂಡಿದ್ದು, ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪ್ರಚಾರಪಡಿಸಲು ಮುಂಚೂಣಿಯಲ್ಲಿದ್ದಾರೆ.

ಡಾ. ಹನುಮಂತರಾವ್ ಬಿ ದೊಡ್ಡಮನಿ ರವರು ದಲಿತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವಂತಹ ಕೃತಿ/ ಕಾವ್ಯಗಳನ್ನು ರಚಿಸಿದ್ದು, ಅವುಗಳಲ್ಲಿ “ನೊಂದವರ ಹಾಡು”, “ದಲಿತಾಂತರಂಗ”, “ದಲಿತ ದರ್ಶನ”, “ಡಾ.ಬಿ.ಆರ್. ಅಂಬೇಡ್ಕರ್ ಮಹಾಕಾವ್ಯ”, “ಬುದ್ದರ ಮಹಾಕಾವ್ಯ”, “ದಲಿತಲೋಕದ ದಳಪತಿ”, “ದಲಿತಲೋಕದ ಧೃವತಾರೆ”, ಮತ್ತು “ದಲಿತಧನಿ” ಕೃತಿ / ಕಾವ್ಯಗಳು ಪ್ರಮುಖವಾಗಿರುತ್ತವೆ. ಇವುಗಳ ಮುಖಾಂತರ ದಲಿತರು ಮುನ್ನಲೆಗೆ ಬರಲು ಶ್ರಮಿಸಿರುತ್ತಾರೆ. ಮೈಸೂರು ವಿಶ್ವವಿದ್ಯಾಲಯ, ಕಲಬುರಗಿ ವಿಶ್ವವಿದ್ಯಾಲಯ ಹಾಗೂ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅನೇಕ ವಿದ್ಯರ್ಥಿಗಳು ಇವರ ಕಾವ್ಯ, ನಾಟಕ, ಜಾನಪದ ಮತ್ತು ಕಥಾಸಂಕಲನಗಳ ಕುರಿತು ಸಂಶೋಧನೆಯನ್ನು ಮಾಡಿರುತ್ತಾರೆ.

ಸಾಹಿತ್ಯ ಕ್ಷೇತ್ರದ ಸಾಧನೆಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗೂ ಸಹ ಭಾಜನರಾಗಿರುತ್ತಾರೆ. ಇವರ ಈ ಸಾಧನೆಗಳನ್ನು ಗುರುತಿಸಿ 2026 ನೇ ಸಾಲಿಗೆ ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರಶಸ್ತಿಗೆ ಪರಿಗಣಿಸಲಾಗಿದೆ. 

ಶ್ರೀಮತಿ ಶೋಭಾ ಗಸ್ತಿ (ದೇವದಾಸಿ ವಿಮುಕ್ತಿ):

2026ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಶೋಭಾ ಗಸ್ತಿ ರವರು ತಮ್ಮ13 ನೇ ವಯಸ್ಸಿನಲ್ಲಿ ದೇವದಾಸಿ ಸಂಪ್ರದಾಯಕ್ಕೆ ಸಮರ್ಪಿತರಾದವರು. ಈ ದುಷ್ಟಪದ್ಧತಿಯಲ್ಲಿ ಸಿಲುಕಿಕೊಂಡೇ ತಮ್ಮ ಶೈಕ್ಷಣಿಕ ಪ್ರಯಾಣವನ್ನು 10 ನೇ ತರಗತಿಯವರೆಗೆ ಮುಂದುವರೆಸಿರುತ್ತಾರೆ.

ಇವರು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಿರುತ್ತಾರೆ. ದೇವದಾಸಿ ಮಹಿಳೆಯರಿಗಾಗಿ ಸಭೆಗಳನ್ನು ಆಯೋಜಿಸಿ ಮತ್ತು ಸಂಘಗಳನ್ನು ರಚಿಸಿ ಜಾಗೃತಿ ಮೂಡಿಸಲು ಮತ್ತು ದೇವದಾಸಿ ಸಂಪ್ರದಾಯದ ನಿರ್ಮೂಲನೆಗಾಗಿ ಅವಿಶ್ರಾಂತವಾಗಿ ಶ್ರಮಿಸಿರುತ್ತಾರೆ.

1997 ರಲ್ಲಿ ಮಹಿಳಾ ಅಭಿವೃದ್ದಿ ಮತ್ತು ರಕ್ಷಣಾ ಸಂಸ್ಥೆಯನ್ನು (MASS) ಸ್ಥಾಪಿಸಿದ್ದು, ಈ ಸಂಸ್ಥೆ ವತಿಯಿಂದ ಸುಮಾರು 3600 ದೇವದಾಸಿ ಮಹಿಳೆಯರನ್ನು ಒಗ್ಗೂಡಿಸಿ ದೇವದಾಸಿ ಪದ್ದತಿಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿರುತ್ತಾರೆ. ಇವರು ತಮ್ಮ ʼಅಮ್ಮʼ (ಅಸುರಕ್ಷಿತ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ) ಪ್ರತಿμÁ್ಠನದ ಮೂಲಕ ಅಪಾಯದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರ ಈ ಕೆಲಸವು ಚಿಕ್ಕೋಡಿ, ನಿಪ್ಪಾಣಿ, ಮೂಡಲಗಿ, ಗೋಕಾಕ ಮತ್ತು ರಾಯಭಾಗ ತಾಲ್ಲೂಕು ಸೇರಿದಂತೆ ಒಟ್ಟು 85 ಹಳ್ಳಿಗಳನ್ನು ವ್ಯಾಪಿಸಿದ್ದು, ದೇವದಾಸಿಪದ್ದತಿ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ದತಿ ಮತ್ತು ಮಕ್ಕಳ ಕಳ್ಳಸಾಗಣೆ ಮುಂತಾದ ಸಮಸ್ಯೆಗಳನ್ನು ಪರಿಹರಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುತ್ತಾರೆ.

ಶ್ರೀಮತಿ ಶೋಭಾ ಗಸ್ತಿ ಅವರು 3,600 ಮಹಿಳೆಯರನ್ನು ದೇವದಾಸಿ ಪದ್ದತಿಯಿಂದ ಮುಕ್ತಗೊಳಿಸಲು ಪ್ರಯತ್ನಿಸಿದ್ದು, 210 ಬಾಲಕೀಯರು ದೇವದಾಸಿ ಪದ್ದತಿ ಪ್ರವೇಶಿಸುವುದನ್ನು ತಡೆಗಟ್ಟಿರುತ್ತಾರೆ. ಇದಲ್ಲದೇ 281 ಬಾಲ್ಯವಿವಾಹಗಳನ್ನು ತಡೆಗಟ್ಟಿರುವುದು ಮತ್ತು ಮಕ್ಕಳನ್ನು ಕಳ್ಳಸಾಗಣೆಯಿಂದ ರಕ್ಷಿಸಿರುವುದು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಶಾಲೆ ಬಿಟ್ಟ 274 ಮತ್ತು 60 ಬಾಲಕಾರ್ಮಿಕ ಮಕ್ಕಳನ್ನು ಶಾಲೆಗೆ ಮರಳುವಂತೆ ಮಾಡುವಲ್ಲಿ ಶ್ರಮಿಸಿರುತ್ತಾರೆ. ಇವರ ಸಾಧನೆಗಳನ್ನು ಗುರುತಿಸಿ 2020-21ನೇ ಸಾಲಿನಲ್ಲಿ ರಾಷ್ಟ್ರಪತಿಯವರಿಂದ ʼನಾರಿಶಕ್ತಿʼ ಪ್ರಶಸ್ತಿಗೂ ಸಹ ಭಾಜನರಾಗಿರುತ್ತಾರೆ. ಇವರ ಎಲ್ಲಾ ಸಮಾಜಮುಖಿ ಕೆಲಸಗಳನ್ನು ಗುರುತಿಸಿ 2026ನೇ ಸಾಲಿಗೆ ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರಶಸ್ತಿಗೆ ಪರಿಗಣಿಸಲಾಗಿದೆ


Share

You cannot copy content of this page