ಬೆಂಗಳೂರು: ಭಾರತದಂತಹ ಬೆಳೆಯುತ್ತಿರುವ ದೇಶಕ್ಕೆ ಆರ್ಥಿಕ ಪ್ರಗತಿ ಮತ್ತು ಪರಿಸರ ರಕ್ಷಣೆ ಎರಡೂ ಅಷ್ಟೇ ಮುಖ್ಯ. ಇವೆರಡರಲ್ಲಿ ಒಂದನ್ನು ಮಾತ್ರ ಆರಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಎರಡನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವಂತಹ ವ್ಯವಸ್ಥೆಯ ಅಳವಡಿಸಿಕೊಳ್ಳಬೇಕಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಜಸ್ಟಿಸ್ ಸೂರ್ಯ ಕಾಂತ್ ಅವರು ತಿಳಿಸಿದರು.
ಇಂದು ಬೆಂಗಳೂರು ನಗರ ಖಾಸಗಿ ಹೋಟೇಲ್‌ನಲ್ಲಿ ಕಾಮನ್‌ವೆಲ್ತ್ ಲೀಗಲ್ ಎಜುಕೇಶನ್ ಅಸೋಸಿಯೇಷನ್ (𝗖𝗟𝗘𝗔) ಮತ್ತು ಕರ್ನಾಟಕ ಸರ್ಕಾರ ಜಂಟಿಯಾಗಿ ಆಯೋಜಿಸಿರುವ “ಸುಸ್ಥಿರ ಇಂಧನ: ಭಾರತದ ಕಾರ್ಯಸೂಚಿ @ 𝟮𝟬𝟰𝟳” ಕುರಿತ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಭಿವೃದ್ಧಿಶೀಲ ರಾಷ್ಟ್ರವೊಂದಕ್ಕೆ ಪರಿಸರ ರಕ್ಷಣೆ ಮತ್ತು ಆರ್ಥಿಕ ಪ್ರಗತಿಯು ಒಂದನ್ನೊಂದು ಬಿಟ್ಟು ಆಯ್ಕೆ ಮಾಡುವಂತಹ ವಿಷಯಗಳಲ್ಲ ಎಂದು ಪ್ರತಿಪಾದಿಸಿದರು. 𝟮𝟬𝟰𝟳 ರ ವಿಕಸಿತ ಭಾರತಕ್ಕಾಗಿ ‘ಇಂಧನ ನ್ಯಾಯ’ದ ದೃಷ್ಟಿಕೋನವನ್ನು ಮಂಡಿಸಿದ ಅವರು, ಶುದ್ಧ ಗಾಳಿ, ಶುದ್ಧ ನೀರು ಮತ್ತು ನವೀಕರಿಸಬಹುದಾದ ಭವಿಷ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ದೇಶವು ಬೆಳೆಯಲು ಅನುವು ಮಾಡಿಕೊಡುವ ನೈತಿಕ ವಾಸ್ತುಶಿಲ್ಪವೇ ಈ ಇಂಧನ ನ್ಯಾಯ ಎಂದರು.
ಭಾರತದ ಸಂವಿಧಾನವು ಅಂತರ್ಗತವಾಗಿ ಈ ಸಮತೋಲನಕ್ಕೆ ಉತ್ತೇಜನ ನೀಡುತ್ತದೆ. ಅಭಿವೃದ್ಧಿಯ ಹಕ್ಕು ಮತ್ತು ಸ್ವಚ್ಛ ಪರಿಸರದ ಹಕ್ಕುಗಳೆರಡೂ ಸಂವಿಧಾನದ 𝗔𝗿𝘁𝗶𝗰𝗹𝗲 𝟮𝟭 ರ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು. ಪರಿಸರ ಸಂರಕ್ಷಣೆಯನ್ನು ಅಭಿವೃದ್ಧಿಯ ಅಡಿಪಾಯವಾಗಿ ಸಂಯೋಜಿಸುವಂತಹ ಹೊಸ ಮಾದರಿಯನ್ನ ಅನುಷ್ಠಾನಗೊಳಿಸುವ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದರು.
ವಿಶೇಷ ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಯಯ್ಯನವರು ಮಾತನಾಡಿ , ಭಾರತದ ಇಂಧನ ವಲಯದಲ್ಲಿ ನವೀಕೃತ ಇಂಧನದ ಪ್ರಾಮುಖ್ಯತೆಯ ಬಗ್ಗೆ ಬೆಳಕು ಚೆಲ್ಲಿದ ಅವರು, ನಾಗರೀಕರ ಜೀವನಮಟ್ಟವನ್ನು ಸುಧಾರಿಸಲು ಮತ್ತು ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲು ಮುಂದಿನ ಎರಡು ದಶಕಗಳಲ್ಲಿ ರಾಷ್ಟ್ರೀಯ ಇಂಧನ ಬಳಕೆಯು ಸುಮಾರು ನಾಲ್ಕು ಪಟ್ಟು ಬೆಳೆಯಬೇಕಾಗಿದೆ ಎಂದು ಅವರು ವಿವರಿಸಿದರು.
ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ರಾಜ್ಯದ ಶೇ. 𝟳𝟬% ರಷ್ಟು ಸ್ಥಾಪಿತ ಸಾಮರ್ಥ್ಯ ಉತ್ಪಾದನೆಯಾಗುತ್ತಿದ್ದು, ಈ ಪರಿವರ್ತನೆಯಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ. ಮುಂದಿನ ದಿನಗಳಲ್ಲಿ, ಅಂದರೆ 𝟮𝟬𝟯𝟬 ರ ವೇಳೆಗೆ ಪ್ರಸ್ತುತ ಇರುವ 𝟯𝟴 ಗಿಗಾವ್ಯಾಟ್ ಉತ್ಪಾದನೆಯನ್ನು ನಿಂದ 𝟲𝟬 ಗಿಗಾವ್ಯಾಟ್ ಉತ್ಪಾದನೆಯನ್ನು ಸಾಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಕರ್ನಾಟಕ ರಾಜ್ಯ ಹೊಂದಿದೆ ಎಂದು ಹೇಳಿದರು.
ಇಂಧನ ಯೋಜನೆಗಳು ಜನರು, ಭೂಮಿ ಮತ್ತು ಪರಿಸರ ವ್ಯವಸ್ಥೆಗಳೊಂದಿಗೆ ಆಳವಾಗಿ ಬೆಸೆದುಕೊಂಡಿವೆ. ನವೀಕರಿಸಬಹುದಾದ ಇಂಧನ ಯೋಜನೆಗಳಿಗಾಗಿ ಕೃಷಿ ಭೂಮಿಯನ್ನು ಸುಲಭವಾಗಿ ಗುತ್ತಿಗೆಗೆ ನೀಡಲು ಮತ್ತು ಪರಿವರ್ತಿಸಲು ಅನುವು ಮಾಡಿಕೊಡುವ ಕರ್ನಾಟಕದ ಹೂಡಿಕೆದಾರರ ಸ್ನೇಹಿ ವಿಧಾನವನ್ನು ಅವರು ವಿವರಿಸಿದರು. ಈ ಮೂಲಕ ರೈತರನ್ನು ಭೂಮಿಯಿಂದ ಹೊರಹಾಕುವ ಬದಲು ಅವರನ್ನು ಪಾಲುದಾರರನ್ನಾಗಿ ಮಾಡುವ, ನ್ಯಾಯಯುತ ಮತ್ತು ಸ್ಥಿರ ಆದಾಯವನ್ನು ಖಚಿತಪಡಿಸುವಂತಹ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಭೂಮಿ, ಒಪ್ಪಂದಗಳು ಮತ್ತು ಪರಿಸರದ ಕಾಳಜಿಗಳ ಕಾನೂನು ಸಂಕೀರ್ಣತೆಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕಾನೂನಿನ ಆಡಳಿತವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪ್ರಮುಖ ಪಾತ್ರವನ್ನು ಶ್ಲಾಘಿಸಿದರು. ಪರಿಸರ ಸಂರಕ್ಷಣೆ ಮತ್ತು ಸಮುದಾಯದ ಹಕ್ಕುಗಳು ಅತಿಮುಖ್ಯವಾದರೂ, ನಿರ್ಣಾಯಕ ಮೂಲಸೌಕರ್ಯ ಯೋಜನೆಗಳು ಅನಗತ್ಯವಾಗಿ ವಿಳಂಬವಾಗದಂತೆ ನೋಡಿಕೊಳ್ಳಲು ವಿಶಾಲವಾದ ಅಭಿವೃದ್ಧಿ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ಮಾತನಾಡಿ, ಇಂಧನ ಕ್ಷೇತ್ರ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಮತೋಲನದ ಬಗ್ಗೆ ಮಾತನಾಡುತ್ತಾ, “ಜಾಗತಿಕ ತಾಪಮಾನ ಏರಿಕೆಯ ಸವಾಲುಗಳನ್ನು ಎದುರಿಸಲು ಕಾನೂನು ವ್ಯವಸ್ಥೆಯು ಚುರುಕಾಗಬೇಕಿದೆ. ಸುಸ್ಥಿರ ಇಂಧನ ನೀತಿಗಳು ಕೇವಲ ಕಾಗದದ ಮೇಲೆ ಇರಬಾರದು; ಅವುಗಳ ಪರಿಣಾಮಕಾರಿ ಜಾರಿಗೆ ನ್ಯಾಯಾಂಗವು ಬೆನ್ನೆಲುಬಾಗಿ ನಿಲ್ಲಲಿದೆ. ತಾಂತ್ರಿಕ ಆವಿಷ್ಕಾರಗಳಿಗೆ ಪೂರಕವಾಗಿ ನಮ್ಮ ಕಾನೂನು ಸಂಹಿತೆಗಳನ್ನು ನಾವು ಕಾಲಕಾಲಕ್ಕೆ ನವೀಕರಿಸಿಕೊಳ್ಳಬೇಕು,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹೈ-ಕೋರ್ಟಿನ ನ್ಯಾಯಮೂರ್ತಿಗಳು ಹಾಗೂ ಸಮ್ಮೇಳನದ ಆಯೋಜನಾ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಸಿಂಗ್ ಅವರು, “ಭವಿಷ್ಯದ ಪೀಳಿಗೆಗೆ ಸುಸ್ಥಿರ ಪರಿಸರವನ್ನು ಬಿಟ್ಟು ಹೋಗುವುದು ನಮ್ಮ ಸಾಂವಿಧಾನಿಕ ಜವಾಬ್ದಾರಿ. ಹಸಿರು ಇಂಧನವನ್ನು ಸಾರ್ವತ್ರಿಕಗೊಳಿಸಲು ಮತ್ತು ಸಾಮಾನ್ಯ ಜನರಿಗೆ ಕೈಗೆಟುಕುವಂತೆ ಮಾಡಲು ಇರುವ ಕಾನೂನು ಅಡೆತಡೆಗಳನ್ನು ನಿವಾರಿಸುವುದು ಇಂದಿನ ಸಮ್ಮೇಳನದ ಪ್ರಮುಖ ಗುರಿಯಾಗಬೇಕು. ಅಭಿವೃದ್ಧಿ ಮತ್ತು ಪರಿಸರದ ನಡುವೆ ಒಂದು ಸುಸ್ಥಿರ ಸೇತುವೆಯನ್ನು ನಿರ್ಮಿಸುವುದು ಅನಿವಾರ್ಯ,” ಎಂದು ಒತ್ತಿ ಹೇಳಿದರು.
ಕಾಮನ್ ವೆಲ್ತ್ ಲೀಗಲ್ ಎಜುಕೇಷನ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರೊ. ಡಾ. ಎಸ್. ಶಿವಕುಮಾರ್ ಅವರು ಸಮ್ಮೇಳನದ ಆಶಯವನ್ನು ವಿವರಿಸುತ್ತಾ, “ಸುಸ್ಥಿರ ಇಂಧನಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಒಂದು ಬಲಿಷ್ಠವಾದ ಕಾನೂನು ಶಿಕ್ಷಣ ಮತ್ತು ಸಂಶೋಧನೆಯ ಅಗತ್ಯವಿದೆ. ಅಂತರಾಷ್ಟ್ರೀಯ ಸಹಕಾರದ ಮೂಲಕ ಈ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲು CLEA ಶ್ರಮಿಸುತ್ತಿದೆ. ಈ ಸಮ್ಮೇಳನವು ನೀತಿ ನಿರೂಪಕರು ಮತ್ತು ತಜ್ಞರ ನಡುವೆ ಜ್ಞಾನ ವಿನಿಮಯಕ್ಕೆ ಉತ್ತಮ ವೇದಿಕೆಯಾಗಿದೆ,” ಎಂದು ನುಡಿದರು.
“ಇಂಧನ ನ್ಯಾಯಕ್ಕಾಗಿ ಕಾನೂನು, ನೀತಿ ಮತ್ತು ನಾವೀನ್ಯತೆಯ ಮರು-ಕಲ್ಪನೆ” ವಿಷಯಾಧಾರಿತ ಈ ಸಮ್ಮೇಳನವು ನಾಳೆಯೂ ಮುಂದುವರಿಯಲಿದ್ದು, ಭಾರತದ ಅಟಾರ್ನಿ ಜನರಲ್ ಡಾ. ಆರ್. ವೆಂಕಟರಮಣಿ ಅವರು ಈ ವಿಷಯದ ಬಗ್ಗೆ ತಮ್ಮ ಭಾಷಣವನ್ನು ಮಂಡಿಸಲಿದ್ದಾರೆ. ಭಾರತದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟಿಸ್ ವಿಕ್ರಮ್ ನಾಥ್ ಅವರ ಸಮಾರೋಪ ಭಾಷಣದೊಂದಿಗೆ ಹಾಗೂ ಬೆಂಗಳೂರು ಡಿಕ್ಲರೇಷನ್ ಜೊತೆಯಲ್ಲಿ ಈ ಸಮ್ಮೇಳನ ಮುಕ್ತಾಯಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ಮತ್ತು ಬೆಸ್ಕಾಂನ ಹಿರಿಯ ಅಧಿಕಾರಿಗಳು ಹಾಗೂ ಕಾನೂನು ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.
