ಸಮಗ್ರ ಸುದ್ದಿ

“ಧಾರವಾಡ ಆಕಾಶವಾಣಿ ಕೇಂದ್ರ” ಸ್ಥಳಾಂತರಿಸದಂತೆ ಅಶ್ವಿನಿ ವೈಷ್ಣವ ಆದೇಶ

Share

ನವದೆಹಲಿ: ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ ಸ್ಥಳಾಂತರ ನಿರ್ಧಾರವನ್ನು ಪ್ರಸಾರ ಭಾರತಿ ಹಿಂತೆಗೆದುಕೊಂಡಿದ್ದು, ಉತ್ತರ ಕರ್ನಾಟಕ ಜನರ ಒತ್ತಾಸೆ, ಅಭಿಲಾಷೆಯಂತೆ ಧಾರವಾಡದಲ್ಲಿಯೇ ಮುಂದುವರಿಯಲಿದೆ.

ಧಾರವಾಡ ಸಂಸದರೂ ಆಗಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಮನವಿ ಮೇರೆಗೆ ಪ್ರಸಾರ ಭಾರತಿ ಈ ಕ್ರಮಕ್ಕೆ ಮುಂದಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮನೆಮಾತಾಗಿರುವ ಜನಪ್ರಿಯ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಧಾರವಾಡದಲ್ಲಿಯೇ ಮುಂದುವರಿಸುವಂತೆ ಸಚಿವರು ಕೇಂದ್ರದ ಗಮನ ಸೆಳೆದಿದ್ದರು.

ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಪ್ರಸಾರ ಭಾರತಿ ಸಕ್ಷಮ ಪ್ರಾಧಿಕಾರ ನಿರ್ಣಯಿಸಿತ್ತು. ಈ ಸಂಬಂಧ ಉತ್ತರ ಕರ್ನಾಟಕದ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತಲ್ಲದೆ, ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಹ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಪರ್ಕಿಸಿ ಆಕಾಶವಾಣಿ ಕೇಂದ್ರವನ್ನು ಧಾರವಾಡದಲ್ಲೇ ಮುಂದುವರಿಸುವಂತೆ ಕೋರಿದ್ದರು. ಧಾರವಾಡ ಪ್ರಸಾರ ಭಾರತೀಯ ಕೇಂದ್ರದ ಕಾರ್ಯವ್ಯಾಪ್ತಿ ಮತ್ತು ಅದನ್ನು ಧಾರವಾಡದಲ್ಲಿಯೇ ಮುಂದುವರಿಸುವ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.

ಜೋಶಿ ಮನವಿಗೆ ಅಶ್ವಿನಿ ವೈಷ್ಣವ್ ಸ್ಪಂದನೆ: ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ಸಚಿವ ಅಶ್ವಿನಿ ವೈಷ್ಣವ್ ಸ್ಪಂದಿಸಿದ್ದು, ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಧಾರವಾಡದಲ್ಲಿಯೇ ಮುಂದುವರಿಸುವಂತೆ ಪ್ರಸಾರ ಭಾರತಿಗೆ ಆದೇಶಿಸಿದ್ದಾರೆ. ಪ್ರಯುಕ್ತ ಸಚಿವ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಶ್ವಿನಿ ವೈಷ್ಣವ ಅವರಿಗೆ ಉತ್ತರ ಕರ್ನಾಟಕ ಜನರ ಪರವಾಗಿ ಧನ್ಯವಾದ ಅರ್ಪಿಸಿದ್ದಾರೆ.


Share

You cannot copy content of this page