ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ತ್ಯಾಜ್ಯಮುಕ್ತ ನಗರ ಪಾಲಿಕೆ ರೂಪಿಸುವ ಉದ್ದೇಶದಿಂದ ಹಾಗೂ ಸ್ವಚ್ಛ ಸರ್ವೇಕ್ಷಣ 2025-26 ರ ಶ್ರೇಯಾಂಕದಲ್ಲಿ ಉತ್ತಮ ಸ್ಥಾನ ಗಳಿಸುವ ನಿಟ್ಟಿನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದು, 3.5 ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ.
ಈಗಾಗಲೇ ರೂಪಿಸಲಾದ ಕಾರ್ಯ ಯೋಜನೆಯ (ಆಕ್ಷನ್ ಪ್ಲಾನ್) ಅನ್ವಯ 8 ನೇ ಭಾಗವಾಗಿ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 26 ರಸ್ತೆ ವಿಭಜಕಗಳು ಹಾಗೂ ರಸ್ತೆಯಲ್ಲಿನ ದ್ವೀಪಗಳನ್ನು (ಐಲ್ಯಾಂಡ್) ಆಯ್ಕೆ ಮಾಡಿಕೊಂಡು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಹಾಗೂ ಸುತ್ತಮುತ್ತ ತ್ಯಾಜ್ಯ ಹಾಕದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ತಿಳಿಸಿದ್ದಾರೆ.
ಸ್ವಚ್ಛತಾ ಕಾರ್ಯದಲ್ಲಿ ಒಟ್ಟು 291 ಜನ ಪೌರಕಾರ್ಮಿಕರು ಹಾಗೂ ಇತರೆ ಸ್ವಚ್ಛತೆ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ಈ ಸ್ವಚ್ಛತಾ ಅಭಿಯಾನದಲ್ಲಿ ಡಿಜಿಎಂ ಭೀಮೇಶ್ ನಾಯಕ್, ಸಂಬಂಧಿತ ವಿಭಾಗದ ಎ.ಜಿ.ಎಂ ಗಳು ಅಧಿಕಾರಿಗಳು, ಪೌರಕಾರ್ಮಿಕರು ಹಾಗೂ ಇತರೆ ಸಿಬ್ಬಂದಿಗಳು ಭಾಗಿಯಾಗಿದ್ದರು.
