ಸಮಗ್ರ ಸುದ್ದಿ

ಎಸ್.ಎಸ್.ಎಲ್.ಸಿ ಪರೀಕ್ಷೆ-ಕ್ರೈಸ್ ವ್ಯಾಪ್ತಿಯ ವಸತಿ ಶಾಲಾ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ- ಸಚಿವ ಡಾ.ಹೆಚ್.ಸಿ.ಮಹದೇವಪ್ಪ

Share

ಬೆಂಗಳೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಕ್ರೈಸ್ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟಾರೆ 34,809 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅಪ್ರತಿಮ ಸಾಧನೆ ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್. ಸಿ. ಮಹದೇವಪ್ಪ ಅವರು ತಿಳಿಸಿದರು.

ಇಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘ (KREIS) ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕರ್ನಾಟಕವು ದೇಶದಲ್ಲಿಯೇ ಅತಿ ಹೆಚ್ಚು ವಸತಿಯುತ ಶಾಲಾ ಕಾಲೇಜುಗಳನ್ನು ನಡೆಸುತ್ತಿರುವ ಹೆಗ್ಗಳಿಕೆ ಹೊಂದಿದೆ. ಕ್ರೈಸ್ ವ್ಯಾಪ್ತಿಯಲ್ಲಿ 2,17,970 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಈ ಪೈಕಿ 874 ವಸತಿ ಶಾಲಾ ಕಾಲೇಜುಗಳಿದ್ದು, 539 ಪರಿಶಿಷ್ಟ ಜಾತಿ, 156 ಪರಿಶಿಷ್ಟ ವರ್ಗದ ಮತ್ತು 179 ಹಿಂದುಳಿದ ವರ್ಗದ ವಸತಿ ಶಾಲೆ / ಕಾಲೇಜುಗಳು ಆಂಗ್ಲ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಶಿಕ್ಷಣಕ್ಕೆ ರಾಜ್ಯಸರ್ಕಾರದ ಮಹತ್ವ:

788 ವಸತಿ ಶಾಲೆಗಳಲ್ಲಿ ಒಟ್ಟು 35014 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 34809 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕ್ರೈಸ್ ನ ಕಳೆದ ವರ್ಷದ ಫಲಿತಾಂಶಕ್ಕಿಂತ ಶೇ. 8.37 ಹೆಚ್ಚಳವಾಗಿದೆ. ವಸತಿ ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶವಿದ್ದು, ಒಟ್ಟು 30971 ವಿದ್ಯಾರ್ಥಿಗಳು (ಶೇ 89ಕ್ಕಿಂತ ಹೆಚ್ಚು) ಡಿಸ್ಟಿಂಗ್ಷನ್ ಹಾಗೂ ಪ್ರಥಮ ದರ್ಜೆ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿರುವುದರಿಂದ ಈ ಫಲಿತಾಂಶ ಸಾಧ್ಯವಾಗಿದೆ ಎಂದು ತಿಳಿಸಿದರು.

ಲಿಂಗವಾರು ಫಲಿತಾಂಶದಲ್ಲಿ ಹೆಣ್ಣುಮಕ್ಕಳ ಸಾಧನೆ:

ಪರೀಕ್ಷೆಗೆ ಹಾಜರಾದ 20178 ವಿದ್ಯಾರ್ಥಿಗಳ ಪೈಕಿ 20075 ಹೆಣ್ಣುಮಕ್ಕಳು ಹಾಗೂ ಪರೀಕ್ಷೆಗೆ ಹಾಜರಾದ 14836 ವಿದ್ಯಾರ್ಥಿಗಳ ಪೈಕಿ 14734 ಗಂಡು ಮಕ್ಕಳು ತೇರ್ಗಡೆಯಾಗಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿ, ಒಟ್ಟಾರೆ ಶೇಕಡವಾರು ಫಲಿತಾಂಶ 99.41ರಷ್ಟಿದೆ ಎಂದು ತಿಳಿಸಿದರು.

2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭ:

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಶ್ರೀಮತಿ ಇಂದಿರಾ ಗಾಂಧಿ ವಸತಿ ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ಒಟ್ಟು 104 ಆಂಗ್ಲ ಮಾಧ್ಯಮ ವಸತಿ ಕಾಲೇಜುಗಳಲ್ಲಿ ಪ್ರವೇಶಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ತರಗತಿಗೆ 80 ರಂತೆ, ಒಟ್ಟು 8,320 ಸೀಟುಗಳು ಲಭ್ಯವಿವೆ. ವಿಜ್ಞಾನ ವಿಭಾಗದ PCMB ಮತ್ತು PCMC ಸಂಯೋಜನೆಗಳ ಕಾಂಬಿನೇಷನ್ ಗಳು ಲಭ್ಯವಿದೆ.

ಅರ್ಜಿಗಳನ್ನು ವೆಬ್ ಸೈಟ್ ಮೂಲಕ www.kreis.karnataka.gov.in ಸಲ್ಲಿಸಬೇಕಾಗಿದ್ದು, ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ಏಪ್ರಿಲ್ 29 ಕೊನೆಯ ದಿನಾಂಕವಾಗಿದೆ. 2026-27ನೇ ಸಾಲಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದರು.

ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆಯಬೇಕು. ಮಕ್ಕಳ ಸಮಸ್ಯೆಗಳನ್ನು ಗುರತಿಸಿ ವಿದ್ಯಾಬ್ಯಾಸ ನೀಡುವುದಕ್ಕೆ (KREIS) ಸಂಘದ ಕಾರ್ಯಕಾರಿ ನಿರ್ದೇಶಕರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯಕಾರಿ ನಿರ್ದೇಶಕ ಪಿ.ಎಸ್. ಕಾಂತರಾಜು ಉಪಸ್ಥಿತರಿದ್ದರು.


Share

You cannot copy content of this page