ಸಮಗ್ರ ಸುದ್ದಿ

2028 ರ ವೇಳೆಗೆ ‘ಕ್ವಾಂಟಮ್ ಸಿಟಿ’ ನಿರ್ಮಾಣದಲ್ಲಿ ಗಮನಾರ್ಹ ಪ್ರಗತಿ ಸಾಧಿಸುವ ಗುರಿ: ಸಚಿವ ಎನ್. ಎಸ್. ಬೋಸರಾಜು

Share

ಬೆಂಗಳೂರು : ಕರ್ನಾಟಕ ರಾಜ್ಯವನ್ನು ಕ್ವಾಂಟಮ್ ತಂತ್ರಜ್ಞಾನದ ಜಾಗತಿಕ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಸ್ಥಾಪಿಸಲಾಗುತ್ತಿರುವ ‘ಕ್ವಾಂಟಮ್ ಸಿಟಿ’ (Quantum City) ನಿರ್ಮಾಣ ಕಾರ್ಯದಲ್ಲಿ 2028 ರ ಒಳಗಾಗಿ ಗಮನಾರ್ಹ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯು 2035 ರ ವೇಳೆಗೆ ಕರ್ನಾಟಕದಲ್ಲಿ 20 ಬಿಲಿಯನ್ ಡಾಲರ್ ಮೊತ್ತದ ಕ್ವಾಂಟಮ್ ಆರ್ಥಿಕತೆಯನ್ನು ಸೃಷ್ಟಿಸುವ ಸರ್ಕಾರದ ದೃಷ್ಟಿಕೋನವನ್ನು ಸಾಕಾರಗೊಳಿಸಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್. ಬೋಸರಾಜು ತಿಳಿಸಿದರು.

ಹೆಸರಘಟ್ಟದ ಸಮೀಪ ಕ್ವಾಂಟಮ್ ಸಿಟಿಗಾಗಿ ಮಂಜೂರಾಗಿರುವ 6.23 ಎಕರೆ ಭೂಮಿಯನ್ನು ಇಂದು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ನಂತರ ಅವರು ಮಾತನಾಡಿದರು.

“ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ಈಗಾಗಲೇ ದೇಶದಲ್ಲೇ ಮುಂಚೂಣಿಯಲ್ಲಿದೆ. ಉದ್ದೇಶಿತ ಕ್ವಾಂಟಮ್ ಸಿಟಿಯು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದ್ದು, ಇಲ್ಲಿ ಪೈಲೆಟ್ ಫ್ಯಾಬ್ರಿಕೇಶನ್ ಲೈನ್ಸ್, ಕಾಮನ್ ಕಂಪ್ಯೂಟಿಂಗ್ ಮೂಲಸೌಕರ್ಯ, ಸಂಶೋಧನಾ ಪ್ರಯೋಗಾಲಯಗಳು ಹಾಗೂ ಸ್ಟಾರ್ಟ್ ಅಪ್ ಗಳಿಗಾಗಿ ವಿಶೇಷ ಕೆಲಸದ ಸ್ಥಳ ಮತ್ತು ಇನ್ಕ್ಯುಬೇಶನ್ ಕೇಂದ್ರಗಳು ತಲೆ ಎತ್ತಲಿವೆ. ಈ ಮೂಲಕ ಸಂಶೋಧಕರಿಗೆ ಮತ್ತು ಉದ್ಯಮಿಗಳಿಗೆ ಒಂದೇ ಸೂರಿನಡಿ ಎಲ್ಲಾ ತಾಂತ್ರಿಕ ಬೆಂಬಲ ಸಿಗುವಂತೆ ಮಾಡಲಾಗುವುದು,” ಎಂದು ಸಚಿವರು ವಿವರಿಸಿದರು.

“ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಈ ಯೋಜನೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಐಐಎಸ್‌ಸಿ ಪ್ರೊ. ಅರಿಂಧಮ್ ಘೋಷ್ ನೇತೃತ್ವದ ಟಾಸ್ಕ್ ಫೋರ್ಸ್ ಹಾಗೂ ಇತರೆ ಪಾಲುದಾರರೊಂದಿಗೆ ಶೀಘ್ರವೇ ಸಮಾಲೋಚನೆ ನಡೆಸಲಾಗುವುದು. 2028 ರ ಒಳಗಾಗಿ ಈ ಕೇಂದ್ರದ ನಿರ್ಮಾಣದಲ್ಲಿ ಭೌತಿಕವಾಗಿ ದೊಡ್ಡ ಮಟ್ಟದ ಬದಲಾವಣೆ ತರುವುದು ನಮ್ಮ ಆದ್ಯತೆಯಾಗಿದೆ,” ಎಂದರು.

ಭೂಮಿ ಪರಿಶೀಲನೆಯ ನಂತರ ಸಚಿವರು ಅಂತರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರದ (ICTS) ಕ್ಯಾಂಪಸ್‌ಗೆ ಭೇಟಿ ನೀಡಿದರು. ಅಲ್ಲಿ ಕ್ವಾಂಟಮ್ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಿ, ಭವಿಷ್ಯದ ತಾಂತ್ರಿಕ ಅಗತ್ಯಗಳ ಬಗ್ಗೆ ಮಾಹಿತಿ ಪಡೆದರು. ಈ ಕೇಂದ್ರವು ಕ್ವಾಂಟಮ್ ಸಿಟಿಯ ವೈಜ್ಞಾನಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಭೇಟಿಯ ಸಂದರ್ಭದಲ್ಲಿ ಕೆಸ್ಟೆಪ್ಸ್ (K-STEPS) ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು, ಸಚಿವರ ಆಪ್ತ ಕಾರ್ಯದರ್ಶಿಗಳಾದ ವೀರಭದ್ರ ಹಂಚಿನಾಳ್, ಐಸಿಟಿಎಸ್ ನಿರ್ದೇಶಕರಾದ ಪ್ರೊ. ರಾಜೇಶ್ ಗೋಪಕುಮಾರ್, ಐಸಿಟಿಎಸ್ ಪ್ರಾಜೆಕ್ಟ್ ಹೆಡ್ ಪ್ರಸನ್ನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page