ಬೀದರ್: ಅಭಿವೃದ್ಧಿಯ ಹೆಸರಲ್ಲಿ ನಿಕೋಬಾರ್ ದ್ವೀಪದ ಲಕ್ಷಾಂತರ ವೃಕ್ಷಗಳಿಗೆ ಕೊಡಲಿ ಪೆಟ್ಟು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದ್ವನಿ ಎತ್ತಿದ್ದು, ಈ ಹೋರಾಟಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಉದ್ಯಮಪತಿಗಳಿಗ ಅನುಕೂಲ ಮಾಡಿಕೊಡಲು ಲಕ್ಷಾಂತರ ಗಿಡಗಳ ಮಾರಣ ಹೋಮ ಮಾಡಲು, ಜೀವವೈವಿಧ್ಯ ನಾಶಪಡಿಸಲು ಮುಂದಾಗಿರುವುದು ದುರ್ದೈವ. ಈ ನಿಟ್ಟಿನಲ್ಲಿ ರಾಹುಲ್ ಗಾಂಧೀ ಅವರ ಪ್ರಕೃತಿ, ಪರಿಸರದ ಕಾಳಜಿಗೆ ತಾವು ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಇಂದು ಇಡೀ ಮಾನವಕುಲ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿದ್ದು, ಹೆಚ್ಚುತ್ತಿರುವ ಬಿಸಿ ಮತ್ತು ಋತುಮಾನಗಳ ವ್ಯತ್ಯಯದಿಂದ ನಲುಗಿ ಹೋಗಿದೆ. ಪ್ರಕೃತಿಯೂ ಉಳಿಯಬೇಕು, ಅಭಿವೃದ್ಧಿಯೂ ಆಗಬೇಕು, ಸುಸ್ಥಿರ ಅಭಿವೃದ್ಧಿ ಆಗಬೇಕು. ಆದರೆ, ಯಾರದೋ ಹಿತಕಾಯಲು ಪ್ರಕೃತಿ, ಜೀವಿವೈವಿಧ್ಯದ ಸಂಪೂರ್ಣ ನಾಶ ಸರ್ವಥಾ ಸಲ್ಲ ಎಂದು ಹೇಳಿದ್ದಾರೆ.
ನಿಕೋಬಾರ್ ದ್ವೀಪದ 160 ಚದರ ಕಿಲೋ ಮೀಟರ್ ಅರಣ್ಯದಲ್ಲಿ ಲಕ್ಷಾಂತರ ಮರ, ಗಿಡ ಕಡಿದರೆ ಅದು ಪ್ರಕೃತಿ ವಿಕೋಪಕ್ಕೆ ನಾಂದಿ ಹಾಡುತ್ತದೆ, ಜೀವವೈವಿಧ್ಯದ ನಿರ್ನಾಮ ಆಗುತ್ತದೆ. ಸ್ಥಳೀಯರ ಬದುಕೂ ದುರ್ಬರವಾಗುತ್ತದೆ. ಈ ನಿಟ್ಟಿನಲ್ಲಿ ಧ್ವನಿ ಎತ್ತಿರುವ ರಾಹುಲ್ ಗಾಂಧೀ ಅವರೊಂದಿಗೆ ದೇಶದ ಎಲ್ಲ ಪರಿಸರ ಪ್ರೇಮಿಗಳೂ ನಿಲ್ಲುತ್ತಾರೆ ಎಂಬ ವಿಶ್ವಾಸವನ್ನು ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ.
