ಬೆಂಗಳೂರು: ರಾಜ್ಯದಾದ್ಯಂತ ಇ-ಸ್ವತ್ತು 2.0 ತಂತ್ರಾಂಶದಡಿ ಸ್ವೀಕರಿಸುತ್ತಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದು, ಈ ವರೆವಿಗೂ ಒಟ್ಟು 1,40,719 ಅರ್ಜಿಗಳನ್ನು ಅನುಮೋದಿಸಿ, ವಿಲೇವಾರಿ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಹೊಸ ನಮೂನೆ 11ಬಿ ಅಡಿ ಈವರೆಗೆ 82,640 ಅರ್ಜಿಗಳು ಸ್ವೀಕೃತವಾಗಿದ್ದು, ವಿವಿಧ ಹಂತಗಳಲ್ಲಿ ಈ ಅರ್ಜಿಗಳು ಅನುಮೋದನೆಗೆ ಬಾಕಿ ಉಳಿದಿವೆ. ಸದರಿ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಇ-ಸ್ವತ್ತು 2.0 ತಂತ್ರಾಂಶದಡಿ ಸಾರ್ವಜನಿಕರಿಂದ ಇದುವರೆಗೆ ಒಟ್ಟು 1,52,863 ಅರ್ಜಿಗಳು ಸ್ವೀಕೃತವಾಗಿವೆ. ಇವುಗಳಲ್ಲಿ 7,896 ಅರ್ಜಿಗಳು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳ ಲಾಗಿನ್‌ನಲ್ಲಿ, 3,182 ಅರ್ಜಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಲಾಗಿನ್‌ನಲ್ಲಿ, 4,036 ಅರ್ಜಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರ/ಆಡಳಿತಾಧಿಕಾರಿ ಲಾಗಿನ್‌ನಲ್ಲಿ ಹಾಗೂ 1,947 ಅರ್ಜಿಗಳು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಲಾಗಿನ್‌ನಲ್ಲಿ ಅನುಮೋದನೆಗಾಗಿ ಬಾಕಿ ಇವೆ. ಅದಲ್ಲದೇ, 950 ಅರ್ಜಿಗಳು ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅನುಮೋದನೆಗೊಂಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಲಾಗಿನ್ ನಲ್ಲಿವೆ. ಈ ರೀತಿ, ವಿವಿಧ ಹಂತಗಳಲ್ಲಿ ಒಟ್ಟು 18,011 ಅರ್ಜಿಗಳು ಅನುಮೋದನೆಗಾಗಿ ಬಾಕಿ ಇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇ-ಸ್ವತ್ತು 2.0 ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ (Citizen interface) ಮೂಲಕ ಅರ್ಜಿಗಳನ್ನು ಸಲ್ಲಿಸುವಲ್ಲಿ ಮತ್ತು ಬಳಕೆದಾರರು ಅರ್ಜಿಗಳನ್ನು ಅನುಮೋದನೆ ಮಾಡುವಂತಹ ಸಂದರ್ಭಗಳಲ್ಲಿ ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಆದಷ್ಟು ಪರಿಹರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಅದರಂತೆ, ಇ-ಸ್ವತ್ತು 2.0 ತಂತ್ರಾಂಶದಲ್ಲಿ ಬದಲಾವಣೆ ಮಾಡಿ ಸಮಸ್ಯೆಗೆ ಪರಿಹಾರ:
ಹೊಸ ಬಡಾವಣೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಪಂಚಾಯತಿ ಹಂತದಲ್ಲಿ ಅವಕಾಶ ನೀಡಲಾಗಿದೆ- ಈವರೆಗೆ 2,238 ಹೊಸ ಬಡಾವಣೆಗಳಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಅವುಗಳಲ್ಲಿ 998 ಹೊಸ ಬಡಾವಣೆಗಳಿಗೆ ಗ್ರಾಮ ಪಂಚಾಯತಿ ಹಂತದಲ್ಲಿ ಅನುಮೋದನೆ ನೀಡಲಾಗಿದೆ.
ನಮೂನೆ–11ಬಿ ಖಾತೆಗಳನ್ನು ನಮೂನೆ–11ಎ ಗಳಾಗಿ ಪರಿವರ್ತನೆ ಮಾಡಿಕೊಳ್ಳಲು ಗ್ರಾಮ ಪಂಚಾಯತಿ ಹಂತದಲ್ಲಿ ಅವಕಾಶ ನೀಡಲಾಗಿದೆ. ಹೊಸ ಬಹುಮಹಡಿ (ಅಪಾರ್ಟ್‌ಮೆಂಟ್) ಗಳಿಗೆ ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಪಂಚಾಯತಿ ಹಂತದಲ್ಲಿ ಅವಕಾಶ ನೀಡಲಾಗಿದೆ.
ಇ-ಸ್ವತ್ತು ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ (Citizen Interface) ಮೂಲಕ ಅರ್ಜಿಗಳನ್ನು ಸಲ್ಲಿಸುವಲ್ಲಿ ಗುಂಟೆ ಮತ್ತು ಸೆಂಟ್ಸ್ (Cents )ನಲ್ಲಿರುವ ವಿಸ್ತೀರ್ಣವನ್ನು ಚ.ಮೀ ನಲ್ಲಿ ಪರಿವರ್ತಿಸಿ, ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಇ-ಸ್ವತ್ತು ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ (Citizen Interface) ಮೂಲಕ ಅರ್ಜಿಗಳನ್ನು ಋಣಭಾರ ಪ್ರಮಾಣಪತ್ರ (Encumbrance Certificate – EC) ಗಳನ್ನು ಸಲ್ಲಿಸಲು ಉಂಟಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಬರೆಹರಿಸಲಾಗಿದೆ.
ಇ-ಸ್ವತ್ತು ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ (Citizen Interface) ಮೂಲಕ ಅರ್ಜಿಗಳನ್ನು ಸೇವ್ (Save) ಮಾಡಲು ಉಂಟಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಬರೆಹರಿಸಲಾಗಿದೆ. ಇ-ಸ್ವತ್ತು ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ (Citizen Interface) ಮೂಲಕ ಇ-ಖಾತಾಗಳನ್ನು ಡೌನ್ಲೋಡ್ (download) ಮಾಡಿಕೊಳ್ಳಲು ಇದ್ದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.
ಇ-ಸ್ವತ್ತು ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ (Citizen Interface) ಮೂಲಕ ಅರ್ಜಿಗಳನ್ನು ಸಲ್ಲಿಸುವಾಗ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳೊಂದಿಗೆ ಮಾಡಲಾಗಿದ್ದ ಸಂಯೋಜನೆಯಲ್ಲಿ ಉಂಟಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಬರೆಹರಿಸಲಾಗಿದೆ.
ಇ-ಸ್ವತ್ತು ತಂತ್ರಾಂಶದ ಗ್ರಾಮ ಪಂಚಾಯತಿ ಬಳಕೆದಾರರುಗಳ ಲಾಗಿನ್‌ನಲ್ಲಿ ಅರ್ಜಿಗಳ ಅನುಮೋದನೆಯಲ್ಲಿ ಉಂಟಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಬರೆಹರಿಸಲಾಗಿದೆ.
ಹೊರದೇಶದ ಅರ್ಜಿದಾರುಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ ಪಾಸ್ಪೋರ್ಟ್ (Passport) ಮೂಲಕ ಅರ್ಜಿಗಳನ್ನು ಸಲ್ಲಿಸಲು ಹಾಗೂ ಹೊಸ ಬಡಾವಣೆಗಳಿಗೆ ಇ-ಸ್ವತ್ತು ತಂತ್ರಾಂಶದ (Citizen Interface) ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಮುಂದಿನ 10 ದಿನದೊಳಗೆ ಕಲ್ಪಿಸಲಾಗುವುದು ಹಾಗೂ ಇ-ಸ್ವತ್ತು ತಂತ್ರಾಂಶದ ಬಳಕೆದಾರರು ಗಳ ಲಾಗಿನ್ ನಲ್ಲಿ ಉಂಟಾಗುತ್ತಿರುವ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು ಎಂದು ಸಚಿವರು ವಿವರಗಳನ್ನು ಹಂಚಿಕೊಂಡಿದ್ದಾರೆ.
ಬಹಳ ಮುಖ್ಯವಾಗಿ, ಸಾರ್ವಜನಿಕರು ಇ-ಸ್ವತ್ತು 2.0 ತಂತ್ರಾಂಶದ ಮೂಲಕ ಆನ್-ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ, ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ ಸಹಯೋಗದೊಂದಿಗೆ ಇ-ಸ್ವತ್ತು ಅರ್ಜಿಗಳನ್ನು ಗ್ರಾಮ ಒನ್ , ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
