ಬೆಂಗಳೂರು: ಜಿಬಿಎ ವ್ಯಾಪ್ತಿಯ ಕೇಂದ್ರ ನಗರ ಪಾಲಿಕೆಯ ಕೆಲ ಸ್ಥಳಗಳಲ್ಲಿ ಏಕಕಾಲದಲ್ಲಿ 77 ಮಿ.ಮೀ ಗಾಳಿ-ಮಳೆಯಾಗಿದ್ದು, ಮಳೆಯಿಂದಾದ ಸಮಸ್ಯೆ/ದೂರುಗಳನ್ನು 3 ಗಂಟೆಗಳೊಳಗಾಗಿ ಪರಿಹರಿಸಲು ನಗರ ಪಾಲಿಕೆಗಳ ಅಧಿಕಾರಿಗಳಿಗೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಸೂಚನೆ ನೀಡಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಕಾಟನ್‌ಪೇಟೆ, ಬಿನ್ನಿಪೇಟೆ, ಸುಭಾಷ್ ನಗರ, ಜಗಜೀವನರಾಮ್ ನಗರ ಮತ್ತು ಕೆ.ಆರ್. ಮಾರುಕಟ್ಟೆ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಇತರ ನಗರ ಪಾಲಿಕೆಗಳಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಿದೆ. ಹೆಚ್ಚು ಮಳೆಯಾದ ಪ್ರದೇಶಗಳಲ್ಲಿ ಹಾಗೂ ರಸ್ತೆಗಳಲ್ಲಿ ಜಲಾವೃತವಾಗಿರುವ ಶೋಲ್ಡರ್ ಡ್ರೇನ್, ಗ್ರೇಟಿಂಗ್ಸ್‌ಗಳ ಬಳಿ ಇರುವ ತ್ಯಾಜ್ಯವನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಹೆಚ್ಚು ಮಳೆಯಾಗಿರುವ ಪ್ರದೇಶಗಳಲ್ಲಿ ಅಧಿಕಾರಿಗಳು ಖುದ್ದು ಮೇಲ್ವಿಚಾರಣೆ ನಡೆಸಿ, ಸಮಸ್ಯೆ ಬಗೆಹರಿಸುವ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಪ್ರಮುಖ ರಸ್ತೆಗಳಲ್ಲಿ ಧರೆಗುರುಳಿದ ಮರಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ಮಳೆಯಿಂದಾದ ಪ್ರಮುಖ ಅಂಶಗಳು:
ಇಂದು ಸಂಜೆ ಸುಮಾರು 5:00 ಗಂಟೆಯ ವೇಳೆಗೆ ಬೆಂಗಳೂರು ನಗರದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು, ನಗರಾದ್ಯಂತ ಸರಾಸರಿ 60 ಮಿ.ಮೀ ಮಳೆಯಾಗಿದೆ. ಬೆಂಗಳೂರು ನಗರ ಕೇಂದ್ರ ನಿಗಮ ವ್ಯಾಪ್ತಿಯ ಕಾಟನ್‌ಪೇಟೆ, ಬಿನ್ನಿಪೇಟೆ, ಕೆಂಪಾಪುರ ಹಾಗೂ ಸುಭಾಷ್ ನಗರ ಪ್ರದೇಶಗಳಲ್ಲಿ ಗರಿಷ್ಠ 77.6 ಮಿ.ಮೀ ಮಳೆಯಾಗಿದೆ. ಉತ್ತರ ನಗರ ನಿಗಮದ ಕೆಲವು ಭಾಗಗಳಲ್ಲಿ ಕನಿಷ್ಠ 8 ಮಿ.ಮೀ ಮಳೆಯಾಗಿದೆ.
ಜಿಬಿಎ ಕೇಂದ್ರ ಕಚೇರಿ ನಿಯಂತ್ರಣ ಕೊಠಡಿಗೆ ನೀರು ನಿಲುಗಡೆ, ಮರ ಬಿದ್ದುಹೋಗುವುದು, ಜಲಾವೃತ ಪ್ರದೇಶಗಳು ಹಾಗೂ ಆಸ್ತಿ ಹಾನಿ ಸಂಬಂಧಿತ ಅನೇಕ ದೂರುಗಳು ಬಂದಿದ್ದು, ಅವುಗಳಿಗೆ ತ್ವರಿತವಾಗಿ ಸ್ಪಂದಿಸಲಾಗಿದೆ. ಘಟನೆಗಳ ವಿವರಗಳನ್ನು ಕೆಳಗಿನಂತೆ ಸಂಕ್ಷಿಪ್ತವಾಗಿ ನೀಡಲಾಗಿದೆ.
ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ಕಾಂಪೌಂಡ್ ಗೋಡೆ ಕುಸಿತದಿಂದ ಒಟ್ಟು 7 ಮಂದಿ ಮೃತಪಟ್ಟು, 2 ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು ನಗರ ಕೇಂದ್ರ ನಿಗಮ ವ್ಯಾಪ್ತಿಯಲ್ಲಿ ವರದಿಯಾಗಿದೆ. ಜಿಬಿಎ ಮುಖ್ಯ ಆಯುಕ್ತರು, ಬಿಸಿಸಿಸಿ ಆಯುಕ್ತರು, ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿತು.
ದಕ್ಷಿಣ ನಗರ ನಿಗಮ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್ ಸಮೀಪದ ಸಾರಕ್ಕಿ ಬಸ್ ನಿಲ್ದಾಣದ ಬಳಿ ರಾತ್ರಿ ಸುಮಾರು 8.25 ಗಂಟೆಗೆ ಜೆಡಿ ಮಾರಾ ಸ್ಲಂ ನಿವಾಸಿ 35 ವರ್ಷದ ರಘು ಎಂಬವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ವರದಿಯಾಗಿದೆ.
ಉತ್ತರ ನಗರ ಪಾಲಿಕೆಯಲ್ಲಿ ಮರ ಬಿದ್ದು ಸಣ್ಣ ಗಾಯಗಳಾಗಿದ್ದು, ಹೆಚ್ಚಿನ ಸಮಸ್ಯೆ ವರದಿಯಾಗಿಲ್ಲ.
ಪೂರ್ವ ನಗರ ಪಾಲಿಕೆಯಲ್ಲಿ ಹೆಚ್ಚಿನ ಸಮಸ್ಯೆಗಳು ಕಂಡುಬಂದಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಯಾವುದೇ ಸಮಸ್ಯೆ ಆಗದಂತೆ ಕ್ರಮವಹಿಸಲು ಸೂಚನೆ ನೀಡಲಾಗಿದೆ. ಸ್ವಚ್ಛತಾ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ನಿರ್ದೇಶಿಸಲಾಗಿದೆ.
ಇತರೆ ಪ್ರಮುಖ ಘಟನೆಗಳು: ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ನವರಂಗ್, ಡಾ. ರಾಜ್‌ಕುಮಾರ್ ರಸ್ತೆ ಹಾಗೂ ಇಸ್ಕಾನ್ ದೇವಸ್ಥಾನ ರಸ್ತೆ ಪ್ರದೇಶಗಳಲ್ಲಿ ಅನೇಕ ಮರಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಈ ಸಂಬಂಧ ಬೆಸ್ಕಾಂ ತಂಡಗಳು ತುರ್ತು ಕ್ರಮ ಕೈಗೊಂಡಿವೆ.
ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (ICCC) 24/7 ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತ್ವರಿತ ಕ್ರಮ ಕೈಗೊಳ್ಳುತ್ತಿದೆ.
ಕೇಂದ್ರ, ಪಶ್ಚಿಮ ಹಾಗೂ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಅನೇಕ ಕಡೆ ನೀರು ನಿಲುಗಡೆ ಹಾಗೂ ಜಲಾವೃತ ಸಮಸ್ಯೆಗಳು ವರದಿಯಾಗಿವೆ. ಸಿಲ್ಕ್ ಬೋರ್ಡ್, ಹೆಚ್‌ಎಸ್‌ಆರ್ ಲೇಔಟ್, ನಾಗವಾರ, ಜೆಪಿ ನಗರ, ಕೆಆರ್ ಸರ್ಕಲ್, ರಿಚ್‌ಮಂಡ್ ಸರ್ಕಲ್, ಶೇಷಾದ್ರಿಪುರಂ ಹಾಗೂ ಶಾಂತಿನಗರ ಪ್ರದೇಶಗಳು ಹೆಚ್ಚು ಪರಿಣಾಮಿತ ಪ್ರದೇಶಗಳಾಗಿದ್ದು, ಬಹುತೇಕ ಪ್ರಕರಣಗಳಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಜಲಾವೃತ ದೂರುಗಳು:
ಕೇಂದ್ರ – 19, ಪೂರ್ವ – 5, ಉತ್ತರ – 3, ದಕ್ಷಿಣ – 29
ಪಶ್ಚಿಮ – 12, ಒಟ್ಟು – 68 ಜಲಾವೃತ ದೂರುಗಳು ದಾಖಲಾಗಿವೆ.
ಧರೆಗುರುಳಿದ ಮರಗಳು:
ಕೇಂದ್ರ – 67, ಪೂರ್ವ – 01, ಪಶ್ಚಿಮ – 55, ದಕ್ಷಿಣ – 23
ಉತ್ತರ – 24 ಒಟ್ಟು – 170 ಮರಗಳು ಧರೆಗುರುಳಿವೆ.
ಧರೆಗುರುಳಿದ ಮರದ ಕೊಂಬೆಗಳು:
ಕೇಂದ್ರ – 131, ಪೂರ್ವ – 04, ಪಶ್ಚಿಮ – 121
ದಕ್ಷಿಣ – 82, ಉತ್ತರ – 70, ಒಟ್ಟು – 408 ಕೊಂಬೆಗಳು ಧರೆಗುರುಳಿವೆ.
ಧರೆಗುರುಳಿದ ಮರಗಳು ಹಾಗೂ ಮರದ ರೆಂಬೆಗಳ ಪೈಕಿ 118 ಮರ/ರೆಂಬೆಗಳನ್ನು ತೆರವುಗೊಳಿಸಲಾಗಿದ್ದು, ಉಳಿದ ಮರ ಹಾಗೂ ರೆಂಬೆಗಳ ತೆರವು ಕಾರ್ಯಾಚರಣೆಯನ್ನು ಸಿಬ್ಬಂದಿಗಳು ಸಕ್ರಿಯವಾಗಿ ನಿರ್ವಹಿಸುತ್ತಿದ್ದಾರೆ.
ಬೌರಿಂಗ್ ಆಸ್ಪತ್ರೆ ಬಳಿಯ ಘಟನೆ:
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ, ಗೋಡೆ ಪಕ್ಕ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ 4 ಪುರುಷರು, 2 ಮಹಿಳೆಯರು, 1 ಹೆಣ್ಣು ಮಗು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ. 3 ಮಂದಿ ತೀವ್ರ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆ ಹಾಗೂ ಸಣ್ಣ-ಪುಟ್ಟ ಗಾಯಗಳಾಗಿರುವ 3 ಮಂದಿಗೆ ಬೌರಿಂಗ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು.
ಅಧಿಕಾರಿಗಳ ಜೊತೆ ಮುಖ್ಯ ಆಯುಕ್ತರು ಸಭೆ:
ಜಿಬಿಎ ವ್ಯಾಪ್ತಿಯ ಎಲ್ಲಾ ನಗರ ಪಾಲಿಕೆಗಳಲ್ಲಿ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ, ಎಲ್ಲಿಯೂ ಯಾವುದೇ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರು ಸೂಚನೆ ನೀಡಿದರು.
ನಾಳೆ ಬೆಳಗ್ಗೆಯೊಳಗಾಗಿ ಧರೆಗುರುಳಿದ ಮರಗಳು, ರೆಂಬೆ-ಕೊಂಬೆಗಳನ್ನು ತೆರವುಗೊಳಿಸಬೇಕು. ರಸ್ತೆಗಳಲ್ಲಿ ಯಾವುದೇ ಮರಗಳು ಉಳಿಯದಂತೆ ಕ್ರಮವಹಿಸಬೇಕು. ಅಗ್ನಿಶಾಮಕ ತಂಡಗಳನ್ನು ಸಹ ನಿಯೋಜಿಸಿಕೊಂಡು ಕಾರ್ಯನಿರ್ವಹಿಸಬೇಕು. ಧರೆಗುರುಳಿದ ಮರಗಳು ಹಾಗೂ ರೆಂಬೆ/ಕೊಂಬೆಗಳನ್ನು ಸಂಗ್ರಹಿಸಲು ಪ್ರತ್ಯೇಕ ಸ್ಥಳಗಳನ್ನು ಗುರುತಿಸಲು ಮುಖ್ಯ ಆಯುಕ್ತರು ಸೂಚನೆ ನೀಡಿದರು.
ಸಭೆಯಲ್ಲಿ ಎಫ್.ಇ.ಸಿಸಿ ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ನಗರ ಪಾಲಿಕೆಗಳ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಡಾ. ರಾಜೇಂದ್ರ ಕೆ.ವಿ., ರಮೇಶ್ ಡಿ.ಎಸ್., ರಮೇಶ್ ಕೆ.ಎನ್., ಡಾ. ಹರೀಶ್ ಕುಮಾರ್, ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್, ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ನವೀನ್ ಕುಮಾರ್, ಮುಖ್ಯ ಅಭಿಯಂತರರು, ಅಗ್ನಿಶಾಮಕ ಇಲಾಖೆ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
