ಸಮಗ್ರ ಸುದ್ದಿ

ಬೆಂಗಳೂರಿನಾದ್ಯಂತ ಕಾಂಪೌಂಡ್ ಗಳ ಪಕ್ಕ ಇರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

Share

ಬೆಂಗಳೂರು:“ಇಡೀ ಬೆಂಗಳೂರಿನಾದ್ಯಂತ ಅಪಾಯಕಾರಿಯಾಗಿರುವ ಕಾಂಪೌಂಡ್ ಗಳ ಪಕ್ಕ ಇರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಎಂದು ಸೂಚನೆ ನೀಡಲಾಗಿದೆ. ಇಂತಹ ಪ್ರದೇಶಗಳನ್ನು ಗುರುತಿಸಿ ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
“ಈ ದುರ್ಘಟನೆ ಸಂಭವಿಸಬಾರದಿತ್ತು, ಆದರೂ ಸಂಭವಿಸಿದೆ ಯಾವ ಅಧಿಕಾರಿಗಳ ನಿರ್ಲಕ್ಷ್ಯ ಎಂದು ನಾನು ಹೇಳುವುದಿಲ್ಲ. ವಾಜಪೇಯಿ (ಬೌರಿಂಗ್) ಆಸ್ಪತ್ರೆಯ ಕಾಂಪೌಂಡ್ ಪಕ್ಕದಲ್ಲಿ ಮಣ್ಣಿನ ರಾಶಿ ಹಾಕಿದ್ದಾರೆ. ಇದರ ಒತ್ತಡ ತಾಳಲಾರದೆ ಕಾಂಪೌಂಡ್ ಕುಸಿದಿದೆ. ಈ ರಸ್ತೆಯಲ್ಲಿಯೂ ಯಾವ ವ್ಯಾಪಾರಿಗಳನ್ನು ಕೂರಿಸಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ.” ಎಂದರು.

“ಬೆಂಗಳೂರಿನ ಎಲ್ಲಾ ರಸ್ತೆಗಳಲ್ಲಿ ಇರುವ ದುರ್ಬಲ ಮರಗಳು, ಕೊಂಬೆಗಳನ್ನು ಕತ್ತರಿಸಲಾಗುವುದು. ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಇದರ ಬಗ್ಗೆ ಪೊಲೀಸ್ ಹಾಗೂ ಬಿಬಿಎ ಅಧಿಕಾರಿಗಳು ಕೆಲಸ ಮಾಡಿ ಪಟ್ಟಿ ತಯಾರಿಸಿದ್ದಾರೆ. ಮಳೆಹಾನಿ ತಡೆಗೆ ಕಂಟ್ರೋಲ್ ರೂಮ್ ಸಹ ಅಣಿಯಾಗಿದೆ. ಅಧಿಕಾರಿಗಳು ಸಹ ಕಾರ್ಯಪ್ರವೃತ್ತರಾಗಿದ್ದಾರೆ” ಎಂದು ತಿಳಿಸಿದರು.

ಹವಾಮಾನ ಇಲಾಖೆಯವರು ಈ ವರ್ಷ ಮಳೆ ಕಡಿಮೆ ಬರುತ್ತದೆ ಎಂದು ಹೇಳಿದ್ದಾರೆ. ಇದರಿಂದ ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲಿದೆ. ನಂತರ ವಿದ್ಯುತ್ ಉತ್ಪಾದನೆ ಕುಸಿಯಲಿದೆ. ನಾನು ನಾಡಿದ್ದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುತ್ತಿದ್ದೇನೆ. ಅಲ್ಲಿ ಎಲ್ಲಾ ಗೇಟ್ ಬದಲಿ ಕಾರ್ಯ ಮುಕ್ತಾಯವಾಗಿದ್ದು, ನೀರಿನ ಶೇಖರಣೆ ಆರಂಭಿಸಬೇಕಿದೆ. ಇನ್ನು ಕಾವೇರಿ ನೀರಿನ ವಿಚಾರದಲ್ಲಿ 177 ಟಿಎಂಸಿ ನೀರು ಹರಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಕಾರಣಕ್ಕೆ ಮಳೆ ಚೆನ್ನಾಗಿ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಹೆಚ್ಚಿನ ಮಳೆ ಬಂದರೆ ಅದನ್ನು ಎದುರಿಸಲು ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ” ಎಂದು ಹೇಳಿದರು.

ಆದಷ್ಟು ಬೇಗ ಅಧಿಕಾರ ಹಂಚಿಕೆ ಗೊಂದಲ ಬಗೆಹರಿಸುವಿರಾ, ಮಲ್ಲಿಕಾರ್ಜುನ ಖರ್ಗೆ ಅವರು ಬದಲಾವಣೆ ಇಲ್ಲ ಎಂದಿದ್ದಾರೆ ಎಂದು ಕೇಳಿದಾಗ, “ಗೊಂದಲವೇ ಇಲ್ಲ. ನೀವುಗಳು ಏನಿದ್ದರೂ ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು ಕೇಳಿ. ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಪಕ್ಷ ಹೈಕಮಾಂಡ್ ಗೆ ಬಿಟ್ಟ ವಿಚಾರ ಅವರು ತೀರ್ಮಾನ ಮಾಡುತ್ತಾರೆ” ಎಂದರು.


Share

You cannot copy content of this page