ಬೆಂಗಳೂರು: ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ, ಪೂರ್ವ ಮಧ್ಯ ರೈಲ್ವೆಯು ದಾನಾಪುರ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು ನಡುವಿನ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಿದೆ.
ರೈಲು ಸಂಖ್ಯೆ 03251 ದಾನಾಪುರ–ಎಸ್ಎಂವಿಟಿ ಬೆಂಗಳೂರು ವಿಶೇಷ ರೈಲು ಈ ಮೊದಲು 30.04.2026 ರವರೆಗೆ ಸಂಚರಿಸಲು ನಿಗದಿಯಾಗಿದ್ದ ಈ ರೈಲಿನ ಸೇವೆಯನ್ನು ಈಗ 31.05.2026ರವರೆಗೆ ಮುಂದುವರಿಸಲಾಗಿದೆ.
ರೈಲು ಸಂಖ್ಯೆ 03252 ಎಸ್ಎಂವಿಟಿ ಬೆಂಗಳೂರು–ದಾನಾಪುರ ವಿಶೇಷ ರೈಲು ಈ ಮೊದಲು 02.05.2026 ರವರೆಗೆ ಸಂಚರಿಸಲು ನಿಗದಿಪಡಿಸಲಾಗಿದ್ದ ಈ ರೈಲು ಸೇವೆಯನ್ನು 02.06.2026ರವರೆಗೆ ಸಂಚರಿಸಲಿದೆ.
ವಿಸ್ತರಿಸಲಾದ ಈ ಅವಧಿಯಲ್ಲಿ ಎರಡೂ ರೈಲುಗಳು (03251/03252) ಪ್ರತಿ ದಿಕ್ಕಿನಲ್ಲಿ ತಲಾ 31 ಟ್ರಿಪ್’ಗಳನ್ನು ಪೂರೈಸಲಿವೆ. ಈ ರೈಲುಗಳ ಸಮಯ ಮತ್ತು ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ರೈಲಿನ ಮಾರ್ಗ ಬದಲಾವಣೆ
ಶ್ರವಣಬೆಳಗೊಳದಲ್ಲಿ ಟ್ರ್ಯಾಕ್ ಮೆಷಿನ್ ಸೈಡಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮೇ 5 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು – ಕೋಝಿಕ್ಕೋಡ್ ಎಕ್ಸ್’ಪ್ರೆಸ್ ರೈಲು ಯಶವಂತಪುರ, ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ ಮತ್ತು ಹಾಸನ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ಈ ರೈಲು ಎಂದಿನಂತೆ ಕುಣಿಗಲ್, ಬಿ.ಜಿ. ನಗರ, ಶ್ರವಣಬೆಳಗೊಳ ಮತ್ತು ಚನ್ನರಾಯಪಟ್ಟಣ ನಿಲ್ದಾಣಗಳಲ್ಲಿ ನಿಲುಗಡೆ ಹೊಂದುವುದಿಲ್ಲ.
ತಿಪಟೂರಿನಲ್ಲಿ ಜನಶತಾಬ್ದಿ ಎಕ್ಸ್’ಪ್ರೆಸ್ ರೈಲುಗಳ ನಿಲುಗಡೆ ಮುಂದುವರಿಕೆ
ರೈಲು ಸಂಖ್ಯೆ 12079/12080 ಕೆಎಸ್ಆರ್ ಬೆಂಗಳೂರು–ಎಸ್ಎಸ್ಎಸ್ ಹುಬ್ಬಳ್ಳಿ–ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್’ಪ್ರೆಸ್ ಮತ್ತು ರೈಲು ಸಂಖ್ಯೆ 12089/12090 ಕೆಎಸ್ಆರ್ ಬೆಂಗಳೂರು–ಶಿವಮೊಗ್ಗ ಟೌನ್–ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್’ಪ್ರೆಸ್ ರೈಲುಗಳು ತಿಪಟೂರು ನಿಲ್ದಾಣದಲ್ಲಿ ನಿಲುಗಡೆ ನೀಡುವುದನ್ನು ಮುಂದುವರಿಸಲಿವೆ. ಈ ನಿಲುಗಡೆಯು ಮೇ 16, 2026 ರಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಪ್ರಸ್ತುತ ಇರುವ ಸಮಯದ ವೇಳಾಪಟ್ಟಿಯಂತೆಯೇ ರೈಲುಗಳು ನಿಲ್ದಾಣದಲ್ಲಿ ನಿಲ್ಲಲಿವೆ.
ವಿಶೇಷ ರೈಲುಗಳ ಸೇವೆ ಅವಧಿ ವಿಸ್ತರಣೆ
ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ, ದಕ್ಷಿಣ ಮಧ್ಯ ರೈಲ್ವೆಯು ರೈಲು ಸಂಖ್ಯೆ 07043/07044 ಹೈದರಾಬಾದ್–ಬೆಳಗಾವಿ–ಹೈದರಾಬಾದ್ ಸಾಪ್ತಾಹಿಕ ವಿಶೇಷ ರೈಲುಗಳ ಸೇವೆಯನ್ನು ಪ್ರತಿ ದಿಕ್ಕಿನಲ್ಲಿ ಒಂದು ಹೆಚ್ಚುವರಿ ಟ್ರಿಪ್’ಗೆ ವಿಸ್ತರಿಸಿದೆ.
ಇದರನ್ವಯ, ಈ ಮೊದಲು ಏಪ್ರಿಲ್ 30, 2026 ರವರೆಗೆ ಮಾತ್ರ ಸಂಚರಿಸಬೇಕಿದ್ದ ರೈಲು ಸಂಖ್ಯೆ 07043 ಹೈದರಾಬಾದ್–ಬೆಳಗಾವಿ ವಿಶೇಷ ರೈಲು ಈಗ ಮೇ 7, 2026 ರಂದು ಒಂದು ಹೆಚ್ಚುವರಿ ಸಂಚಾರ ನಡೆಸಲಿದೆ. ಅದೇ ರೀತಿ, ಈ ಮೊದಲು ಮೇ 1, 2026ಕ್ಕೆ ಕೊನೆಗೊಳ್ಳಬೇಕಿದ್ದ ರೈಲು ಸಂಖ್ಯೆ 07044 ಬೆಳಗಾವಿ–ಹೈದರಾಬಾದ್ ವಿಶೇಷ ರೈಲು ಈಗ ಮೇ 8, 2026ರಂದು ಒಂದು ಹೆಚ್ಚುವರಿ ಸಂಚಾರ ನಡೆಸಲಿದೆ.
ಬೇಸಿಗೆ ರಜೆಯ ಜನದಟ್ಟಣೆ ನಿವಾರಿಸಲು ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ
ಬೇಸಿಗೆಯ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ನೈಋತ್ಯ ರೈಲ್ವೆಯು ಯಶವಂತಪುರ, ತಾಳಗುಪ್ಪ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 06587 ಯಶವಂತಪುರ–ತಾಳಗುಪ್ಪ ವಿಶೇಷ ಎಕ್ಸ್ ಪ್ರೆಸ್ ರೈಲು ಮೇ 01 (ಶುಕ್ರವಾರ) ರಂದು ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಶನಿವಾರ (ಮೇ. 02) ಬೆಳಿಗ್ಗೆ 5:05ಕ್ಕೆ ತಾಳಗುಪ್ಪ ತಲುಪಲಿದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06588 ತಾಳಗುಪ್ಪ–ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ಮೇ 2(ಶನಿವಾರ) ರಂದು ಬೆಳಿಗ್ಗೆ 9:30ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 5:15ಕ್ಕೆ ಯಶವಂತಪುರ ಸೇರಲಿದೆ.
ಈ ವಿಶೇಷ ರೈಲು ಎರಡು ಮಾರ್ಗಗಳಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು ಜಂಕ್ಷನ್, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಕೊನಗವಳ್ಳಿ ಹಾಲ್ಟ್, ಹಾರನಹಳ್ಳಿ ಹಾಲ್ಟ್, ಕುಂಸಿ, ಅರಸಾಳು ಹಾಲ್ಟ್, ಕೆಂಚನಾಲ ಹಾಲ್ಟ್, ಆನಂದಪುರಂ, ಅಡ್ಡೇರಿ ಹಾಲ್ಟ್ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಹೊಂದಿರಲಿದ್ದು, ಅದರಲ್ಲಿ 1 ಪ್ರಥಮ ದರ್ಜೆ ಮತ್ತು ಎಸಿ 2-ಟೈರ್, 2 ಎಸಿ ತ್ರೀ-ಟೈರ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 2 ಎಸ್ಎಲ್ಆರ್/ಡಿ) ಬೋಗಿಗಳು ಇರಲಿವೆ.
