ಸಮಗ್ರ ಸುದ್ದಿ

ರೈತರಿಗೆ ಗುಣಮಟ್ಟದ ಸಸಿ ನೀಡಲು, ಒತ್ತುವರಿ ತೆರವು ಮಾಡಲು ಈಶ್ವರ್ ಖಂಡ್ರೆ ಆದೇಶ

Share

ಮದ್ದೂರು: ಜಾಗತಿಕ ತಾಪಮಾನ ಏರಿಕೆಗೆ ವೃಕ್ಷ ಸಂವರ್ಧನೆ, ಸಂರಕ್ಷಣೆಯೇ ಮಾರ್ಗವಾಗಿದ್ದು, ಹಸಿರು ಹೊದಿಕೆ ಹೆಚ್ಚಿಸುವಂತೆ ಮತ್ತು ಮಂಡ್ಯ ನಗರದ ರಸ್ತೆ ಬದಿಯ ಮರಗಳ ಸಮೀಕ್ಷೆ ನಡೆಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತ ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿಂದು ಜಿಲ್ಲಾ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಂಡ್ಯದ 7 ವಲಯಗಳಲ್ಲಿರುವ ನರ್ಸರಿಗಳಲ್ಲಿ ತೇಗ, ಶ್ರೀಗಂಧ, ಹೊನ್ನೆ ಇತ್ಯಾದಿ ಗುಣಮಟ್ಟದ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸುವಂತೆ ಮತ್ತು ವಿತರಿಸಿದ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಬಗ್ಗೆ ಸಮೀಕ್ಷೆ ನಡೆಸುವಂತೆಯೂ ತಿಳಿಸಿದರು.

ಜಿಲ್ಲೆಯ ಹಲವೆಡೆ ಚಿರತೆಗಳ ಸಮಸ್ಯೆಯ ಪರಿಹಾರಕ್ಕೆ ತತ್ ಕ್ಷಣವೇ ಕ್ರಮ ವಹಿಸುವಂತೆ ತಿಳಿಸಿದ ಅವರು, ಕಾಡಿನಂಚಿನ ಗ್ರಾಮದ ಜನರೊಂದಿಗೆ ಸೌಹಾರ್ದ ಸಂಬಂಧ ಬೆಳೆಸಿಕೊಂಡರೆ, ಕಾಡ್ಗಿಚ್ಚು, ಕಳ್ಳಬೇಟೆ, ಅಕ್ರಮ ಮರ ಕಡಿತಲೆಯಂತಹ ಅಪರಾಧಗಳ ಬಗ್ಗೆ ತಕ್ಷಣದ ಮಾಹಿತಿ ಲಭಿಸುತ್ತದೆ, ವನ ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.

ಜಿಯೋ ಟ್ಯಾಗ್ ಮಾಡಲು ಸೂಚನೆ:

ಅರಣ್ಯ, ಕಾಡಿನಂಚಿನಲ್ಲಿರುವ ಪಟ್ಟಾ ಜಮೀನು, ಸರ್ಕಾರಿ ಜಾಗದಲ್ಲಿ ಬೆಳೆದಿರುವ ಶ್ರೀಗಂಧ, ರಕ್ತ ಚಂದನ, ಬೀಟೆ ಮತ್ತು ತೇಗದ ಮರಗಳ ಜಿಯೋ ಟ್ಯಾಗ್ ಮಾಡುವ ಮೂಲಕ ಯಾವುದೇ ಬೆಲೆ ಬಾಳುವ ವೃಕ್ಷ ಕಳುವಾಗದಂತೆ ಸಂರಕ್ಷಿಸಲು ಅರಣ್ಯ ಸಚಿವರು ಸೂಚನೆ ನೀಡಿದರು.

ಮಂಡ್ಯದಲ್ಲಿ ಮರ ಸಮೀಕ್ಷೆಗೆ ಆದೇಶ:

ಮಂಡ್ಯ ನಗರದಲ್ಲಿ ಮನೆಯ ಮುಂದೆ, ರಸ್ತೆಯ ಬದಿಯಲ್ಲಿ ಬೆಳೆದ ಮರಗಳನ್ನು ಅಕ್ರಮವಾಗಿ ಕಡಿಯಲಾಗುತ್ತಿದೆ ಎಂಬ ಆರೋಪಗಳಿದ್ದು, ಮರಗಳ ಗಣತಿ ನಡೆಸಲು ಮತ್ತು ಅಕ್ರಮವಾಗಿ ಮರ ಕಡಿತಲೆ ಆಗದಂತೆ ಕ್ರಮ ವಹಿಸಲು ಸೂಚಿಸಿದರು.

ಜಿಲ್ಲೆಯಲ್ಲಿ ಕರ್ನಾಟಕ ಅರಣ್ಯ ಕಾಯಿದೆ ಅಡಿ ಸೆಕ್ಷನ್ 4ರ ಪ್ರಾಥಮಿಕ ಅಧಿಸೂಚನೆ ಆಗಿ ವರ್ಷಗಳೇ ಕಳೆದಿದ್ದರೂ ಸೆಕ್ಷನ್ 17 ಅಡಿಯಲ್ಲಿ ಅರಣ್ಯ ಎಂದು ಘೋಷಣೆ ಆಗಿಲ್ಲ. ಎಲ್ಲೆಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿ (ಎಫ್.ಎಸ್.ಓ.) ಇಲ್ಲವೋ ಅಲ್ಲಿಗೆ ಪ್ರಸ್ತಾವನೆ ಸಲ್ಲಿಸಿದರೆ ಅಧಿಕಾರಿಗಳನ್ನು ನೇಮಕ ಮಾಡುವುದಾಗಿ ತಿಳಿಸಿದರು. ಅದೇ ರೀತಿ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಪಟ್ಟಾ ಜಮೀನೂ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ಹೊರತು ಪಡೆಸಿ, ಉಳಿದ ಎಲ್ಲ ಒತ್ತುವರಿ ಹಾಗೂ 2015ರ ನಂತರದ ಅರಣ್ಯ ಒತ್ತುವರಿ ತೆರವುಗೊಳಿಸಲು ಆದೇಶ ನೀಡಿದರು.

ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಈ ತಿಂಗಳಲ್ಲೇ ರೈಲ್ವೆ ಬ್ಯಾರಿಕೇಡ್ ಮತ್ತು ಆನೆ ಕಂದಕ ಹಾಗೂ ಸೌರಬೇಲಿ ಕುರಿತಂತೆ ಸಭೆ ನಡೆಸುವುದಾಗಿಯೂ ಈಶ್ವರ ಖಂಡ್ರೆ ತಿಳಿಸಿದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು, ಪ್ರಭುಗೌಡ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page