ರಾಜಕೀಯ

ಕೇರಳದಲ್ಲಿ ಯುಡಿಎಫ್ ಗೆಲುವು ನಿರೀಕ್ಷಿತ ಹಾಗೂ ರಾಜ್ಯ ಉಪಚುನಾವಣೆ ಗೆಲುವು| ಗ್ಯಾರಂಟಿ ಯೋಜನೆಗಳಿಗೆ ಸಿಕ್ಕ ಮನ್ನಣೆ: ಸಚಿವ ಎನ್.ಎಸ್. ಬೋಸರಾಜು

Share

ಮಡಿಕೇರಿ:ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಬಹುಮತ ಸಾಧಿಸಿದ್ದು, ಇದು ನಾವು ನಿರೀಕ್ಷಿಸಿದ ಫಲಿತಾಂಶವೇ ಆಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಫಲಿತಾಂಶವು ಆಡಳಿತ ವಿರೋಧಿ ಅಲೆ ಹಾಗೂ ಕಾಂಗ್ರೆಸ್ ನಾಯಕರ ಮೇಲಿನ ಜನರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಎರಡು ವಾರಗಳ ಕಾಲ ಎರಡು ಜಿಲ್ಲೆಗಳ ಉಸ್ತುವಾರಿಯನ್ನು ತಾವು ವಹಿಸಿಕೊಂಡಿದ್ದಾಗಿ ಸಚಿವರು ಸ್ಮರಿಸಿದರು.

ನಾವು ಪ್ರಚಾರ ಮಾಡುವಾಗಲೇ ಜನರ ಒಲವು ಕಾಂಗ್ರೆಸ್ ಪಕ್ಷದ ಪರವಾಗಿರುವುದು ಸ್ಪಷ್ಟವಾಗಿತ್ತು. ಹಿಂದಿನ ಮುಖ್ಯಮಂತ್ರಿಗಳ ಹಾಗೂ ಸರ್ಕಾರದ ಆಡಳಿತ ವೈಖರಿಯ ವಿರುದ್ಧ ಜನರು ಸಂಪೂರ್ಣವಾಗಿ ತಿರುಗಿಬಿದ್ದಿದ್ದರು. ಈ ಆಡಳಿತ ವಿರೋಧಿ ಅಲೆಯನ್ನು ನಾವು ಮೊದಲೇ ಗ್ರಹಿಸಿದ್ದೆವು ಎಂದು ಹೇಳಿದರು.

ಚುನಾವಣೆಗೂ ಆರು ತಿಂಗಳ ಮುಂಚಿತವಾಗಿಯೇ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಮಾರ್ಗದರ್ಶನದಲ್ಲಿ ಸೂಕ್ತ ಯೋಜನೆಗಳನ್ನು ರೂಪಿಸಿ, ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಇದರ ಜೊತೆಗೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಕೇರಳದ ಜನರಿಗಿರುವ ಅಪಾರ ಪ್ರೀತಿ ಮತ್ತು ಅವರ ಜನಪ್ರಿಯತೆಯು ಯುಡಿಎಫ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಸಚಿವರು ವಿಶ್ಲೇಷಿಸಿದರು.

ಇತರ ರಾಜ್ಯಗಳಲ್ಲಿ ನಾವು ಕೇವಲ ಮೈತ್ರಿ ಪಾಲುದಾರರಾಗಿದ್ದೆವು. ಆದರೆ ಕೇರಳದಲ್ಲಿ ನಾವು ಸಾಕಷ್ಟು ಮುಂಚಿತವಾಗಿಯೇ ಯೋಜನೆ ರೂಪಿಸಿ, ತಳಮಟ್ಟದಲ್ಲಿ ಕೆಲಸ ಮಾಡಿದ್ದೆವು. ಜನರ ಒಲವು ಮತ್ತು ನಮ್ಮ ವ್ಯವಸ್ಥಿತ ಕಾರ್ಯತಂತ್ರದಿಂದಾಗಿ ಇಂದು ಅಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ಉಪಚುನಾವಣೆ ಗೆಲುವು ಗ್ಯಾರಂಟಿ ಯೋಜನೆಗಳಿಗೆ ಸಂದ ಜಯ:

ಇದೇ ವೇಳೆ ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಉಪಚುನಾವಣೆಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಎರಡು ಉಪಚುನಾವಣೆಗಳಲ್ಲಿ ನಮ್ಮ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಇದು ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪರ ಗ್ಯಾರಂಟಿ ಯೋಜನೆಗಳಿಗೆ ಜನತೆ ನೀಡಿರುವ ಸ್ಪಷ್ಟ ಮನ್ನಣೆ ಮತ್ತು ಆಶೀರ್ವಾದವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.


Share

You cannot copy content of this page