ಬೆಂಗಳೂರು: ಸ್ವಚ್ಛತಾ ಸಿಬ್ಬಂದಿಗಳಿಗೆ ಕಾನೂನು ರೀತ್ಯಾ ಸಿಗಬೇಕಾದ ಸೌಲಭ್ಯಗಳಿಗೆ ಯಾವುದೇ ರಾಜಿ ಇಲ್ಲ. ಪೌರಕಾರ್ಮಿಕರ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ.ರಘು ತಿಳಿಸಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಜಯನಗರದಲ್ಲಿರುವ ಕಮ್ಯೂನಿಟಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಕಾಲೇಜಿನ ಆಡಿಟೋರಿಯಂ ನಲ್ಲಿ ಇಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಲೋಡರ್ಸ್, ಕ್ಲೀನರ್‌ಗಳು, ಆಟೋ ಟಿಪ್ಪರ್ ಚಾಲಕರು ಮತ್ತು ಇನ್ನಿತರೆ ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ಅವರು ನೇರ ಸಂವಾದ ನಡೆಸಿದರು.
ಸಂವಾದದ ವೇಳೆ ಸ್ವಚ್ಛತಾ ಕಾರ್ಮಿಕರು ತಮ್ಮ ಅನೇಕ ಸಮಸ್ಯೆಗಳಾದ ಸೌಲಭ್ಯಗಳ ಕೊರತೆ, ನೇಮಕಾತಿಗೆ ಸಂಬಂಧಿಸಿದ ತೊಂದರೆಗಳು, ಮೃತ ಪೌರ ಕಾರ್ಮಿಕರಿಗೆ ಪರಿಹಾರ ವಿಳಂಬ, ಪಿಎಫ್ ಸಂಬಂಧಿತ ಸಮಸ್ಯೆ, ಬೈಯೋಮೆಟ್ರಿಕ್ ಹಾಜರಾತಿ ಸಮಸ್ಯೆ, ವೇತನ ಬಾಕಿ, ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿ ಸಮಸ್ಯೆ ಮುಂತಾದವುಗಳ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದರು. ಪ್ರತಿ ವಿಷಯವನ್ನೂ ಗಂಭೀರವಾಗಿ ಆಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಬಾಕಿಯಿರುವ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ನೀಡಲು ಸೂಚನೆ:
ಅರ್ಹ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಬಾಕಿ ಇರುವ ಪ್ರಕರಣಗಳಲ್ಲಿ ಒಂದು ವಾರದೊಳಗಾಗಿ ಆದೇಶ ಪ್ರತಿ ನೀಡಬೇಕು.ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿ ವಾರ್ಡ್ ಗಳಲ್ಲಿ ಸುವಿಧ ವಿಶ್ರಾಂತಿ ಕೊಠಡಿಗಳನ್ನು ವಿಸ್ತರಿಸಿ, ಪ್ರತಿಯೊಂದು ಮಸ್ಟರಿಂಗ್ ಪಾಯಿಂಟ್ ಗಳಲ್ಲೂ ವಿಶ್ರಾಂತಿ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು ಎಂದು ಸೂಚಿಸಿದರು.
ಕೆಲವು ಸಂದರ್ಭದಲ್ಲಿ ಪೌರಕಾರ್ಮಿಕರು ಶೌಚಾಲಯ ಬಳಸಲು ಹೋಟೆಲ್ ನವರು ನಿರಾಕರಣೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ವಿಷಯಗಳು ಮರುಕಳಿಸಿದಲ್ಲಿ ಆಯುಕ್ತರು ಅಂತಹ ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಿ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಎಂದರು.
ವೇತನ ಪರಿಹಾರಕ್ಕೆ ಕ್ರಮ:
ಉದ್ಯಾನವನಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಸುಸ್ಥಿತಿಯಲ್ಲಿಟ್ಟು ಪೌರ ಕಾರ್ಮಿಕರಿಗೆ ಉಪಯೋಗಿಸಲು ಅವಕಾಶ ಕಲ್ಪಿಸುವುದು. ತಾಂತ್ರಿಕ ಕಾರಣಗಳಿಂದ ವೇತನ ಪಾವತಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳಿಗೆ ತಕ್ಷಣ ಪರಿಹಾರಕ್ಕೆ ಕ್ರಮ ವಹಿಸಬೇಕು. ಸೇವೆಯಲ್ಲಿ ಮೃತರಾದ ಸ್ವಚ್ಛತಾ ಕಾರ್ಮಿಕರ ಕುಟುಂಬಗಳಿಗೆ ನೀಡಬೇಕಾದ ಪರಿಹಾರವನ್ನು ತ್ವರಿತವಾಗಿ ಒದಗಿಸಲು ಸೂಚಿಸಿದರು.
ಸ್ವಚ್ಛತಾ ಸಿಬ್ಬಂದಿ ಮರಣಾನಂತರ ಅನುಕಂಪದ ನೇಮಕಾತಿಗೆ ಸಂಬಂಧಿಸಿದ ಪ್ರಕರಣ ಸರ್ಕಾರದ ಹಂತದಲ್ಲಿದ್ದು, ಪ್ರಸ್ತುತ 10 ಲಕ್ಷ ರೂಪಾಯಿಗಳ ಪರಿಹಾರ ನೀಡುತ್ತಿರುವುದು ಸರಿಯಾಗಿ ತಲುಪುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸೂಚಿಸಿದರು.
ಸಾಮಾನ್ಯ ಆರೋಗ್ಯ ತಪಾಸಣೆ ಅಗತ್ಯ:
ಸ್ವಚ್ಛತಾ ಸಿಬ್ಬಂದಿಗಳಿಗೆ ಪ್ರತಿ 3 ತಿಂಗಳಿಗೊಮ್ಮೆ ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ವರ್ಷಕ್ಕೊಮ್ಮೆ ಮಾಸ್ಟರ್ ಆರೋಗ್ಯ ತಪಾಸಣೆ ನಡೆಸಲು ಕೈಗೊಳ್ಳುವುದು. ಪೌರ ಕಾರ್ಮಿಕ ನೇಮಕಾತಿಗೆ ಸಂಬಂಧಿಸಿದಂತೆ ಸಿಂಧುತ್ವ ಪ್ರಮಾಣ ಪತ್ರ ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ನಿರ್ದೇಶಿಸಿದರು.
ಪಿಎಫ್, ಇ.ಎಸ್.ಐ ಪ್ರತಿ ತಿಂಗಳು ಪಾವತಿಗೆ ಕ್ರಮ:
ನೇರ ವೇತನ ಪಾವತಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಕನಿಷ್ಠ ವೇತನ ಕಾಯ್ದೆ ಪ್ರಕಾರ ವೇತನ ಪಾವತಿಗೆ ಕ್ರಮ ವಹಿಸುವುದು ಪಿಎಫ್ ಹಾಗೂ ಇ.ಎಸ್.ಐ ಗಳನ್ನು ಪ್ರತಿ ತಿಂಗಳು ತಪ್ಪದೇ ಪಾವತಿಸುವುದು.
ಮೇಲಾಧಿಕಾರಿಗಳು ಪೌರಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಹಾಗೂ ಪೌರಕಾರ್ಮಿಕರು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಬಂದಾಗ ಸೌಜನ್ಯವಾಗಿ ಸ್ಪಂದಿಸಿ ನಿಯಮಾನುಸಾರ ಕ್ರಮ ಜರುಗಿಸಬೇಕು.
ಸಂವಾದ ಕಾರ್ಯಕ್ರಮದಲ್ಲಿ ಪಾಲಿಕೆಯ ಆಯುಕ್ತರಾದ ಕೆ. ಎನ್. ರಮೇಶ್, ಅಪರ ಆಯುಕ್ತರಾದ ರಾಚಪ್ಪ, ಜಂಟಿ ಆಯುಕ್ತರಾದ ಸತೀಶ್ ಬಾಬು ಹಾಗೂ ಶ್ರೀಮತಿ ಮಧು, BSWML ಮುಖ್ಯ ಕಾರ್ಯಚರಣೆ ಅಧಿಕಾರಿಯಾದ ಶ್ರೀಮತಿ ರಮಾಮಣಿ, ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿಗಳಾದ ಶ್ರೀಮತಿ ಸುಮಯ ರೂಹಿ, ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
