ಕಲಬುರಗಿ: ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯಾಧುನಿಕ ಜೈವಿಕ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರವಾದ ಬೆಂಗಳೂರು ಬಯೋಇನ್ನೋವೇಷನ್ ಸೆಂಟರ್ (BBC) ಮತ್ತು NABARD ಸಹಯೋಗದೊಂದಿಗೆ “ರೈತರು – ಎಫ್‌ಪಿಒಗಳು – ಸ್ಟಾರ್ಟ್‌ಅಪ್‌ಗಳು – ಎಂಎಸ್‌ಎಂಇಗಳ ಸಮಾವೇಶ ಮತ್ತು ಇಮರ್ಶನ್ ಕಾರ್ಯಕ್ರಮ 2026” ಕಲ್ಯಾಣ ಕರ್ನಾಟಕ ಪ್ರದೇಶ ಉಪಕ್ರಮದಡಿ ಕಲಬುರಗಿಯ ZEST ಕ್ಲಬ್‌ನಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ 1,200ಕ್ಕೂ ಹೆಚ್ಚು ರೈತರು, 35 ಸ್ಟಾರ್ಟ್‌ಅಪ್‌ಗಳು, 25 ಎಫ್‌ಪಿಒಗಳು, 10 ಎಂಎಸ್‌ಎಂಇ ಪ್ರತಿನಿಧಿಗಳು, 100ಕ್ಕೂ ಹೆಚ್ಚು ಕೃಷಿ ವಿದ್ಯಾರ್ಥಿಗಳು ಹಾಗೂ ಹಲವಾರು ಕೈಗಾರಿಕಾ ಮತ್ತು ಸಂಸ್ಥಾತ್ಮಕ ಪ್ರತಿನಿಧಿಗಳು ಭಾಗವಹಿಸಿದರು. ರೈತರು, ಎಫ್‌ಪಿಒಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಮಾರುಕಟ್ಟೆ ವಲಯದ ನಡುವೆ ನೇರ ಸಂಪರ್ಕ ನಿರ್ಮಿಸಿ “ಫಾರ್ಮ್ ಟು ಫೋರ್ಕ್” ವ್ಯವಸ್ಥೆಯನ್ನು ಬಲಪಡಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿತ್ತು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ರೈತರು ಮತ್ತು ಎಫ್‌ಪಿಒಗಳು ಈ ಸಮಾವೇಶದಲ್ಲಿ ಭಾಗವಹಿಸಿ, ಪ್ರದೇಶದ ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿಪಡಿಸಿರುವ ನವೀನ ತಂತ್ರಜ್ಞಾನಗಳನ್ನು ಅರಿತುಕೊಂಡರು. ಜೊತೆಗೆ ಬಿಗ್ಹಾಟ್, ಬಿಗ್‌ಬ್ಯಾಸ್ಕೆಟ್, ಬ್ಲಿಂಕಿಟ್, ಸ್ವಿಗ್ಗಿ, ಇನ್ಸ್ಟಾಮಾರ್ಟ್, ಅಮೆಜಾನ್ ಫ್ರೆಷ್, ಐಟಿಸಿ ಹಾಗೂ ಓರ್ಕ್ಲಾ ಇಂಡಿಯಾ ಸೇರಿದಂತೆ ಪ್ರಮುಖ ಕೈಗಾರಿಕಾ ಸಂಸ್ಥೆಗಳೊಂದಿಗೆ ನೇರ ಸಂವಾದ ನಡೆಸಿ, ಮಾರುಕಟ್ಟೆ ಬೇಡಿಕೆಗಳು, ಕ್ವಿಕ್ ಕಾಮರ್ಸ್ ವೇದಿಕೆಗಳು ಮತ್ತು ತಮ್ಮ ಉತ್ಪನ್ನಗಳಿಗೆ ಉತ್ತಮ ಮೌಲ್ಯ ದೊರಕಿಸಿಕೊಳ್ಳುವ ಅವಕಾಶಗಳ ಕುರಿತು ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದ ಅಂಗವಾಗಿ ಕಲ್ಯಾಣ ಕರ್ನಾಟಕ ಭಾಗದ ಏಳು ಮಹಿಳಾ ರೈತರನ್ನು ಕೃಷಿ ಮತ್ತು ಗ್ರಾಮೀಣ ಉದ್ಯಮ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಗುರುತಿಸಿ ಸನ್ಮಾನಿಸಲಾಯಿತು. ಈ ಪ್ರಕ್ರಿಯೆಗೆ ಜಿಲ್ಲೆಗಳ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಕಾರ ದೊರೆಯಿತು.
ಕಳೆದ ಒಂಬತ್ತು ತಿಂಗಳುಗಳಿಂದ ಹಾಗೂ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಯೋಗದೊಂದಿಗೆ ರೈತರು ಮತ್ತು ಎಫ್‌ಪಿಒಗಳು ಎದುರಿಸುತ್ತಿರುವ ಸವಾಲುಗಳನ್ನು ಬಿಬಿಸಿ -ನಬಾರ್ಡ್ ಹಾಗೂ ಕೆಕೆಆರ್‌ಡಿಬಿ ಅಧ್ಯಯನ ಮಾಡುತ್ತ ಬಂದಿದೆ. ಈ ಸಮಾವೇಶವು ಎಲ್ಲಾ ಹಿತಾಸಕ್ತಿದಾರರನ್ನು ಒಂದೇ ವೇದಿಕೆಗೆ ತರಿಸಿ, ಗ್ರಾಮೀಣ ಉದ್ಯಮಗಳಿಗೆ ಅನುಕೂಲಕರವಾದ ಕಾರ್ಯೋಚಿತ ಪರಿಹಾರಗಳು, ಮಾರುಕಟ್ಟೆ ಪ್ರವೇಶ ಮತ್ತು ಹೊಸ ಅವಕಾಶಗಳನ್ನು ಅನ್ವೇಷಿಸಲು ಸಮಯೋಚಿತ ವೇದಿಕೆಯಾಗಿತು.
ಈ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ “ನವೀನತೆಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ಕಲ್ಯಾಣ ಕರ್ನಾಟಕದಂತಹ ಪ್ರದೇಶಗಳಿಗೂ ತಲುಪಿ ಗಮನಾರ್ಹವಾದ ಪರಿಣಾಮ ಉಂಟುಮಾಡಬೇಕು ಎಂಬುದೇ ಈ ಉಪಕ್ರಮದ ಉದ್ದೇಶ,” ಎಂದು ಹೇಳಿದ್ದಾರೆ.
“BBC ಸಂಸ್ಥೆ ಈ ಭಾಗದ ರೈತರು ಮತ್ತು ಎಫ್‌ಪಿಒಗಳೊಂದಿಗೆ ಸಮನ್ವಯವಾಗಿ ಕೆಲಸ ಮಾಡಿ, ಕೃಷಿ ವೆಚ್ಚ ಕಡಿಮೆ ಮಾಡಲು, ಉತ್ಪಾದಕತೆ ಹೆಚ್ಚಿಸಲು ಮತ್ತು ಉತ್ತಮ ಮಾರುಕಟ್ಟೆ ಪ್ರವೇಶ ಕಲ್ಪಿಸಲು ಪ್ರಯತ್ನಿಸುತ್ತಿದೆ. ವಿಶೇಷವಾಗಿ ಕಮಲಾಪುರ ಕೆಂಪು ಬಾಳೆ ಹಾಗೂ ನಂಜನಗೂಡು ರಸಬಾಳೆ ಬೆಳೆಗಳಿಗೆ ಜೈವಿಕ ಗೊಬ್ಬರ ಪರಿಹಾರಗಳು ಮತ್ತು ಟಿಷ್ಯೂ ಕಲ್ಚರ್ ಸಹಾಯದ ಮೂಲಕ ರೈತರು ಶಾಶ್ವತ ಹಾಗೂ ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತಿದ್ದು, ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಸಹಕಾರಿಯಾಗುತ್ತಿದೆ,” ಎಂದು ಹೇಳಿದ್ದಾರೆ.
