ಸಮಗ್ರ ಸುದ್ದಿ

ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ, ವಿಧಾನಸಭೆ ಚಳಿಗಾಲದ ಅಧಿವೇಶನದ ಕಾರ್ಯತಂತ್ರಗಳ ಚರ್ಚೆ: ಡಿಸಿಎಂ ಡಿ.ಕೆ. ಶಿವಕುಮಾರ್

Share

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ, ದೆಹಲಿಯಲ್ಲಿ ಸರ್ವಪಕ್ಷ ಸಂಸದರ ಸಭೆ, ವಿಧಾನಸಭೆ ಚಳಿಗಾಲದ ಅಧಿವೇಶನದ ಕಾರ್ಯತಂತ್ರಗಳು ಸೇರಿದಂತೆ ಪಕ್ಷ, ಸರ್ಕಾರ ಹಾಗೂ ರಾಜಕೀಯ ವಿಚಾರಗಳ ಕುರಿತು ಉಪಹಾರ ಕೂಟದಲ್ಲಿ ಚರ್ಚಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಉಪಾಹಾರ ಕೂಟದ ಬಳಿಕ ಶಿವಕುಮಾರ್ ಅವರು ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದರು.

ನಾನು ಮುಖ್ಯಮಂತ್ರಿಗಳನ್ನು ಉಪಾಹಾರ ಕೂಟಕ್ಕೆ ಬರುವಂತೆ ಮೊದಲು ಕರೆದಿದ್ದೆ. ನಾವಿಬ್ಬರೂ ಬಹಳ ಸಂತೋಷದಿಂದ ಉಪಹಾರ ಸೇವಿಸಿದ್ದೇವೆ. ಈ ವೇಳೆ ರಾಜಕೀಯವಾಗಿಯೂ ಚರ್ಚೆ ಮಾಡಿದ್ದೇವೆ. ಪದವೀಧರ ಹಾಗೂ ಶಿಕ್ಷಕರ ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿದೆ. ಈ ವಿಚಾರವಾಗಿ ನಾವಿಬ್ಬರೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಪಕ್ಷ ಹಾಗೂ ಸರ್ಕಾರದ ವಿಚಾರವನ್ನು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಅಧಿವೇಶನದಲ್ಲಿ ಯಾವ ರೀತಿ ಹೋರಾಟ ಮಾಡಬೇಕು, ಶಾಸಕರಿಗೆ ನೀಡಬೇಕಾದ ಸಂದೇಶಗಳು, ವಿರೋಧ ಪಕ್ಷಗಳು ಯಾವೆಲ್ಲಾ ವಿಚಾರ ಪ್ರಸ್ತಾಪಿಸಬಹುದು ಎಂದು ಚರ್ಚೆ ಮಾಡಿದ್ದೇವೆ. ವಿರೋಧ ಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದರು, ನಾವು ಒಂದೇ ಧ್ವನಿಯಲ್ಲಿ ಎದುರಿಸಲು ಸಿದ್ಧರಿದ್ದೇವೆ ಎಂದರು.

ಇನ್ನು ದೆಹಲಿಗೆ ಹೋಗಿ ಸರ್ವಪಕ್ಷ ಸಂಸದರ ಸಭೆ ನಡೆಸುವ ಬಗ್ಗೆ ಚರ್ಚೆ ಮಾಡಿದ್ದು, ಡಿಸೆಂಬರ್‌ 8 ರಂದು ದೆಹಲಿಗೆ ಹೋಗಿ ವಾಪಸ್ಸಾಗಬೇಕು ಎಂದು ತೀರ್ಮಾನಿಸಿದ್ದೇವೆ. ಮೇಕೆದಾಟು ವಿಚಾರವಾಗಿ ನ್ಯಾಯಾಲಯದ ತೀರ್ಪು ಬಂದಿದ್ದು, ಮೆಕ್ಕೆಜೋಳ ದರ ವಿಚಾರ, ಕೇಂದ್ರ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಅನುದಾನ ಬಾರದಿರುವ ವಿಚಾರವಾಗಿ ಸಂಸದರ ಜತೆ ಚರ್ಚೆ ಮಾಡಿ ಅವರಿಗೆ ಜವಾಬ್ದಾರಿ ನೀಡಬೇಕಾಗಿದೆ. ಈ ಸಭೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನು ಹಾಗೂ ಜೆಡಿಎಸ್ ನಾಯಕರನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.


Share

You cannot copy content of this page