ಬೆಂಗಳೂರು: ʼಡ್ರೋನ್‌ಗಳು ಆಡಳಿತದ ದಕ್ಷತೆ ಮತ್ತು ಸಾರ್ವಜನಿಕ ಸೇವೆಗಳ ಸ್ವರೂಪವನ್ನು ಗಮನಾರ್ಹವಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿರುವುದರಿಂದ ಅವುಗಳ ವ್ಯಾಪಕ ಬಳಕೆಗೆ ರಾಜ್ಯ ಸರ್ಕಾರವು ಅಗತ್ಯ ಉತ್ತೇಜನ ನೀಡಲಿದೆʼ ಎಂದು ಐಟಿ / ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಇಂದು ಇಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಡ್ರೋನ್ ಉದ್ಯಮದ ಅಭಿವೃದ್ಧಿಗೆ ಸಂಬಂಧಿಸಿದ ಉನ್ನತ ಮಟ್ಟದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ʼಡ್ರೋನ್‌ಗಳ ತಯಾರಿಕೆ ಮತ್ತು ಬಳಕೆಯಲ್ಲಿ ಕರ್ನಾಟಕವು ಆದ್ಯತೆಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕಾರ್ಯಪ್ರವೃತ್ತವಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿ, ಸರ್ಕಾರದ ಅಗತ್ಯ ಬೆಂಬಲ ಮತ್ತು ಅಗತ್ಯ ಇರುವ ಕಡೆಗಳಲ್ಲಿ ಡ್ರೋನ್ ಬಳಕೆ ಹೆಚ್ಚಿಸುವ ಮೂಲಕ ದೇಶದ ಡ್ರೋನ್ ಆರ್ಥಿಕತೆಯನ್ನು ಮುನ್ನಡೆಸಲು ಕರ್ನಾಟಕ ಬದ್ಧವಾಗಿದೆ. ಡ್ರೋನ್‌ಗಳ ಪರೀಕ್ಷಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು, ನಿಯಂತ್ರಣ ಕ್ರಮಗಳನ್ನು ಸರಳೀಕರಣಗೊಳಿಸುವುದು, ಈ ವಲಯದ ನವೋದ್ಯಮಗಳು ಮತ್ತು ಡ್ರೋನ್ ಉದ್ಯಮವು ನಾವೀನ್ಯತೆ ಸಾಧಿಸಲು ಮತ್ತು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಕ್ಕೆ ರಾಜ್ಯ ಸರ್ಕಾರ ಗಮನ ನೀಡುತ್ತಿದೆʼ ಎಂದು ಹೇಳಿದ್ದಾರೆ.
ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆಯು , ಭಾರತದ ಡ್ರೋನ್ ಒಕ್ಕೂಟದ (ಡಿಎಫ್‌ಐ) ಸಹಯೋಗದಲ್ಲಿ ಈ ಸಭೆ ಆಯೋಜಿಸಿತ್ತು.
ಡ್ರೋನ್ ನಾವೀನ್ಯತೆ ಮತ್ತು ಅವುಗಳ ಬಳಕೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿ ಇರುವುದಕ್ಕೆ ಇನ್ನಷ್ಟು ವೇಗ ನೀಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಡ್ರೋನ್ ತಯಾರಿಕೆ, ಪರೀಕ್ಷೆ ಮತ್ತು ದಿನನಿತ್ಯದ ಬಳಕೆಗೆ ಅವುಗಳನ್ನು ವ್ಯಾಪಕವಾಗಿ ಬಳಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉದ್ಯಮದ ಪ್ರಮುಖರು ಸಲಹೆಗಳನ್ನು ನೀಡಿದ್ದಾರೆ.
ಬೆಂಗಳೂರಿನ ಸಮೀಪ ಪ್ರತ್ಯೇಕ ಡ್ರೋನ್ ಹಾರಾಟ ಪರೀಕ್ಷಾ ಸೌಲಭ್ಯ ಅಭಿವೃದ್ಧಿಪಡಿಸುವುದನ್ನು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಚರ್ಚಿಸಿದ ಮುಖ್ಯಾಂಶಗಳು:
ಡ್ರೋನ್ ಪರೀಕ್ಷಾ ಮೂಲಸೌಕರ್ಯ ಅಭಿವೃದ್ಧಿ: ಬೆಂಗಳೂರಿನ ಬಳಿ ಪ್ರತ್ಯೇಕ ಡ್ರೋನ್ ಹಾರಾಟ ಪರೀಕ್ಷಾ ಸೌಲಭ್ಯವನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸುವುದು
ಕೌಶಲ ಮತ್ತು ಪೂರಕ ವ್ಯವಸ್ಥೆಯ ಅಭಿವೃದ್ಧಿ: ಡ್ರೋನ್ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಪರಿಣತರ ಸಂಖ್ಯೆ ಹೆಚ್ಚಿಸಲು ಕಾರ್ಯಪಡೆಯ ತರಬೇತಿ
ಸರ್ಕಾರಿ ಸೇವೆಗಳ ಜಾರಿಗೆ ಅಳವಡಿಕೆ: ಆಡಳಿತ ಸುಧಾರಣೆ ಮತ್ತು ಸೇವೆಗಳನ್ನು ದಕ್ಷ ರೀತಿಯಲ್ಲಿ ಒದಗಿಸಲು ಪ್ರಮುಖ ವಲಯಗಳಲ್ಲಿ ಡ್ರೋನ್ ತಂತ್ರಜ್ಞಾನಗಳ ಬಳಕೆ ವಿಸ್ತರಿಸುವುದು
ಪ್ರತಿ ವರ್ಷ ‘ಬೆಂಗಳೂರು ಡ್ರೋನ್ ಉತ್ಸವ’: ಡ್ರೋನ್ ರೇಸಿಂಗ್, ಹ್ಯಾಕಥಾನ್‌ಗಳು, ನಾವೀನ್ಯತೆ ಪ್ರದರ್ಶನಗಳು ಮತ್ತು ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆ ಉತ್ತೇಜಿಸಲು ಡ್ರೋನ್ ಉತ್ಸವ ಆಯೋಜನೆ
ಬೆಂಗಳೂರನ್ನು ಡ್ರೋನ್ ತಂತ್ರಜ್ಞಾನದ ರಾಷ್ಟ್ರೀಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು
ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಇಲಾಖೆಯ ನಿರ್ದೇಶಕ ಮತ್ತು ಕೆಐಟಿಎಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ, ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತಾ, ಭಾರತದ ಡ್ರೋನ್ ಒಕ್ಕೂಟದ (ಡಿಜಿಐ) ಅಧ್ಯಕ್ಷ ಸ್ಮಿತ್ ಶಾ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಏರ್‌ಬೌಂಡ್, ವೆಕ್ರೋಸ್, ಸಿಡಿ ಸ್ಪೇಸ್ ರೋಬೊಟಿಕ್ಸ್, ಐಡಿಯಾಫೋರ್ಜ್, ಏರಿಯೊ, ಆಸ್ಟೆರಿಯಾ ಏರೋಸ್ಪೇಸ್, ಎಲ್‌ಎಟಿ ಏರೋಸ್ಪೇಸ್, ನ್ಯೂಸ್ಪೇಸ್ ರಿಸರ್ಚ್ ಆ್ಯಂಡ್ ಟೆಕ್ನಾಲಜೀಸ್ ಮತ್ತಿತರ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
