ಸಮಗ್ರ ಸುದ್ದಿ

ಮೈಸೂರಿನಲ್ಲಿ ಎರಡು ದಿನಗಳ ಹಲಸಿನ ಹಬ್ಬಕ್ಕೆ ಚಾಲನೆ |ಹಲಸು ಬರ ಪ್ರದೇಶಗಳ ರೈತರ ಪಾಲಿಗೆ ಕಲ್ಪವೃಕ್ಷ

Share

ಮೈಸೂರು:ವಿದೇಶಿ ಹಣ್ಣುಗಳ ಮೋಹಕ್ಕೆ ಒಳಗಾಗಿರುವ ಗ್ರಾಹಕರು ನಮ್ಮ ಸ್ಥಳೀಯ ಹಲಸನ್ನು ಮರೆತಿದ್ದಾರೆ. ಹಲಸು ಬರ ಪ್ರದೇಶಗಳ ರೈತರ ಪಾಲಿಗೆ ಕಲ್ಪವೃಕ್ಷದಂತಿದೆ. ಹವಾಮಾನ ಬದಲಾವಣೆ ಹಾಗೂ ಅನಿಯಮಿತ ಮಳೆಯ ನಡುವೆಯೂ ಬೆಳೆಯಬಲ್ಲ ಸಾಮರ್ಥ್ಯ ಇದಕ್ಕಿದೆ. ಔಷಧೀಯ ಗುಣಗಳನ್ನು ಹೊಂದಿರುವ ಹಲಸಿನ ಬಳಕೆಯನ್ನು ಉತ್ತೇಜಿಸುವ ಮೂಲಕ ಗ್ರಾಹಕರು ಅದನ್ನು ಮುಖ್ಯವಾಹಿನಿಗೆ ತರಬಹುದು” ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ (KAPPEC) ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಹೇಳಿದರು.

ನಗರದ ವಿನೋಬಾ ರಸ್ತೆಯ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧ, ದೇಸಿ ಸೀಡ್ ಪ್ರೊಡ್ಯೂಸರ್ ಕಂಪನಿ ಹಾಗೂ ತೋಟಗಾರಿಕಾ ಇಲಾಖೆ–ಕಿಸಾನ್ ಮಾಲ್ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಹಲಸಿನ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಹಲಸಿನಿಂದ ಅನೇಕ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದು. ರೈತರು ಮೌಲ್ಯವರ್ಧನೆ ಚಟುವಟಿಕೆಗಳತ್ತ ಮುಖ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು. ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ವ್ಯವಸ್ಥೆಗೆ ಕಪೆಕ್ ಅಗತ್ಯ ಸಹಕಾರ ನೀಡಲಿದೆ” ಎಂದು ಹೇಳಿದರು.

ಹಲಸು ಸೇರಿದಂತೆ ಇತರ ಸಾಂಪ್ರದಾಯಿಕ ಹಣ್ಣುಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಚಟುವಟಿಕೆಯಲ್ಲಿ ತೊಡಗಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ಮಾರ್ಗದರ್ಶನ, ಬೆಂಬಲ ಹಾಗೂ ಮಾರುಕಟ್ಟೆ ಸೌಲಭ್ಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, “ಹಲಸಿನಲ್ಲಿ ಇರುವ ವೈವಿಧ್ಯ ಅಚ್ಚರಿಮೂಡಿಸುತ್ತದೆ. ಕೆಂಪು ಬಣ್ಣದ ಚಂದ್ರ ಹಲಸು, ಮಧುಮೇಹಿಗಳಿಗೆ ಸೂಕ್ತವಾದ ಬಿಳಿ ಹಲಸು, ರುಚಿಕರವಾದ ಹಳದಿ ಹಲಸನ್ನು ಮೇಳದಲ್ಲಿ ನೋಡುವ ಮತ್ತು ಸವಿಯುವ ಅವಕಾಶ ಗ್ರಾಹಕರಿಗೆ ಕಲ್ಪಿಸಿರುವುದು ಶ್ಲಾಘನಿಯ. ನಮ್ಮ ಆಹಾರ ಸಂಸ್ಕೃತಿಯೊಂದಿಗೆ ಬೆರೆತಿರುವ ಹಲಸು ಹೆಚ್ಚು ಹೆಚ್ಚು ಜನಪ್ರಿಯವಾಗಬೇಕು. ಹಿಂದೆ ಕುಟುಂಬದವರು ಒಟ್ಟಾಗಿ ಕುಳಿತು ತೊಳೆಗಳನ್ನು ಬೇರ್ಪಡಿಸಿ ಹಲಸು ತಿನ್ನುತ್ತಿದ್ದ ಸಂಭ್ರಮ ಮತ್ತೆ ಬರಬೇಕು” ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಕಾಲದ ಮಾವಿನ ತಳಿಗಳನ್ನು ಸಂರಕ್ಷಿಸಿರುವ ಕಿರುಗಾವಲಿನ ಹೆಸರಾಂತ ಬೀಜ ಸಂರಕ್ಷಕ ಸೈಯದ್ ಘನಿಖಾನ್ ಮಾತನಾಡಿ, “ ನನ್ನ ತೋಟದಲ್ಲಿ 300 ವರ್ಷಗಳಷ್ಟು ಹಳೆಯದಾದ ,ನೂರಕ್ಕೂ ಹೆಚ್ಚಿನ ಮಾವಿನ ತಳಿಗಳಿವೆ. ಮೋಸಂಬಿ ವಾಸನೆಯ, ಆಪಲ್ ಆಕಾರದ , ಜೀರಿಗೆ ಸುವಾಸನೆಯ, ಸಿಹಿಯೇ ಇಲ್ಲದ ಮಾವಿನ ತಳಿಗಳಿವೆ. ಇಂಥ ಅಪರೂಪದ ತಳಿಗಳನ್ನು ಗ್ರಾಹಕರು ಖರೀದಿಸಿ, ದೇಸಿ ಮಾವಿನ ತಳಿಗಳನ್ನು ಸಂರಕ್ಷಿಸುತ್ತಿರುವ ರೈತರನ್ನು ಪ್ರೋತ್ಸಾಹಿಸಬೇಕು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಸಿಎಆರ್–ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಜ್ಞಾನೇಶ್ ಬಿ.ಎನ್. ಮಾತನಾಡಿ, “ಹಲಸಿನ ಹಣ್ಣು ಮತ್ತು ಬೀಜಗಳಲ್ಲಿ ವಿಟಮಿನ್‌, ಫೈಬರ್‌, ಫೈಟೋಕೆಮಿಕಲ್‌, ಪ್ರೋಟೀನ್‌, ಖನಿಜಾಂಶ ಸೇರಿದಂತೆ ಅನೇಕ ಪೌಷ್ಟಿಕಾಂಶಗಳು ಸಮೃದ್ಧವಾಗಿವೆ. ಹಲಸಿನ ಕಾಯಿ, ಹಣ್ಣು ಹಾಗೂ ಬೀಜಗಳಿಂದ ರುಚಿಕರ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ನಗರ ಪ್ರದೇಶದ ಗ್ರಾಹಕರು ಹಲಸಿನ ಉತ್ಪನ್ನಗಳನ್ನು ಹೆಚ್ಚು ಬಳಸುವ ಮೂಲಕ ರೈತರಿಗೆ ಬೆಂಬಲ ನೀಡಬೇಕು. ರೈತರು ಮತ್ತು ಗ್ರಾಹಕರನ್ನು ಸಂಪರ್ಕಿಸುವ ಇಂತಹ ಹಬ್ಬಗಳನ್ನು ನಗರದ ವಿವಿಧ ಭಾಗಗಳಲ್ಲಿ ಆಯೋಜಿಸಬೇಕು” ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಹಜ ಸಮೃದ್ಧದ ನಿರ್ದೇಶಕ ಜಿ. ಕೃಷ್ಣ ಪ್ರಸಾದ್, “ಹಲಸನ್ನು ಇದುವರೆಗೂ ರಸ್ತೆ ಬದಿಯ ಹಣ್ಣೆಂದು ನಿರ್ಲಕ್ಷ್ಯ ಮಾಡಲಾಗಿದೆ. ಅನಿಶ್ಚಿತ ಮಳೆ ರೈತರನ್ನು ಸಂಕಷ್ಟಕ್ಕೆ ತಳ್ಳಿರುವ ಸಂದರ್ಭದಲ್ಲಿ, ಹಲಸಿನ ಬೆಳೆ ಬರ ಪ್ರದೇಶದ ರೈತರಿಗೆ ಆಶಾಕಿರಣವಾಗಿದೆ. ‘ಬಡವರ ಹಣ್ಣು’ ಎನ್ನಲಾದ ಹಲಸನ್ನು ಮತ್ತೆ ಜನಪ್ರಿಯಗೊಳಿಸುವ ಜವಾಬ್ದಾರಿ ಗ್ರಾಹಕರ ಮೇಲಿದೆ.ಅದಕ್ಕೆ ಅಗತ್ಯವಿರುವ ಸಹಕಾರ ಸರ್ಕಾರ ನೀಡಬೇಕು” ಎಂದರು.

ವಿಶೇಷ ಆಕರ್ಷಣೆ – ಕೆಂಪು ತೊಳೆಗಳ ‘ಚಂದ್ರ’ ಹಲಸು

ಚಿಕ್ಕನಾಯಕನಹಳ್ಳಿಯ ಪ್ರಸಿದ್ಧ ಕೆಂಪು ತೊಳೆಗಳ “ಚಂದ್ರ” ಹಲಸನ್ನು ಮೇಳದಲ್ಲಿ ಮಾರಾಟಕ್ಕೆ ತರಲಾಗಿದ್ದು, ಇದು ಗ್ರಾಹಕರ ಗಮನ ಸೆಳೆಯುತ್ತಿದೆ.
ಕೊಳ್ಳೇಗಾಲ,ಪಿರಿಯಾಪಟ್ಟಣ, ದೊಡ್ಡ ಬಳ್ಳಾಪುರ ,ನಾಗರಹೊಳೆ, ತುಮಕೂರು ಪ್ರದೇಶದಿಂದ ಬಂದಿರುವ ರೈತರು ಗುಣಮಟ್ಟದ ಹಲಸಿನ ಕಾಯಿ ಮತ್ತು ತೊಳೆಗಳನ್ನು ಮಾರಾಟ ಮಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.

ಮೇಳದಲ್ಲಿ ಕೆಂಪು, ಹಳದಿ ಮತ್ತು ಬಿಳಿ ಬಣ್ಣದ ಹಲಸಿನ ವಿವಿಧ ಜಾತಿಗಳನ್ನು ಸವಿದು ಮನೆಗೆ ಕೊಂಡೊಯ್ಯುವ ಅವಕಾಶ ಕಲ್ಪಿಸಲಾಗಿದೆ. ಹಲಸಿನ ಹೋಳಿಗೆ, ಐಸ್‌ಕ್ರೀಂ, ಚಿಪ್ಸ್‌, ಚಾಕೊಲೇಟ್‌, ಹಪ್ಪಳ, ಹಲ್ವಾ, ಕಬಾಬ್‌, ವಡೆ, ದೋಸೆ, ಪಲ್ಯ ಹಾಗೂ ಬಿರಿಯಾನಿ ಸೇರಿದಂತೆ ಹಲವು ಬಗೆಯ ತಿನಿಸುಗಳು ಲಭ್ಯವಿವೆ. ಹಲಸು ಕತ್ತರಿಸುವ ಯಂತ್ರದ ಪ್ರದರ್ಶನ ಮತ್ತು ಮಾರಾಟವೂ ನಡೆಯುತ್ತಿದೆ.

ರುದ್ರಾಕ್ಷಿ ಬಕ್ಕೆ, ಸಿಂಧೂರ, ಸರ್ವ ಋತು, ಅಂಟು ರಹಿತ, ನಾಗಚಂದ್ರ ಮತ್ತು ರಾಮಚಂದ್ರ ಸೇರಿದಂತೆ ಹಲಸಿನ ವಿವಿಧ ತಳಿಗಳು ಮಾರಾಟಕ್ಕಿವೆ. ಸಸ್ಯ ಜಾತಿ ಮತ್ತು ರೈತರ ಹಕ್ಕುಗಳ ರಕ್ಷಣಾ ಪ್ರಾಧಿಕಾರದಲ್ಲಿ ನೋಂದಾಯಿತ ಕರ್ನಾಟಕದ ಮೊದಲ ಕೆಂಪು ಹಲಸಿನ ತಳಿಗಳಾದ “ಸಿದ್ದು ಹಲಸು” ಮತ್ತು “ಶಂಕರ” ಸಸಿಗಳೂ ಲಭ್ಯವಿವೆ.

ವಿಶೇಷ ಸ್ಪರ್ಧೆಗಳು:

ಮೇಳದ ಆಕರ್ಷಣೆಯಾಗಿ, ಭಾನುವಾರ ಮಧ್ಯಾಹ್ನ 2 ಗಂಟೆಗೆ “ಹಲಸು ತಿನ್ನುವ ಸ್ಪರ್ಧೆ” ಆಯೋಜಿಸಲಾಗಿದ್ದು, ನಿಗದಿತ ಸಮಯದಲ್ಲಿ ಹೆಚ್ಚು ತೊಳೆ ತಿನ್ನುವವರನ್ನು ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ.

ಮಕ್ಕಳಿಗಾಗಿ ಭಾನುವಾರ ಬೆಳಿಗ್ಗೆ 10.30 ಕ್ಕೆ “ಹಲಸು ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ. ಜೊತೆಗೆ ಹಲಸಿನ ಹಣ್ಣು ತೂಕ ಊಹಿಸುವ ಮತ್ತು ಹಲಸು ಎತ್ತುವ ಸ್ಪರ್ಧೆಗಳ ಏರ್ಪಡಿಸಲಾಗಿದೆ.

ತಾಜಾ ಹಣ್ಣುಗಳ ಜೊತೆಗೆ ಮಾವಿನ ಉಪ್ಪಿನಕಾಯಿ, ಹಲಸಿನ ಹಪ್ಪಳ, ಚಿಪ್ಸ್‌, ಸಂದಿಗೆ, ಜ್ಯಾಂ, ಹಲ್ವಾ ಹಾಗೂ ವಿವಿಧ ಸಾವಯವ ಉತ್ಪನ್ನಗಳ ಮಾರಾಟವೂ ನಡೆಯುತ್ತಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಗ್ರಾಮೀಣ ಉದ್ಯಮಿಗಳು, ರೈತ ಉತ್ಪಾದಕರ ಸಂಸ್ಥೆಗಳು, ಮಹಿಳಾ ಸಂಘಗಳು ಹಾಗೂ ರೈತರು ಮೌಲ್ಯವರ್ಧಿತ ಹಲಸಿನ ಉತ್ಪನ್ನಗಳು, ಸಿರಿಧಾನ್ಯಗಳು, ಸಾವಯವ ಉತ್ಪನ್ನಗಳು ಮತ್ತು ಕೈಗಾರಿಕಾ ವಸ್ತುಗಳೊಂದಿಗೆ ಭಾಗವಹಿಸಿದ್ದಾರೆ. ಬಿತ್ತನೆ ಹಂಗಾಮಿಗೆ ಅಗತ್ಯ ಬೀಜಗಳು, ಸಾಂಪ್ರದಾಯಿಕ ಭತ್ತದ ಬೀಜಗಳು ಹಾಗೂ ಸಿರಿಧಾನ್ಯಗಳೂ ಮೇಳದಲ್ಲಿ ಲಭ್ಯವಿವೆ.

ಹೆಚ್ಚಿನ ಮಾಹಿತಿಗೆ: 9900746499 / 7090009944 ಗೆ ಸಂಪರ್ಕಿಸಬಹುದು.


Share

You cannot copy content of this page