ಸಮಗ್ರ ಸುದ್ದಿ

ಹೈ ಡೆನ್ಸಿಟಿ ಕಾರಿಡಾರ್ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಬೇಡ: ಲೋಖಂಡೆ ಸ್ನೇಹಲ್ ಸುಧಾಕರ್

Share

ಬೆಂಗಳೂರು: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿ-ಸ್ಮೈಲ್ ವತಿಯಿಂದ ಹೈ ಡೆನ್ಸಿಟಿ ಕಾರಿಡಾರ್ ಪ್ಯಾಕೇಜ್–12ರಡಿ ಐಟಿಪಿಎಲ್ ಮುಖ್ಯರಸ್ತೆಯ ಹೂಡಿ ಜಂಕ್ಷನ್ ಇಂದ ಜಿ.ಆರ್ ಟೆಕ್ ಪಾರ್ಕ್ ವರೆಗೆ ಕೈಗೊಂಡಿರುವ 2 ಕಿ.ಮೀ. ಉದ್ದದ ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಯ ಪ್ರಗತಿಯನ್ನು ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಪರಿಶೀಲಿಸಿದರು.

ರಸ್ತೆಯ ಇನ್ನೊಂದು ಬದಿ ಡಾಂಬರೀಕರಣ ಶೀಘ್ರದಲ್ಲಿ ಮುಗಿಸಿ

ಹೆಚ್‌ಡಿಸಿ ಪ್ಯಾಕೇಜ್–12ರಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಯಲ್ಲಿ ರಸ್ತೆಯ ಎರಡೂ ಬದಿಗಳ ಪೈಕಿ ಒಂದು ಬದಿಯ ಡಾಂಬರೀಕರಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಮತ್ತೊಂದು ಬದಿಯ ಡಾಂಬರೀಕರಣ ಕಾಮಗಾರಿ ಬಾಕಿ ಇರುತ್ತದೆ. ಇನ್ನೊಂದು ಬದಿಯ ರಸ್ತೆ ಡಾಂಬರೀಕರಣವನ್ನು ಶೀಘ್ರದಲ್ಲಿ ಕೈಗೊಂಡು ಈ ರಸ್ತೆಯ ಕಾಮಗಾರಿಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಅಪರ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ಪಾದಚಾರಿ ಮಾರ್ಗದಲ್ಲಿನ ಕುಸಿದ ಭಾಗಗಳ ದುರಸ್ತಿಗೆ ಸೂಚನೆ

ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕೆಲವು ಕಡೆ ಪಾದಚಾರಿ ಮಾರ್ಗದಲ್ಲಿ ಕುಸಿತ ಕಂಡುಬಂದಿರುತ್ತದೆ. ಅವುಗಳನ್ನು ತಕ್ಷಣ ಗುರುತಿಸಿ ಸೂಕ್ತ ರೀತಿಯಲ್ಲಿ ದುರಸ್ತಿಪಡಿಸುವಂತೆ ಸೂಚಿಸಲಾಯಿತು. ಪಾದಚಾರಿ ಮಾರ್ಗವು ಸಮತಟ್ಟು, ಬಲಿಷ್ಠತೆ ಹಾಗೂ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅಗತ್ಯವಾದ ಗುಣಮಟ್ಟವನ್ನು ಹೊಂದಿರುವಂತೆ ಖಚಿತಪಡಿಸಿಕೊಳ್ಳಲು ಹಾಗೂ ಕಾಮಗಾರಿ ಪೂರ್ಣಗೊಂಡ ನಂತರ ದೋಷಗಳು ಕಂಡುಬರದಂತೆ ಗುಣಮಟ್ಟದ ಪರಿಶೀಲನೆಯನ್ನು ಕಟ್ಟುನಿಟ್ಟಾಗಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಳೆನೀರು ಸರಾಗವಾಗಿ ಹರಿಯಲು ರಸ್ತೆ ಬದಿ ಗ್ರೇಟಿಂಗ್ಸ್ ಸ್ವಚ್ಛತೆಗೆ ಸೂಚನೆ

ರಸ್ತೆಯ ಬದಿಗಳಲ್ಲಿ ಮಣ್ಣು, ಕಸ ಹಾಗೂ ಇತರೆ ವಸ್ತುಗಳು ಸಂಗ್ರಹವಾಗಿ ಮಳೆನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತದೆ. ಮಳೆನೀರು ರಸ್ತೆಯ ಮೇಲೆ ನಿಲ್ಲದಂತೆ ಹಾಗೂ ಚರಂಡಿ ವ್ಯವಸ್ಥೆಗೆ ಸರಾಗವಾಗಿ ಹರಿಯುವಂತೆ ರಸ್ತೆಯ ಶೋಲ್ಡರ್‌ಗಳನ್ನು ಮತ್ತು ಗ್ರೇಟಿಂಗ್ಸ್ ಗಳನ್ನು ತಕ್ಷಣವೇ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಯುಟಿಲಿಟಿ ಚೇಂಬರ್ ರಸ್ತೆ ಮಟ್ಟಕ್ಕೆ ಸಮತಟ್ಟು ಮಾಡಲು ಸೂಚನೆ

ರಸ್ತೆಯಲ್ಲಿರುವ ಕೆಲವು ಆಪ್ಟಿಕಲ್ ಫೈಬರ್ ಕೇಬಲ್ ಮತ್ತು ಮ್ಯಾನ್‌ಹೋಲ್ ಚೇಂಬರ್‌ಗಳು ರಸ್ತೆಯ ಮಟ್ಟಕ್ಕೆ ಸಮವಾಗಿಲ್ಲದಿರುವುದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಆಪ್ಟಿಕಲ್ ಫೈಬರ್ ಕೇಬಲ್ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸಿ, ಎಲ್ಲಾ ಚೇಂಬರ್‌ಗಳನ್ನು ರಸ್ತೆ ಮಟ್ಟಕ್ಕೆ ಅನುಗುಣವಾಗಿ ಸಮತಟ್ಟುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಯಾವುದೇ ರೀತಿಯ ಅಪಾಯ ಉಂಟಾಗದಂತೆ ಈ ಕೆಲಸವನ್ನು ತ್ವರಿತವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಹಾನಿಗೊಳಗಾದ ಮೀಡಿಯನ್ ಕರ್ಬ್‌ಗಳ ದುರಸ್ತಿಗೆ ಸೂಚನೆ

ರಸ್ತೆಯ ಕೆಲವು ಕಡೆ ಮೀಡಿಯನ್ ಕರ್ಬ್‌ಗಳು ಹಾನಿಗೊಳಗಾಗಿರುವುದು ಪರಿಶೀಲನೆ ವೇಳೆ ಕಂಡುಬಂದಿದ್ದು, ಹಾನಿಗೊಳಗಾದ ಮೀಡಿಯನ್ ಕರ್ಬ್‌ಗಳನ್ನು ತಕ್ಷಣ ದುರಸ್ತಿಪಡಿಸಿ, ರಸ್ತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಬಿ-ಸ್ಮೈಲ್ ಅಧಿಕಾರಿಗಳಿಗೆ ಸೂಚಿಸಲಾಯಿತು.

ಕಾಮಗಾರಿ ಪೂರ್ಣಗೊಳಿಸುವ ಮುನ್ನ ಎಲ್ಲಾ ದೋಷಗಳನ್ನು ಸರಿಪಡಿಸಲು ಸೂಚನೆ

ರಸ್ತೆಯ ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸುವ ಮುನ್ನ ಬ್ಲ್ಯಾಕ್ ಸ್ಪಾಟ್, ಪಾದಚಾರಿ ಮಾರ್ಗದ ಏರಿಳಿತಗಳು, ಯುಟಿಲಿಟಿ ಚೇಂಬರ್‌ಗಳು, ರಸ್ತೆ ಬದಿಯ ಗ್ರೇಟಿಂಗ್ಸ್ ಸ್ವಚ್ಛತೆ, ಹಾಗೂ ಮೀಡಿಯನ್ ಕರ್ಬ್‌ಗಳ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಬೇಕು ಎಂದು ಅಪರ ಆಯುಕ್ತರು ಸೂಚಿಸಿದರು. ಕಾಮಗಾರಿಯ ಅಂತಿಮ ಹಂತದಲ್ಲಿ ಯಾವುದೇ ಲೋಪ ಉಳಿಯದಂತೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ದುರಸ್ತಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ದೊಡ್ಡನೆಕ್ಕುಂದಿಯ ಇಂದಿರಾ ಕ್ಯಾಂಟೀನ್ ಅಡುಗೆಮನೆ ಪರಿಶೀಲನೆ

ಇದೇ ಸಂದರ್ಭದಲ್ಲಿ ಅಪರ ಆಯುಕ್ತರು ದೊಡ್ಡನೆಕ್ಕುಂದಿ ಪ್ರದೇಶದಲ್ಲಿರುವ ಕಾರ್ಯನಿರ್ವಹಿಸದ ಇಂದಿರಾ ಕ್ಯಾಂಟೀನ್ ಅಡುಗೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾರ್ವಜನಿಕರಿಗೆ ಅಗತ್ಯ ಸೇವೆಯನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಅಡುಗೆಮನೆಯ ಪ್ರಸ್ತುತ ಸ್ಥಿತಿ, ಲಭ್ಯವಿರುವ ಉಪಕರಣಗಳು ಹಾಗೂ ಮೂಲಸೌಕರ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಅಡುಗೆಮನೆಯ ಉಪಕರಣಗಳ ದುರಸ್ತಿ ಮತ್ತು ಸೇವೆಗೆ ಸೂಚನೆ

ಅಡುಗೆಮನೆಯಲ್ಲಿ ಈಗಾಗಲೇ ಲಭ್ಯವಿರುವ ಎಲ್ಲಾ ಅಡುಗೆ ಉಪಕರಣಗಳು ಹಾಗೂ ಯಂತ್ರೋಪಕರಣಗಳನ್ನು ಪರಿಶೀಲಿಸಿ, ಅಗತ್ಯ ಸರ್ವಿಸಿಂಗ್ ಮತ್ತು ದುರಸ್ತಿ ಕೆಲಸವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಕೆಗೆ ಯೋಗ್ಯವಾಗಿರುವ ಉಪಕರಣಗಳನ್ನು ಗುರುತಿಸಿ, ದುರಸ್ತಿಯಿಂದ ಪುನಃ ಕಾರ್ಯನಿರ್ವಹಿಸುವಂತೆ ಮಾಡಬಹುದಾದ ಉಪಕರಣಗಳನ್ನು ತಕ್ಷಣ ಸರ್ವಿಸ್ ಮಾಡಬೇಕು ಎಂದು ತಿಳಿಸಿದರು.

ಅಡುಗೆಮನೆಯ ದುರಸ್ತಿ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳುವ ಮೊದಲು ಸಂಬಂಧಪಟ್ಟ ಟೆಂಡರ್ ಕಡತಗಳನ್ನು ಪರಿಶೀಲಿಸಿ, ಗುತ್ತಿಗೆದಾರರ ನಿರ್ವಹಣೆ ಜವಾಬ್ದಾರಿಯ ವ್ಯಾಪ್ತಿಯನ್ನು ಸ್ಪಷ್ಟಪಡಿಸಿಕೊಳ್ಳುವಂತೆ ಸೂಚಿಸಲಾಯಿತು. ಪ್ರಸ್ತುತ ಗುತ್ತಿಗೆದಾರರೇ ಉಪಕರಣಗಳ ದುರಸ್ತಿ ಅಥವಾ ನಿರ್ವಹಣೆ ಕೈಗೊಳ್ಳಬೇಕೇ ಅಥವಾ ಇಲಾಖೆಯ ವತಿಯಿಂದ ಕಾಮಗಾರಿ ಕೈಗೊಳ್ಳಬೇಕೇ ಎಂಬುದನ್ನು ಟೆಂಡರ್‌ನಲ್ಲಿರುವ ಷರತ್ತುಗಳ ಆಧಾರದ ಮೇಲೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.

ಕೊಳವೆಬಾವಿ ತೆಗೆಸಲು ಸೂಚನೆ

ಅಡುಗೆಮನೆಯ ನಿರಂತರ ಕಾರ್ಯಾಚರಣೆಗೆ ಅಗತ್ಯವಿರುವ ನೀರಿನ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳದಲ್ಲಿಯೇ ಬೋರ್‌ವೆಲ್ ಕೊರೆಸುವ/ಅಗತ್ಯ ನೀರಿನ ಮೂಲ ವ್ಯವಸ್ಥೆ ಕಲ್ಪಿಸುವ ಕುರಿತು ಸೂಚನೆ ನೀಡಿದರು.

ಅಗತ್ಯ ಸಿವಿಲ್ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ

ಅಡುಗೆಮನೆಯ ಕಟ್ಟಡ ಹಾಗೂ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಅಗತ್ಯ ದುರಸ್ತಿ ಮತ್ತು ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಟಿ ಸಿ ಪಾಳ್ಯ ಇಂದಿರಾ ಕ್ಯಾಂಟೀನ್ ಅಡುಗೆ ಕೋಣೆ ಸ್ಥಳಾಂತರಕ್ಕೆ ಕ್ರಮವಹಿಸಿ

ಘನ ಉಚ್ಛ ನ್ಯಾಯಾಲಯದ ಆದೇಶದಂತೆ ಕೆ.ಆರ್ ಪುರ ವ್ಯಾಪ್ತಿಯ ಟಿಸಿ ಪಾಳ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಇಂದಿರಾ ಕ್ಯಾಂಟೀನ್ ಅಡುಗೆ ಕೋಣೆಯನ್ನು ಲಭ್ಯವಿರುವ ಸ್ಥಳಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಡಾ. ಸವಿತಾ, ಆರೋಗ್ಯ ವೈದ್ಯಾಧಿಕಾರಿಗಳು, ಬಿ-ಸ್ಮೈಲ್ ಅಧಿಕಾರಿಗಳು, ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page