ಸಮಗ್ರ ಸುದ್ದಿ

ವಿಧಾನಪರಿಷತ್ ಸಭಾಪತಿಗಳಾಗಿ ಸಲೀಂ ಅಹ್ಮದ್ ಆಯ್ಕೆ

Share

ಬೆಂಗಳೂರು:ವಿಧಾನ ಪರಿಷತ್‍ನ ನೂತನ ಸಭಾಪತಿಗಳಾಗಿ ಸಲೀಂ ಅಹ್ಮದ್ ಅವರು ಆಯ್ಕೆಯಾದರು.  ಇಂದು ವಿಧಾನಪರಿಷತ್‍ನ ಅಧಿವೇಶನದಲ್ಲಿ ಸಭಾಪತಿಗಳ ಆಯ್ಕೆಗೆ ಚುನಾವಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಲೀಂ ಅಹ್ಮದ್ ಅವರು 38 ಮತಗಳನ್ನು  ಹಾಗೂ ಪಿ.ಹೆಚ್. ಪೂಜಾರ್ ಅವರು 30 ಮತಗಳನ್ನು ಪಡೆದರು.

ಹಂಗಾಮಿ ಸಭಾಪತಿಗಳಾದ  ಪುಟ್ಟಣ್ಣ  ಅವರು 38 ಮತಗಳನ್ನು ಪಡೆದ ಸಲೀಂ ಅಹ್ಮದ್ ಅವರನ್ನು ವಿಧಾನಪರಿಷತ್ತಿನ ಸಭಾಪತಿಗಳನ್ನಾಗಿ ಆಯ್ಕೆ ಮಾಡಿ, ಅಭಿನಂದನೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಭಾಪತಿ ಅವರಿಗೆ ಅಭಿನಂದನೆ ಸಲ್ಲಿಸಿ ಸದನಕ್ಕೆ ನೂತನ ಸಚಿರುಗಳನ್ನು ಪರಿಚಯಿಸಿದರು. ಸಭಾ ನಾಯಕರಾದ ಡಾ. ಯತೀಂದ್ರ ಎಸ್., ವಿರೋಧಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಹಾಗೂ ಸದಸ್ಯರುಗಳು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರುಗಳು ಶುಭ ಕೋರಿ, ಅಭಿನಂದನೆ ಸಲ್ಲಿಸಿದರು.

ನೂತನ ಸಭಾಪತಿ ಸಲೀಂ ಅಹ್ಮದ್ ಅವರು ಮಾತನಾಡಿ,  ಸಭಾಪತಿಯ ಸ್ಥಾನವು ಯಾವುದೇ ಒಂದು ಪಕ್ಷಕ್ಕೆ ಸೇರಿದ ಸ್ತಾನವಲ್ಲ ಇದು ಇಡೀ ಸದನದ ಸ್ಥಾನ.  ಈ ಸದನದ ಪ್ರತಿಯೊಬ್ಬ ಸದಸ್ಯರೂ ನನಗೆ ಸಮಾನರು, ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ಪ್ರತಿಯೊಬ್ಬ ಸದಸ್ಯರಿಗೂ ಸಮಾನ ಗೌರವ ಮತ್ತು ಸಮಾನ ಅವಕಾಶ ನೀಡುವುದು ನನ್ನ ಕರ್ತವ್ಯ ಎಂದರು.

ಸದನದಲ್ಲಿ ಒಬ್ಬರ ಮಾತನ್ನು ಒಬ್ಬರು ಕೇಳಬೇಕು. ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು.  ಸರ್ಕಾರವನ್ನು ಪ್ರಶ್ನಿಸಬೇಕು. ಅಗತ್ಯವಿದ್ದಾಗ ಸರ್ಕಾರದ ಉತ್ತಮ ಕಾರ್ಯಗಳನ್ನು ಮೆಚ್ಚಬೇಕು.  ಎಂದರು.

ಸಭಾಪತಿಯಾಗಿ ನನ್ನ ಮುಂದೆ ಇರುವ ಅತ್ಯಂತ ದೊಡ್ಡ ಜವಾಬಾರಿ ಈ ಸದನದ ಘನತೆಯನ್ನು ಕಾಪಾಡುವುದು. ನಿಯಮಗಳನ್ನು ಕಟ್ಟಿನಿಟ್ಟಾಗಿ ಪಾಲಿಸುವುದು. ಪ್ರತಿಯೊಬ್ಬ ಸದಸ್ಯರ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ  ಗೌರವ ನೀಡುವುದು.


ಈ ಸದನದ ಗೌರವವನ್ನು ಕಾಪಾಡಲು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಕರ್ನಾಟಕದ ಜನರ ಆಶೋತ್ರಗಳಿಗೆ ಈ ಸದನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವೇದಿಕೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರ ಸಹಕಾರವನ್ನು ಕೋರುತ್ತೇನೆ  ಎಂದರು.

ನನ್ನನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಿದ ಎಐಸಿಸಿ ಅಧ್ಯಕ್ಷರು ಹಾಗೂ ರಾಜಸ್ಯಸಭಾ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಸೋನಿಯಾ ಗಾಂಧಿ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್‍ಸಿಂಗ್ ಸುರ್ಜೇವಾಲ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರಿಗೆ ಧನ್ಯವಾದ ಅರ್ಪಿಸಿದರು.


Share

You cannot copy content of this page