ಸಮಗ್ರ ಸುದ್ದಿ

ಭಾರತ ಜಾಗತಿಕ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಒದಗಿಸುವ ನಾಯಕ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Share

ಬೆಂಗಳೂರು: ಭಾರತ ಇಂದು ಕೇವಲ ತಂತ್ರಜ್ಞಾನದ ಗ್ರಾಹಕ ದೇಶವಾಗಿ ಉಳಿದಿಲ್ಲ, ಬದಲಿಗೆ ಜಾಗತಿಕ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಒದಗಿಸುವ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಯಶವಂತಪುರದ ಖಾಸಗಿ ಹೋಟೆಲ್‌ನಲ್ಲಿ ನಡೆದ ‘ರಾಷ್ಟ್ರ ನಿರ್ಮಾಣಕ್ಕಾಗಿ ಭಾರತದ ನಾವೀನ್ಯತೆಯ ದಶಕವನ್ನು ಸಬಲೀಕರಣಗೊಳಿಸುವುದು’ ವಿಷಯ ಕುರಿತ ‘ಪ್ಯಾನ್ ಐಐಟಿ ಬೆಂಗಳೂರು ಶೃಂಗಸಭೆ-2026’ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರ ನಿರ್ಮಾಣಕ್ಕಾಗಿ ಭಾರತದ ನಾವೀನ್ಯತೆಯ ದಶಕವನ್ನು ಸಬಲೀಕರಣಗೊಳಿಸುವ ವಿಷಯವು ಅತ್ಯಂತ ಸೂಕ್ತ ಮತ್ತು ಪ್ರಸ್ತುತವಾಗಿದೆ. ಇದು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಬಲ ತುಂಬಲಿದೆ ಎಂದರು.

ದೇಶದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ಕೇವಲ ಐಟಿ ಉದ್ಯಮದ ಕೇಂದ್ರವಲ್ಲ. ಇದು ನಾವೀನ್ಯತೆ, ಸಂಶೋಧನೆ ಮತ್ತು ನವೋದ್ಯಮ (ಸ್ಟಾರ್ಟ್‌ಅಪ್) ಸಂಸ್ಕೃತಿಯ ತವರೂರಾಗಿದೆ. ಇಲ್ಲಿನ ಶೈಕ್ಷಣಿಕ, ಕೈಗಾರಿಕಾ ಮತ್ತು ಸಂಶೋಧನಾ ಸಂಸ್ಥೆಗಳ ನಡುವಿನ ಸಿನರ್ಜಿ ಇಡೀ ದೇಶಕ್ಕೇ ಮಾದರಿ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತದ ಬೌದ್ಧಿಕ ಪರಾಕ್ರಮವನ್ನು ಪಸರಿಸುವಲ್ಲಿ ಐಐಟಿ ಹಳೆಯ ವಿದ್ಯಾರ್ಥಿಗಳ ಕೊಡುಗೆ ಅಪಾರ ಎಂದು ಹೇಳಿದರು.

ಮುಂಬರುವ ದಶಕವನ್ನು ನಾವೀನ್ಯತೆಯ ದಶಕವನ್ನಾಗಿ ಮಾಡಲು ಸಮಾಜ ಮತ್ತು ಉದ್ಯಮ ಎದುರಿಸುತ್ತಿರುವ ನೈಜ ಸಮಸ್ಯೆಗಳಿಗೆ ಪರಿಹಾರ ನೀಡುವ ಸಂಶೋಧನೆಗಳು ನಡೆಯಬೇಕು. ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು, ಸರ್ಕಾರ ಮತ್ತು ನವೋದ್ಯಮಗಳ ನಡುವೆ ಬಲವಾದ ಸಹಯೋಗವಿರಬೇಕು. ತಂತ್ರಜ್ಞಾನದ ಲಾಭಗಳು ಸಮಾಜದ ಕೊನೆಯ ವ್ಯಕ್ತಿಗೂ, ಹಳ್ಳಿಗಳಿಗೂ ಮತ್ತು ರೈತರಿಗೂ ತಲುಪಬೇಕು. ತಂತ್ರಜ್ಞಾನವು ಮಾನವೀಯತೆಯ ಸೇವೆಗೆ ಬಳಕೆಯಾದಾಗ ಮಾತ್ರ ಅದು ರಾಷ್ಟ್ರ ನಿರ್ಮಾಣದ ನಿಜವಾದ ಸಾಧನವಾಗುತ್ತದೆ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಹೊಸ ತಂತ್ರಜ್ಞಾನದ ಈ ಯುಗದಲ್ಲಿ ನೈತಿಕ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

“ಸ್ಟಾರ್ಟ್ಅಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳಿಂದಾಗಿ ಭಾರತವು ಇಂದು ವಿಶ್ವದಲ್ಲೇ 3ನೇ ಅತಿ ದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಾಗಿ ಬೆಳೆದಿದೆ. ಇಂದಿನ ಯುವಕರು ಉದ್ಯೋಗ ಹುಡುಕುವವರಾಗುವ ಬದಲಿಗೆ, ಉದ್ಯೋಗ ನೀಡುವ ಉದ್ಯಮಿಗಳಾಗುತ್ತಿದ್ದಾರೆ. ಯುವಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದರೆ ಭಾರತ ವಿಶ್ವಗುರುವಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.

ಸ್ವಾಮಿ ವಿವೇಕಾನಂದರ ‘ಎದ್ದೇಳಿ, ಎಚ್ಚರಗೊಳ್ಳಿ, ಗುರಿ ತಲುಪುವ ತನಕ ನಿಲ್ಲದಿರಿ’ ಎಂಬ ಸಂದೇಶ ನೀಡಿದ್ದಾರೆ. ದೇಶದ ಯುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ದೊಡ್ಡ ಕನಸು ಕಂಡು, ಸವಾಲುಗಳನ್ನು ಎದುರಿಸಿ ರಾಷ್ಟ್ರ ಸೇವೆಗೆ ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್‌, ರಾಜ್ಯ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌, ಪ್ಯಾನ್‌ ಐಐಟಿ ಅಲುಮ್ನಿ ಇಂಡಿಯಾ ಅಧ್ಯಕ್ಷ ಪ್ರಭಾತ್‌ ಕುಮಾರ್‌, ಎಎನ್‌ಆರ್‌ಎಫ್‌ನ ಸಿಇಒ ಶಿವಕುಮಾರ್‌, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಂಕಜ್‌ಕುಮಾರ್‌ ಪಾಂಡೆ, ಪ್ಯಾನ್‌ ಐಐಟಿ ಬೆಂಗಳೂರು ಶೃಂಗಸಭೆ ಅಧ್ಯಕ್ಷ ನೀರಜ್‌ ಕುಮಾರ್‌ ಸೇರಿದಂತೆ ಮತ್ತಿತರರು ಇದ್ದರು.


Share

You cannot copy content of this page