ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರ ದೆಹಲಿ ಮತ್ತು ಹುಬ್ಬಳ್ಳಿ ಕಾರ್ಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಸಡಗರ, ಸಂಭ್ರಮದಿಂದ ವಿಶಿಷ್ಠವಾಗಿ ಆಚರಿಸಲಾಯಿತು.
ದೆಹಲಿಯ ಗೃಹ ಕಚೇರಿಯಲ್ಲಿ ಸಚಿವರು ರಕ್ಷಣಾ ಸಿಬ್ಬಂದಿ ಮತ್ತು ಸಹೋದ್ಯೋಗಿಗಳ ಜತೆ ಸೇರಿ ಧ್ವಜಾರೋಹಣ ನೆರವೇರಿಸಿದರೆ, ಹುಬ್ಬಳ್ಳಿ ಕಚೇರಿಯಲ್ಲಿ ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ, ಸಮಾನ ಅವಕಾಶ ಲಭಿಸಬೇಕೆಂಬ ಆಶಯ-ಸಂದೇಶದೊಂದಿಗೆ ಸವಿತಾ ಸಮಾಜ, ಹಡಪದ ಸಮಾಜದ ಮುಖಂಡರಿಂದಲೇ ಧ್ವಜಾರೋಹಣ ನೆರವೇರಿಸಿ ಪ್ರೇರಣೆಯಾದರು.
ದೆಹಲಿಯ ಗೃಹ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಚಿವ ಪ್ರಲ್ಹಾದ ಜೋಶಿ ಅವರು ರಕ್ಷಣಾ ಸಿಬ್ಬಂದಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ತಮ್ಮ ನಿವಾಸದಲ್ಲೂ ಹೆಮ್ಮೆಯಿಂದ ತ್ರಿವರ್ಣ ಧ್ವಜ ಹಾರಿಸಿ ‘ಹರ್ ಘರ್ ತಿರಂಗಾ’, ‘ಹರ್ ಮನ್ ತಿರಂಗಾ’ ಅಭಿಯಾನಕ್ಕೆ ಪ್ರೇರಣೆಯಾದರು. 🇮🇳 ತಿರಂಗವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ, ತ್ಯಾಗ ಮತ್ತು ಚೈತನ್ಯವನ್ನು ಸಾಕಾರಗೊಳಿಸುತ್ತದೆ ಎಂದು ಜೋಶಿ ಪ್ರತಿಪಾದಿಸಿದರು.
ನಮ್ಮ ತ್ರಿವರ್ಣ ಧ್ವಜವು ಪ್ರತಿಯೊಬ್ಬರ ಸಮೃದ್ಧಿ ಮತ್ತು ವಿಕಸಿತ ಭಾರತ ನಿರ್ಮಾಣಕ್ಕೆ ಪ್ರೇರೇಪಿಸುತ್ತದೆ. ಈ ಸ್ವಾತಂತ್ರ್ಯ ದಿನದಂದು ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪವನ್ನು ನವೀಕರಿಸೋಣ ಮತ್ತು ಸ್ವಾತಂತ್ರ್ಯ ತಂದುಕೊಟ್ಟವರ ಅಹಿಂಸಾ, ತ್ಯಾಗ, ವೀರ ಪರಂಪರೆ ಮುನ್ನಡೆಸೋಣ ಎಂದು ಹೇಳಿದರು.
ದೆಹಲಿಯ ಗೃಹ ಕಚೇರಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ವೀರ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ತ್ಯಾಗ-ಬಲಿದಾನ, ನಿಸ್ವಾರ್ಥ ಹೋರಾಟ, ಅಪ್ಪಟ ದೇಶಪ್ರೇಮ ಯುವಜನತೆಗೆ ಪ್ರೇರಣಾದಾಯಕ ಎಂದರು.
ಪ್ರೇರಣೆಯಾದ ಹುಬ್ಬಳ್ಳಿ ಕಚೇರಿ: ಸಚಿವ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿ ಕಾರ್ಯಾಲಯದಲ್ಲಿ ಪ್ರತಿ ವರ್ಷದಂತೆ ಶ್ರಮಜೀವಿಗಳಿಂದಲೇ ಧ್ವಜಾರೋಹಣ ನೆರವೇರಿಸಿದ್ದು ಮಾದರಿ ಮತ್ತು ಪ್ರೇರಣೆಯಾಯಿತು.
ಹುಬ್ಬಳ್ಳಿ ಕಚೇರಿಯಲ್ಲಿ ಕಳೆದ ವರ್ಷ ಪಾದರಕ್ಷೆ ಕುಶಲಕರ್ಮಿ ಒಬ್ಬರಿಂದ ಧ್ವಜಾರೋಹಣ ನೆರವೇರಿಸಿ ಮಾದರಿ ಎನಿಸಿದ್ದರೆ, ಈ ಬಾರಿ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಸವಿತಾ ಸಮಾಜ ಮತ್ತು ಹಡಪದ ಸಮಾಜದವರಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶಿಷ್ಠವಾಗಿ ಆಚರಿಸಿ ಸಮಾಜಕ್ಕೆ ಉತ್ತಮ, ಪ್ರೇರಣಾತ್ಮಕ ಸಂದೇಶ ನೀಡಿದರು.
ಶ್ರಮಜೀವಿಗಳಿಗೆ ಸನ್ಮಾನ: ಸವಿತಾ ಸಮಾಜ ಮತ್ತು ಹಡಪದ ಸಮಾಜದ ಮುಖಂಡರಾದ ಮಲ್ಲಪ್ಪ ಹಡಪದ, ಕಲ್ಲಪ್ಪ ಹಡಪದ ಹಾಗೂ ಬುಚ್ಚಣ್ಣ ಮುಸ್ತಿಪಲ್ಲಿ ಅವರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಅಲ್ಲದೇ, ಹಡಪದ ಸಮಾಜದ ಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಸವಿತಾ ಸಮಾಜ ಮತ್ತು ಹಡಪದ ಸಮಾಜದ ಮುಖಂಡರು, ಪಾಲಿಕೆ ಸದಸ್ಯರು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಗಣ್ಯರು ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
