ತುಮಕೂರು: 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಇಂದು ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೇರವೇರಿಸಿ, ಬಳಿಕ ಮಾತನಾಡಿದರು.
ಬ್ರಿಟೀಷರಿಂದ ಸ್ವತಂತ್ರಗೊಂಡ ಭಾರತ ಹಲವು ಬದಲಾವಣೆಗಳನ್ನು ಕಂಡಿದೆ. ಹಲವು ಸಾಧನೆಗಳಿಗೆ ಸಾಕ್ಷಿಯಾಗಿ ವಿಶ್ವ ಭೂಪಟದಲ್ಲಿ ಗಮನ ಸೆಳೆದು ಮಂಚೂಣಿ ರಾಷ್ಟ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಡೀ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ಸಂವಿಧಾನವನ್ನು ಭಾರತ ಹೊಂದಿದೆ ಎಂದರು.
ಕೈಗಾರಿಕೆ, ತಂತ್ರಜ್ಞಾನ, ಕೃಷಿ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿ ವಿಶ್ವದ ಗಮನ ಸೆಳೆದಿದೆ. ಇಂತಹ ಸ್ವತಂತ್ರ ಭಾರತದ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಯಾಗಿ, ಕಂದಾಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವನಾಗಿ, ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವನಾಗಿ 80ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಅತ್ಯಂತ ಖುಷಿ ಮತ್ತು ಸಂಭ್ರಮದಿಂದ ನೆರವೇರಿಸಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ಸುಲಭದ ಹಾದಿಯಾಗಿರಲಿಲ್ಲ ಎಂಬುದನ್ನು ನಾವು ಭಾರತದ ಇತಿಹಾಸದಿಂದ ತಿಳಿದಿದ್ದೇವೆ. ಕೇವಲ ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಬಂದ ಪರಕೀಯರು ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡಿದ್ದಲ್ಲದೆ, ನಮ್ಮ ಭಾರತದಲ್ಲಿನ ದೌರ್ಬಲ್ಯಗಳನ್ನು ಬಂಡವಾಳವಾಗಿಸಿಕೊಂಡು ನೂರಾರು ವರ್ಷಗಳ ಕಾಲ ನಮ್ಮನ್ನು ಆಳಿದ್ದು ದುರ್ದೈವದ ಸಂಗತಿ. ದೇಶ ಗುಲಾಮಗಿರಿಯ ದಾಸ್ಯದಿಂದ ಮುಕ್ತಿ ಹೊಂದಲು ಪರಕೀಯರ ವಿರುದ್ಧ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ 1947ರವರೆಗೆ ನಡೆದ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಪ್ರಾಣತ್ಯಾಗ ಮಾಡಿ ನಮ್ಮೆಲ್ಲರ ಸ್ಮೃತಿಪಟಲದಲ್ಲಿ ಅಜರಾಮರರಾಗಿದ್ದಾರೆ ಎಂದು ಹೇಳಿದರು.
ಬ್ರಿಟೀಷರ ಸರ್ವಾಧಿಕಾರಿ ಧೋರಣೆಯನ್ನು ಕಿತ್ತೊಗೆಯಲು ಪಣ ತೊಟ್ಟು ಭಾರತೀಯರಲ್ಲಿ ಸ್ವಾತಂತ್ರ್ಯದ ಕನಸಿನ ಬೀಜ ಬಿತ್ತಿ, ಸ್ವಾಭಿಮಾನದ ಹೋರಾಟದ ಕಿಡಿ ಹೊತ್ತಿಸಿ, ಕ್ರಾಂತಿಯ ಚಳವಳಿ ರೂಪಿಸಿದ ಸಾವಿರಾರು ಮಹಾತ್ಮರಲ್ಲಿ ಲಾಲ ಲಜಪತರಾಯ್, ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಮೌಲಾನ ಅಬ್ದುಲ್ ಕಲಾಂ ಆಜಾದ್, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಷ್‌ಚಂದ್ರ ಬೋಸ್, ಸರೋಜಿನಿ ನಾಯ್ಡು, ಮುಂತಾದವರು ಒಂದೆಡೆಯಾದರೆ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ಹೋರಾಡುವ ಮೂಲಕ ರಾಷ್ಟ್ರಪಿತರೆನಿಸಿಕೊಂಡರು. ಇವರು ಬ್ರಿಟೀಷರ ವಿರುದ್ಧ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, 1942ರ ಭಾರತ ಬಿಟ್ಟು ತೊಲಗಿ ಚಳವಳಿಗಳ ನಾಯಕತ್ವ ವಹಿಸಿ ಭಾರತೀಯರ ಜನಮಾನಸದಲ್ಲಿ ಚರಿತ್ರಾರ್ಹರಾಗಿ ಉಳಿದಿದ್ದಾರೆ ಎಂದರು.
ಮೈಸೂರು ಹುಲಿ ಟಿಪ್ಪು ಸುಲ್ತಾನ್, ಝಾನ್ಸಿರಾಣಿ ಲಕ್ಷ್ಮೀ ಬಾಯಿ, ತಾತ್ಯಟೋಪಿ, ನಾನಾ ಸಾಹೇಬ್, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಚಂದ್ರಶೇಖರ್ ಆಜಾದ್ ಮುಂತಾದ ಮಹಾತ್ಮರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮನ್ನು ತಾವು ಅರ್ಪಿಸಿಕೊಂಡು ಹುತಾತ್ಮರಾದ ಸಾವಿರಾರು ಮಹನೀಯರ ಸಾಲಿನಲ್ಲಿ ನಿಲ್ಲುತ್ತಾರೆ ಎಂದ ಅವರು ಈ ಸಂದರ್ಭದಲ್ಲಿ ಹುತಾತ್ಮ ನಾಯಕರನ್ನು ಸ್ಮರಿಸಿದರು.
1938ರಲ್ಲಿ ನನ್ನ ಹೆಮ್ಮೆಯ ಜಿಲ್ಲೆ ತುಮಕೂರಿನ ಕುಣಿಗಲ್ ಹಾಗೂ ಮಧುಗಿರಿಯಲ್ಲಿ ಧ್ವಜ ಸತ್ಯಾಗ್ರಹ, 1939ರ ಶಿರಾದಲ್ಲಿ ಅರಣ್ಯ ಸತ್ಯಾಗ್ರಹ, 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಈ ಜಿಲ್ಲೆಯ ಟಿ.ಎಂ. ಮಹಂತಯ್ಯ, ಎ.ವಿ. ಆಚಾರ್, ಟಿ. ಅನಂತರಾಮ ಶೆಟ್ಟಿ, ಕೆ.ಎನ್. ನರಸಿಂಹಯ್ಯ, ಕೆ.ಆರ್. ನರಸಿಂಹ ಐಯ್ಯಂಗಾರ್, ಅಪ್ಪಾಜಪ್ಪ, ಜಿ.ಆರ್. ಚಂಗಲಾರಾಧ್ಯ, ಚನ್ನಪ್ಪ, ಟಿ.ಆರ್. ಪುಟ್ಟಯ್ಯ, ಬಿ. ರಾಜಪ್ಪ, ಎಮ್.ವಿ. ರಾಮರಾವ್, ಮುಂತಾದವರು ತುಮಕೂರಿನವರಾದರೆ ಕೊರಟಗೆರೆಯ ಬಸವರಾಧ್ಯ, ಮಂತ್ರಿ ಚನ್ನಿಗರಾಮಯ್ಯ, ಮಧುಗಿರಿಯ ಮಾಲಿ ಮರಿಯಪ್ಪ ಮತ್ತು ಖಾದ್ರಿ, ಪಾವಗಡದ ಬೂಲಪ್ಪ ಪಿ ರಾಮರಾವ್, ಶಿರಾದ ಗೋವಿಂದಪ್ಪ ರಾಮಪ್ಪ, ಗುಬ್ಬಿಯ ಜಿ.ಹೆಚ್.ಆರ್.ದೇವರು, ಗಂಗಾಧರಪ್ಪ, ಗೋಪಾಲಯ್ಯ, ಚಿಕ್ಕನಾಯಕನಹಳ್ಳಿಯ ನಾರಾಯಣರಾವ್ ಮತ್ತು ಎನ್.ಎಸ್. ಹನುಮಂತರಾವ್, ತುರುವೇಕೆರೆಯ ಅನಂತರಾಮ ಅಯ್ಯಂಗಾರ್, ಟಿ. ಸುಬ್ರಹ್ಮಣ್ಯ, ತಿಪಟೂರಿನ ಅನಿವಾಲದ ನಂಜಪ್ಪ, ಟಿ.ಆರ್. ಮಲ್ಲಪ್ಪ, ಕುಣಿಗಲ್‌ನ ಕರಿಯಪ್ಪ, ಜಿ. ತಮ್ಮಣ್ಣ, ಇನ್ನು ಮುಂತಾದ ಮಹಾತ್ಮರು ಸ್ವತಂತ್ರಕ್ಕಾಗಿ ಹೋರಾಡಿ ಜೈಲುವಾಸ ಅನುಭವಿಸಿದ್ದರು ಎಂಬುದು ಚರಿತ್ರೆಯಲ್ಲಿ ದಾಖಲಾಗಿದೆ ಎಂದು ಹೇಳಿದರು.
ಹೀಗೆ ಸಹಸ್ರ ಭಾರತೀಯರ ತ್ಯಾಗ-ಬಲಿದಾನಗಳ ಮೂಲಕ ಬ್ರಿಟೀಷರ ಆಡಳಿತವನ್ನು ಕೊನೆಗಾಣಿಸಿ 1947ರ ಆಗಸ್ಟ್ 15ರಂದು ಭಾರತ ದೇಶವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಸ್ವತಂತ್ರ ಭಾರತದ ಪ್ರಧಾನ ಮಂತ್ರಿಯಾಗಿ ಪಂಡಿತ್ ಜವಹರಲಾಲ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈ ಅಭೂತಪೂರ್ವ ದಿನವನ್ನು ಅತ್ಯಂತ ಸಂತೋಷ, ಸಂಭ್ರಮ, ಸಡಗರದಿಂದ 79 ವರ್ಷಗಳಿಂದಲೂ ದೇಶಾದ್ಯಂತ ಭಾರತದ ಸ್ವತಂತ್ರ ದಿನಾಚರಣೆಯನ್ನಾಗಿ ಆಚರಿಸುತ್ತಾ ಸ್ವಚ್ಛಂದವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರಗೀತೆ ಹಾಡಿ ರಾಷ್ಟ್ರ ಪ್ರೇಮವನ್ನು ಮೈಗೂಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಭಾರತದ ಪ್ರತಿ ಪ್ರಜೆಯೂ ಇಂದು ಶಾಂತಿ, ಅಹಿಂಸೆ, ಸಹನೆ, ಮಾನವೀಯತೆ ಮತ್ತು ಸಹಬಾಳ್ವೆ ಮುಂತಾದ ಮೂಲ ಮಂತ್ರಗಳನ್ನು ಮೈಗೂಡಿಸಿಕೊಂಡು ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿ ಶಿಕ್ಷಣ, ವೈದ್ಯಕೀಯ, ತಂತ್ರಜ್ಞಾನ, ಆರ್ಥಿಕತೆ, ಕೃಷಿ, ರಾಜಕೀಯ ಕ್ಷೇತ್ರವೂ ಒಳಗೊಂಡಂತೆ ಹಲವಾರು ಕ್ಷೇತ್ರಗಳ ಅದ್ವಿತೀಯ ಸಾಧನೆಯನ್ನು ಮಾಡುತ್ತಾ, ಬಹುದೊಡ್ಡ ಪ್ರಜಾಪ್ರಭುತ್ವ ಮತ್ತು ಗಣತಂತ್ರದ ವ್ಯವಸ್ಥೆಯನ್ನು ಎತ್ತಿಹಿಡಿಯುತ್ತಾ, ಅಖಂಡ ಭಾರತದ ಸರ್ವ ಪ್ರಜೆಗಳಿಗೂ ವ್ಯಕ್ತಿಗೌರವ, ಸ್ವಾತಂತ್ರ್ಯ-ಸಮಾನತೆ, ಸಾಮಾಜಿಕ ನ್ಯಾಯವನ್ನು ವಿಸ್ತರಿಸುತ್ತಾ ಜಗತ್ತೇ ಹೆಮ್ಮೆ ಪಡುವಂತಹ ರೀತಿಯಲ್ಲಿ ಮುಂದುವರೆಯುತ್ತಿರುವ ರಾಷ್ಟ್ರವಾಗಿ ವಿಶ್ವದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣೀಭೂತರಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಡಿಸಿಎಂ ಈ ಸಂದರ್ಭದಲ್ಲಿ ಸ್ಮರಿಸಿದರು.
ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕವಿವಾಣಿಯಂತೆ ಸ್ವತಂತ್ರ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಸರ್ಕಾರ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ರಾಜ್ಯದ ಬಡಜನರ ಏಳಿಗೆಗಾಗಿ ಹಲವಾರು ನೂತನ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ನುಡಿದಂತೆ ನಡೆದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರ ವಿಶ್ವಾಸವನ್ನು ಪ್ರೀತಿಯನ್ನು ಗಳಿಸಿದ್ದೇವೆ.
ಅನ್ನ, ಅಕ್ಷರ, ಆಶ್ರಯ ಈ ನೆಲದ ಮೂಲ ತತ್ವ, ಇತ್ತೀಚಿಗಷ್ಟೆ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀಸಿದ್ದಗಂಗಾಮಠದ ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಯವರ 8ನೇ ಪುಣ್ಯ ಸಂಸ್ಮರಣೆ ಆಚರಿಸಿದ್ದೇವೆ. ಶ್ರೀಗಳ ಆಶಯ, ಆದರ್ಶಗಳನ್ನು ನಮ್ಮ ಸರ್ಕಾರ ಚಾಚೂ ತಪ್ಪದೆ ಪಾಲಿಸುತ್ತಿದೆ ಎಂದರು.
ನಾಡಿನ ಜನತೆಯ ಅಭಿವೃದ್ಧಿಗೆ ಗ್ಯಾರಂಟಿ ಯೋಜನೆಗಳು ಪೂರಕ
ನಾಡಿನ ಸಮಸ್ತ ಜನತೆಯ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ಕರ್ನಾಟಕವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯಲು ಸಂಕಲ್ಪ ಮಾಡಿದೆ ಎಂದು ಉಪ ಮುಖ್ಯಮಂತ್ರಿಗಳು ಡಾ.ಜಿ.ಪರಮೇಶ್ವರ ಅವರು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ರಾಜ್ಯದ ಬಡಜನರ ಏಳಿಗೆಗಾಗಿ ಹಲವಾರು ನೂತನ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಜನರ ವಿಶ್ವಾಸ ಹಾಗೂ ಪ್ರೀತಿಯನ್ನು ಗಳಿಸಿದ್ದೇವೆ ಎಂದರು.
ನಮ್ಮ ಸರ್ಕಾರ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಸೇರಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ “ಅಭಿವೃದ್ಧಿಯೇ ಸ್ವಾತಂತ್ರ್ಯ” ಎಂಬ ಸೂತ್ರದಲ್ಲಿ ನಂಬಿಕೆಯಿಟ್ಟು ಪಂಚ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪಂಚ ಗ್ಯಾರಂಟಿಗಳಲ್ಲೊಂದಾದ ಅನ್ನಭಾಗ್ಯ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಜುಲೈ-2026ರ ಮಾಹೆಯವರೆಗೆ 11,128 ಮೆ.ಟನ್ ಅಕ್ಕಿಯನ್ನು ವಿತರಣೆ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಿಂದ ಜಿಲ್ಲೆಯಲ್ಲಿ 6,27,049 ಪಡಿತರ ಚೀಟಿಗಳ 22.25 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಿದೆ. 2025-26ನೇ ಸಾಲಿನಲ್ಲಿ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ರಾಗಿಗೆ 4,886 ರೂ.ಗಳ ದರದಲ್ಲಿ ಜಿಲ್ಲೆಯ 54,025 ರೈತರಿಂದ ನೇರವಾಗಿ ಒಟ್ಟು 12,32,508 ಕ್ವಿಂಟಾಲ್ ರಾಗಿ ಖರೀದಿಸಿದೆ ಎಂದು ವಿವರಿಸಿದರು.
ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಲು 2023ರ ಜೂನ್ 11 ರಿಂದ ‘ಶಕ್ತಿ’ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮಹತ್ವಪೂರ್ಣ ಯೋಜನೆಯಿಂದಾಗಿ ಜಿಲ್ಲೆಯಲ್ಲಿ 23.52 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಸಲುವಾಗಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಪ್ರತಿಷ್ಠಿತ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ.ಗಳನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತಿದ್ದು, ಈವರೆಗೆ ಜಿಲ್ಲೆಯಲ್ಲಿ 6,19,452 ಫಲಾನುಭವಿಗಳ ಖಾತೆಗೆ ಒಟ್ಟು 3783.40 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ ಎಂದರು.
ಸರ್ಕಾರವು 200 ಯೂನಿಟ್‌ಗಳಿಗಿಂತ ಕಡಿಮೆ ಉಪಯೋಗಿಸುವ ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯ 8 ಲಕ್ಷ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದು, ಯೋಜನೆಗಾಗಿ ಈವರೆಗೂ 872.07 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಯುವನಿಧಿ ಯೋಜನೆಯಡಿ 2023, 2024, 2025, 2026ರಲ್ಲಿ ಡಿಪ್ಲೊಮಾ ಉತ್ತೀರ್ಣರಾದವರಿಗೆ 1,500 ರೂ. ಹಾಗೂ ಯಾವುದೇ ಪದವಿ ಉತ್ತೀರ್ಣರಾದವರಿಗೆ 3,000 ರೂ.ಗಳ ಉದ್ಯೋಗ ಭತ್ಯೆಯನ್ನು ಗರಿಷ್ಠ 2 ವರ್ಷಗಳ ಅವಧಿವರೆಗೂ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 10,814 ಅರ್ಹ ನಿರುದ್ಯೋಗಿ ಫಲಾನುಭವಿಗಳಿಗೆ ಒಟ್ಟು 34.38 ಕೋಟಿ ರೂ.ಗಳ ಉದ್ಯೋಗಭತ್ಯೆಯನ್ನು ಡಿ.ಬಿ.ಟಿ. ಮೂಲಕ ಪಾವತಿ ಮಾಡಲಾಗಿದೆ. ಈ ಎಲ್ಲಾ ಯೋಜನೆಗಳಿಂದಾಗಿ ಜಿಲ್ಲೆಯ ಜನರಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಪ್ರಾರಂಭವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
