ಸಮಗ್ರ ಸುದ್ದಿ

ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು: ಎನ್. ಚಲುವ ರಾಯಸ್ವಾಮಿ

Share

ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ “ಕೃಷಿ – ಮಾಧ್ಯಮ ಸಂವಾದ”ದಲ್ಲಿ ಪಾಲ್ಗೊಂಡ ಕೃಷಿ ಸಚಿವ ಚಲುವರಾಯಸ್ವಾಮಿ, ಕೃಷಿ ಇಲಾಖೆಯ ಕಳೆದ ಮೂರು ವರ್ಷಗಳ ಸಾಧನೆಯ ಬಗ್ಗೆ ಮಾಹಿತಿ ಹಂಚಿಕೊಂಡರು..

ನಮ್ಮ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಲು ಬದ್ದವಾಗಿದೆ. ಕೃಷಿಯನ್ನು ಕೇವಲ ಬದುಕಿನ ಅನಿವಾರ್ಯತೆಯನ್ನಾಗಿಸದೆ, ಅದನ್ನು ಗೌರವಯುತ ಮತ್ತು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ.

​ಕಳೆದ 3 ವರ್ಷಗಳಲ್ಲಿ ನಮ್ಮ ದಕ್ಷ ಆಡಳಿತದಿಂದ ರೈತರ ಆತ್ಮಹತ್ಯೆಗಳು ಗಣನೀಯವಾಗಿ ಇಳಿಕೆಯಾಗಿವೆ. ‘ಕೃಷಿ ಭಾಗ್ಯ’ ಯೋಜನೆಯಡಿ ₹435.05 ಕೋಟಿ ಸಹಾಯಧನದೊಂದಿಗೆ 36,213 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, ₹173 ಕೋಟಿ ವೆಚ್ಚದಲ್ಲಿ 524 ‘ಹೈಟೆಕ್ ಹಾರ್ವೆಸ್ಟರ್ ಹಬ್’ಗಳನ್ನು ಸ್ಥಾಪಿಸಲಾಗಿದೆ.

‘ಬೀಜ ಪರಂಪರೆ’ ಮೂಲಕ 2,100 ದೇಶಿ ತಳಿಗಳನ್ನು ಸಂರಕ್ಷಿಸಿ ಕರ್ನಾಟಕ ದೇಶಕ್ಕೇ ಮಾದರಿಯಾಗಿದೆ. QR Code, FID ಮತ್ತು ‘ಇ-ಸ್ಯಾಪ್’ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ಪಾರದರ್ಶಕ ಡಿಜಿಟಲ್ ಕ್ರಾಂತಿ ತರಲಾಗಿದೆ. ಜೋಯಿಡಾ ಮತ್ತು ಪಾಂಡವಪುರ ತಾಲ್ಲೂಕುಗಳನ್ನು ಸಂಪೂರ್ಣ ಸಾವಯವ ತಾಲ್ಲೂಕುಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, ಸಿರಿಧಾನ್ಯ ಮೇಳಗಳ ಮೂಲಕ ₹335 ಕೋಟಿಗೂ ಅಧಿಕ ವಾಣಿಜ್ಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಲಕ್ಷಾಂತರ ರೈತರಿಗೆ ರಿಯಾಯಿತಿ ದರದಲ್ಲಿ ಬೀಜ, ಯಾಂತ್ರೀಕರಣ ಹಾಗೂ ಸೂಕ್ಷ್ಮ ನೀರಾವರಿ ಒದಗಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ರಾಷ್ಟ್ರಮಟ್ಟದ ಗೌರವ ಲಭಿಸಿದ್ದು, ಮುಂದಿನ ದಿನಗಳಲ್ಲಿ ‘ಡಿಜಿಟಲ್ ಕೃಷಿ’ ಮೂಲಕ ರೈತರ ಉತ್ಪಾದನಾ ವೆಚ್ಚ ತಗ್ಗಿಸಿ ಆದಾಯ ದುಪ್ಪಟ್ಟುಗೊಳಿಸಲು ನಾವು ಶ್ರಮಿಸುತ್ತೇವೆ.

ಕಳೆದೆರಡು ವರ್ಷಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳ ಪ್ರಗತಿಪರ ರೈತರ ಮನೆ, ತೋಟಗಳಿಗೆ ಭೇಟಿ ನೀಡಿ ಸುದೀರ್ಘ ವಿಚಾರ ವಿನಿಮಯ ಮಾಡಿದ್ದೇನೆ. ಈ ಸಂವಾದಗಳಿಂದ ಕಲಿತ ಅನೇಕ ಸಂಗತಿಗಳು ನಮ್ಮ ನೂತನ ಕೃಷಿ ನೀತಿ ಹಾಗೂ ಯೋಜನೆಗಳಾಗಿ ರೂಪುಗೊಂಡಿವೆ. ವಿಶೇಷವೆಂದರೆ, ವೈಜ್ಞಾನಿಕ ಮತ್ತು ಸಾವಯವ ಕೃಷಿ ಮಾಡುತ್ತಿರುವ ಯಾವೊಬ್ಬ ರೈತನೂ ಆರ್ಥಿಕ ತೊಂದರೆಗೆ ಸಿಲುಕಿಲ್ಲ. ಇಂತಹ ಪ್ರಗತಿಪರ ರೈತರು ಪ್ರತಿ ಹಳ್ಳಿಯಲ್ಲೂ ಹೆಚ್ಚಾಗಬೇಕಿದೆ.

ಶೀಘ್ರ ‘ಅಗ್ರಿಬಾಟ್’ ತಂತ್ರಜ್ಞಾನ ಪರಿಚಯ:

ಕೃಷಿಯಲ್ಲಿನ ಇಂತಹ ಅತ್ಯುತ್ತಮ ಪದ್ಧತಿಗಳನ್ನು ಪ್ರತಿಯೊಬ್ಬ ರೈತರೂ ಕಲಿತು ಅಳವಡಿಸಿಕೊಳ್ಳುವ ಅಗತ್ಯವಿದ್ದು, ಇದನ್ನು ಇಡೀ ಸಮುದಾಯಕ್ಕೆ ತಲುಪಿಸುವುದು ನಮ್ಮ ಆದ್ಯತೆಯಾಗಿದೆ. ಇದರ ಜೊತೆ ರೈತರಿಗೆ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಕ್ಷಣ ಮಾತ್ರದಲ್ಲಿ ಪರಿಹಾರ ಹಾಗೂ ಮಾಹಿತಿ ಕಲ್ಪಿಸುವ ದಿಶೆಯಲ್ಲಿ ವಿನೂತನವಾಗಿ “ಅಗ್ರಿ ಬಾಟ್‌” ಎನ್ನುವ ತಂತ್ರಜ್ಞಾನವನ್ನು ಶೀಘ್ರದಲ್ಲಿ ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಜಿ.ಟಿ.ಪುತ್ರ, ಕೆಪೆಕ್‌ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್. ಶಿವಪ್ರಕಾಶ್, ಅಧ್ಯಕ್ಷರಾದ ಬಿ ಹೆಚ್‌ ಹರೀಶ್‌ ಇತರರು ಉಪಸ್ಥಿತರಿದ್ದರು.


Share

You cannot copy content of this page