ಬೆಂಗಳೂರು: ಐಟಿಪಿಎಲ್ ರಸ್ತೆ, ದೇವಸಂದ್ರ ರಸ್ತೆ, ಸರ್ಜಾಪುರ ರಸ್ತೆ ಹಾಗೂ ದೇವರಬೀಸನಹಳ್ಳಿ ಪ್ರದೇಶಗಳಲ್ಲಿ ನಗರ ಪಾಲಿಕೆ ಅನುಮತಿ ಪಡೆಯದೆ ಅನಧಿಕೃತ ರಸ್ತೆ ಅಗೆತ ಪ್ರಕರಣಗಳು ಕಂಡುಬಂದಿದ್ದು, ಹೊಸತಾಗಿ ಡಾಂಬರೀಕರಣಗೊಂಡ ರಸ್ತೆಗಳ ಮಧ್ಯಭಾಗದಲ್ಲಿ ರಸ್ತೆ ಅಗೆದು ಕಾಮಗಾರಿ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಇಂತಹ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ತಡೆಯುವಂತೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು
ಸೂಚಿಸಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಪೂರ್ವಸಿದ್ಧತೆ, ಕೆರೆಗಳ ಸಂರಕ್ಷಣೆ, ರಾಜಕಾಲುವೆಗಳ ನಿರ್ವಹಣೆ, ಒಳಚರಂಡಿ ಸಮಸ್ಯೆಗಳ ಪರಿಹಾರ, ಪ್ರವಾಹ ನಿಯಂತ್ರಣ ಹಾಗೂ ತುರ್ತು ಸ್ಪಂದನಾ ವ್ಯವಸ್ಥೆಗಳ ಕುರಿತು ಪ್ರಗತಿ ಪರಿಶೀಲಿಸಲು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಭೆ ನಡೆಸಿದರು.
ನಗರ ಪಾಲಿಕೆ ವಿಭಾಗೀಯ ಕಾರ್ಯಪಾಲಕ ಇಂಜಿನಿಯರಿಂದ ಅನುಮತಿ ಪಡೆಯದೆ ರಸ್ತೆ ಅಗೆದು ಕಾಮಗಾರಿ ನಡೆಸುತ್ತಿರುವ ವಿವಿಧ ಇಲಾಖೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಯುಕ್ತರು ಸೂಚಿಸಿದರು. ಇಂತಹ ಪ್ರಕರಣಗಳು ಮುಂದುವರಿದರೆ ಎಫ್ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೌದೇನಹಳ್ಳಿ ಕೆರೆಗೆ ಸಂಸ್ಕರಿತ ನೀರು
ಬೆಂಗಳೂರು ಜಲಮಂಡಳಿಯ ಎಸ್.ಟಿ.ಪಿ ಯಿಂದ ಕೌದೇನಹಳ್ಳಿ ಕೆರೆಗೆ ಸಂಸ್ಕರಿತ ನೀರು ಹರಿಸುವ ಸಂಬಂಧ ಈಗಾಗಲೇ ಪೈಪ್ಲೈನ್ ಅಳವಡಿಕೆಗೆ ಸಂಬಂಧಿಸಿದಂತೆ ಜಂಟಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ರಸ್ತೆ ಹಾನಿಯಾಗದಂತೆ ಓಪನ್ ಕಟಿಂಗ್ ಬದಲಿಗೆ ಟ್ರೆಂಚ್ಲೆಸ್ ಟೆಕ್ನಾಲಜಿ ಬಳಸಿಕೊಂಡು ಕಾಮಗಾರಿ ಕೈಗೊಳ್ಳುವುದಾಗಿ ಜಲಮಂಡಳಿ ತಿಳಿಸಿದ್ದು, ವಿಭಾಗ ವ್ಯಾಪ್ತಿಯ ಕಾರ್ಯಪಾಲಕ ಅಭಿಯಂತರಿಂದ ಅನುಮತಿ ಪಡೆದು ಮುಂದಿನ 20 ದಿನಗಳೊಳಗೆ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸಿ ಕೆರೆಗೆ ಸಂಸ್ಕರಿತ ನೀರು ಹರಿಸಲು ಕ್ರಮವಹಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ವೆಂಗಯ್ಯನ ಕೆರೆಗೆ ಎಸ್.ಟಿ. ಪಿಯಿಂದ ಸಂಸ್ಕರಿಸಿದ ನೀರು
ವೆಂಗಯ್ಯನ ಕೆರೆ ಪ್ರದೇಶದಲ್ಲಿ ತಲಾ 30 ಎಂಎಲ್ಡಿ ಸಾಮರ್ಥ್ಯದ ಎರಡು ಎಸ್ಟಿಪಿಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ಎಸ್ಟಿಪಿ ಸಂಪೂರ್ಣ ಕಾರ್ಯನಿರ್ವಹಣೆಯಲ್ಲಿದ್ದರೆ ಮತ್ತೊಂದು ನವೀಕರಣ ಹಂತದಲ್ಲಿರುತ್ತದೆ. ಪ್ರಸ್ತುತ ಸಂಸ್ಕರಿತ ನೀರು ಹಾಗೂ ರಾಜಕಾಲುವೆಯಿಂದ ಬರುವ ಅಶುದ್ಧ ನೀರು ಒಂದೇ ಮಾರ್ಗದಲ್ಲಿ ಮಿಶ್ರಣಗೊಂಡು ಕೆರೆಗೆ ಸೇರುತ್ತಿರುವುದರಿಂದ ಮಾಲಿನ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಪೈಪ್ಲೈನ್ ಅಳವಡಿಸಲು ಅನುಮತಿ ಪಡೆದು ಸಂಸ್ಕರಿತ ನೀರಿಗೆ ಪ್ರತ್ಯೇಕ ಪೈಪ್ಲೈನ್ ವ್ಯವಸ್ಥೆ ಮಾಡಿ, ಅಶುದ್ಧ ನೀರನ್ನು ಡೈವರ್ಷನ್ ಮೂಲಕ ಹರಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಇನ್ನೂ 20 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.
ದೇವರಬೀಸನಹಳ್ಳಿ ಕೆರೆ ಮತ್ತು ಎಸ್ಟಿಪಿ ನಿರ್ವಹಣೆ
ದೇವರಬೀಸನಹಳ್ಳಿ ಪ್ರದೇಶದಲ್ಲಿ ಎರಡು ಎಸ್ಟಿಪಿಗಳು ಕಾರ್ಯನಿರ್ವಹಿಸುತ್ತಿದ್ದು, 1.3 ಎಂಎಲ್ಡಿ ಸಾಮರ್ಥ್ಯದ ಘಟಕವನ್ನು ಆದರ್ಶ ವಸತಿ ಸಮುಚ್ಚಯ ಸಂಸ್ಥೆಯು ಸರ್ಕಾರದ ಅನುಮತಿಯೊಂದಿಗೆ ಸರ್ಕಾರಿ ಜಾಗದಲ್ಲಿ ನಿರ್ವಹಿಸಲಾಗುತ್ತಿದೆ. ಮತ್ತೊಂದು 900 ಕೆ ಎಲ್ ಡಿ ಸಾಮರ್ಥ್ಯದ ಎಸ್ಟಿಪಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯಾಚರಣೆ ಅನುಮತಿ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದು, ಪ್ರಮಾಣಪತ್ರ ದೊರೆತ ಬಳಿಕ ವಸತಿ ಸಮುಚ್ಚಯದ ಒಳಚರಂಡಿ ನೀರನ್ನು 900 ಕೆಎಲ್ಡಿ ಘಟಕಕ್ಕೆ ವರ್ಗಾಯಿಸಲಾಗುವುದು. ಇದರಿಂದ ದೇವರಬೀಸನಹಳ್ಳಿ ಗ್ರಾಮದಿಂದ ಕೆರೆಗೆ ಸೇರುತ್ತಿರುವ ಅಶುದ್ಧ ನೀರನ್ನು ಹಾಲಿ ಇರುವ 1.3 ಎಂ.ಎಲ್.ಡಿ ಸಾಮರ್ಥ್ಯದ ಎಸ್.ಟಿ.ಪಿಗೆ ವರ್ಗಾಯಿಸಿ ಸಂಸ್ಕರಿಸಿದ ನೀರನ್ನು ಕೆರೆಗೆ ಬಿಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ರಿಯಲ್ ಟೈಮ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಸಿ
ಅಪಾರ್ಟ್ಮೆಂಟ್ ಗಳಿಂದ ಸಂಸ್ಕರಿಸಲ್ಪಟ್ಟ ನೀರು ಪ್ರತ್ಯೇಕ ಪೈಪ್ಲೈನ್ ಮೂಲಕ ಕೆರೆಗಳಿಗೆ ಹರಿಯುವಂತೆ ವ್ಯವಸ್ಥೆ ಸಂಬಂಧ ಈಗಾಗಲೇ ಜಲಮಂಡಳಿ ವತಿಯಿದ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿದ್ದು, ಕೆರೆಗಳಿಗೆ ಹರಿಯುವ ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ರಿಯಲ್ ಟೈಮ್ ಸೆನ್ಸರ್ ಆಧಾರಿತ ಮಾನಿಟರಿಂಗ್ ವ್ಯವಸ್ಥೆ ಅಳವಡಿಸುವ ಮೂಲಕ ಕೆರೆಗಳಿಗೆ ಸೇರುವ ನೀರಿನ ಪ್ರಮಾಣ, ಹರಿವು ಹಾಗೂ ಗುಣಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ಒದಗಿಸುವುದು ಮುಖ್ಯ ಎಂದು ಆಯುಕ್ತರು ಸೂಚಿಸಿದರು.
ದೇವಸಂದ್ರ ಬಡಾವಣೆ ಪೈಪ್ಲೈನ್ ಅಲೈನ್ಮೆಂಟ್ ಪರಿಶೀಲನೆ
ದೇವಸಂದ್ರ ಬಡಾವಣೆ ಸಮೀಪದ 900 ಮಿಮೀ ಎಸ್ ಟಿ ಪಿ ಪೈಪ್ಲೈನ್ ಕಾಮಗಾರಿಗೆ ಸಂಬಂಧಿಸಿದ ಭೂಮಾಪನ ಹಾಗೂ ಸರ್ವೆ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚಿಸಲಾಯಿತು.
ಮಳೆ ನೀರು ಕಾಲುವೆ ಸುಸ್ಥಿಯಲ್ಲಿಡಿ
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 225 ಕಿಲೋಮೀಟರ್ ವ್ಯಾಪ್ತಿಯ ಮಳೆ ನೀರು ಕಾಲುವೆ ಜಾಲವಿದ್ದು,125 ಕಿ.ಮೀ ಈಗಾಗಲೇ ಕಾಂಕ್ರೀಟ್ ಕಾಲುವೆ ನಿರ್ಮಿಸಲಾಗಿದೆ. ಬಾಕಿ 100 ಕಿ.ಮೀ ಕಚ್ಚಾ ಕಾಲುವೆಗಳನ್ನು ವಿಶ್ವಬ್ಯಾಂಕ್ ಹಾಗೂ ಸರ್ಕಾರದ ಅನುದಾನದ ಅಡಿಯಲ್ಲಿ ಕಾಲುವೆಗಳ ಅಭಿವೃದ್ಧಿಗ ಬಾಕಿ ಇರುತ್ತದೆ. ಕಾಲುವೆಗಳ ನಿರ್ವಹಣೆ ಕಾಮಗಾರಿಗಳ ಪ್ರಗತಿ ನಿಧಾನವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ಕಾಂಕ್ರೀಟ್ ರಾಜಕಾಲುವೆ ಹಾಗೂ ಕಚ್ಚಾ ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹಾಗೂ ಪ್ರತಿದಿನದ ನಿರ್ವಹಣಾ ಕಾಮಗಾರಿ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಂಡರ್ ಪಾಸ್ ನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ
ತೂಬರಹಳ್ಳಿ, ಕುಂದಲಹಳ್ಳಿ, ದೇವರಬೀಸನಹಳ್ಳಿ, ಲೌರಿ ಜಂಕ್ಷನ್, ದೊಡ್ಡನೆಕ್ಕುಂದಿ ಹಾಗೂ ಪಣತ್ತೂರು ಅಂಡರ್ಪಾಸ್ ಪ್ರದೇಶಗಳಲ್ಲಿ ನೀರು ನಿಲುಗಡೆ ಉಂಟಾಗಿ ಸಂಚಾರ ಸಮಸ್ಯೆ ಉಂಟಾಗದಂತೆ ಕ್ರಮವಹಿಸುವ ಸಲುವಾಗಿ ಕ್ಯಾಚ್ಪಿಟ್ಗಳಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ತೆರವುಗೊಳಿಸಲು ವಿಶೇಷ ತಂಡಗಳನ್ನು ನಿಯೋಜಿಸಿ ನಿರಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ತುರ್ತು ಸ್ಪಂದನಾ ತಂಡಗಳು ಮತ್ತು ಮಳೆಗಾಲ ಪೂರ್ವಸಿದ್ಧತೆ
ಮಳೆಗಾಲದಲ್ಲಿ ನೀರು ನಿಲುಗಡೆ ಸಮಸ್ಯೆ ಉಂಟಾಗುವ ಪ್ರದೇಶಗಳಲ್ಲಿ ಉಪವಿಭಾಗ ಮಟ್ಟದ ತುರ್ತು ಸ್ಪಂದನಾ ತಂಡಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲು ಹಾಗೂ ಕಂಟ್ರೋಲ್ ರೂಂನಿಂದ ದೂರು ಬಂದ 10 ರಿಂದ 15 ನಿಮಿಷಗಳೊಳಗೆ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ತುರ್ತು ಪರಿಸ್ಥಿತಿಗಳಿಗೆ ಅಗತ್ಯವಾದ ಪಂಪ್ಸೆಟ್, ಜೆಸಿಬಿ, ಡಿ-ವಾಟರಿಂಗ್ ಪಂಪ್, ಟಿಪ್ಪರ್, ಟೋಯಿಂಗ್ ರೋಪ್, ಟಾರ್ಪಲಿನ್ ಹಾಗೂ ಇನ್ನಿತರೆ ವಿಪತ್ತು ನಿರ್ವಹಣೆ ಯಂತ್ರೋಪಕರಣಗಳನ್ನು ಸದಾ ಸಿದ್ಧವಾಗಿಡಲು ಕಾರ್ಯಪಾಲಕ ಅಭಿಯಂತರರು ಹಾಗೂ ಅಗ್ನಿ ಶಾಮಕ ಸೂಚಿಸಲಾಯಿತು.
ರಸ್ತೆ ಬದಿ ತ್ಯಾಜ್ಯ, ಕಟ್ಟಡ ಭಗ್ನಾವಶೇಷ ಹಾಗೂ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆ
ರಸ್ತೆ ಬದಿ ಕಸ ಹಾಗೂ ನಿರ್ಮಾಣ ತ್ಯಾಜ್ಯ ಎಸೆಯುವುದರಿಂದ ಮಳೆ ನೀರು ಹರಿವಿಗೆ ಅಡ್ಡಿಯಾಗುತ್ತಿದ್ದು, ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಸಂಚಾರಿ ಪೋಲೀಸ್ ಇಲಾಖೆ ಅಧಿಕಾರಿಗಳಿಗೆ ರಾತ್ರಿ ವೇಳೆ ಗಸ್ತು ಹೆಚ್ಚಿಸಲು ಸೂಚಿಸಿದರು. ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ರಸ್ತೆ ಬದಿ ಹಾಗೂ ಕಾಲುವೆ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮಳೆಗಾಲಕ್ಕೂ ಮುನ್ನ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಹಾಗೂ ಕೊಂಬೆಗಳನ್ನು ಗುರುತಿಸಿ ತಕ್ಷಣವೇ ತೆರವುಗೊಳಿಸುವಂತೆ, ಕತ್ತರಿಸಿದ ಮರಗಳನ್ನು ರಸ್ತೆ ಬದಿಯಲ್ಲಿ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಬಾರದು ಎಂದು ಆಯುಕ್ತರು ಸೂಚಿಸಿದರು.
ಬೀದಿ ದೀಪಗಳ ನಿರ್ವಹಣೆ
ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ಜಂಕ್ಷನ್ಗಳು, ಮುಖ್ಯರಸ್ತೆಗಳು, ಅಂಡರ್ಪಾಸ್ ಗಳು, ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ಹಿಸುವ ಬಗ್ಗೆ ಖಾತ್ರಿ ಪಡಿಸಿಕೊಂಡು ಅಗತ್ಯವಿರುವ ಕಡೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಂಚಾರಿ ಪೊಲೀಸ್ ಇಲಾಖೆ, ಬೆಸ್ಕಾಂ, ಜಲಮಂಡಳಿ, ವಿಪತ್ತು ನಿರ್ವಹಣಾ ವಿಭಾಗ, ಅಗ್ನಿಶಾಮಕ ಇಲಾಖೆ, ಘನ ತ್ಯಾಜ್ಯ ನಿರ್ವಹಣೆ ವಿಭಾಗ, , ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
