ಸಮಗ್ರ ಸುದ್ದಿ

ಹಣದ ಬಡತನ ಇದ್ದಾಗಲೇ ಗುಣಮಟ್ಟದಲ್ಲಿ ಅತ್ಯಂತ ಶ್ರೀಮಂತಿಕೆ ಇದ್ದ ಸಿನಿಮಾಗಳನ್ನು ಕೊಟ್ಟಿರುವ ಕನ್ನಡ ಚಿತ್ರರಂಗ ಈಗ ಕನ್ನಡತನದ ಬೇರುಗಳಿಂದ ಕಳಚಿಕೊಂಡು ಅನಾಥವಾಗಿವೆ: ಕೆ.ವಿ.ಪ್ರಭಾಕರ್

Share

ಬೆಂಗಳೂರು: ಹಣದ ಬಡತನ ಇದ್ದಾಗಲೇ ಗುಣಮಟ್ಟದಲ್ಲಿ ಅತ್ಯಂತ ಶ್ರೀಮಂತಿಕೆ ಇದ್ದ ಸಿನಿಮಾಗಳನ್ನು ಕೊಟ್ಟಿರುವ ಕನ್ನಡ ಚಿತ್ರರಂಗ ಈಗ ಹಣದ ಶ್ರೀಮಂತಿಕೆಯಲ್ಲಿ ಗುಣಮಟ್ಟ ಬಡವಾಗಿದೆ. ಇದಕ್ಕೆ ಸಿನಿಮಾರಂಗ ಕನ್ನಡತನದ ಬೇರುಗಳಿಂದ ಕಳಚಿಕೊಂಡಿರುವುದೇ ಕಾರಣ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆವಿಪಿ ಅಭಿಪ್ರಾಯಪಟ್ಟರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ “ಚಂದನವನ: ಅಂದು-ಇಂದು-ಮುಂದು” ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

*ಶತಮಾನ ಪೂರೈಸಿರುವ ಚಂದನವನಕ್ಕೆ ಸತ್ತ್ವ ಮತ್ತು ಸಂಸ್ಕಾರದ ಜೊತೆಗೆ ಸಾಂಸ್ಕೃತಿಕವಾಗಿ ಆಳವಾದ ಬೇರುಗಳಿವೆ. ಚಂದನವನ ತನ್ನ ಇತಿಹಾಸದಲ್ಲಿ ಯಾವತ್ತೂ ಕೇವಲ ಮನೋರಂಜನೆಯ ಮಾಧ್ಯಮವಾಗಿರಲಿಲ್ಲ. ಬದಲಿಗೆ ಸಾಹಿತ್ಯ, ಸಂಸ್ಕೃತಿ ಮತ್ತು ಬದುಕಿನ ಮೌಲ್ಯಗಳನ್ನು ಬಿಂಬಿಸುವ ಕನ್ನಡಿಯಾಗಿತ್ತು ಎಂದರು.

ಕನ್ನಡದ ಬದುಕನ್ನು ಕಟ್ಟುವ, ಕನ್ನಡದ ಸಂಸ್ಕೃತಿಯನ್ನು ರೂಪಿಸುವ ಮತ್ತು ಕನ್ನಡ ನೆಲದ ಮೌಲ್ಯವನ್ನು ನಿರ್ಧರಿಸುವ ಮೂಲಕ ಕನ್ನಡತನವನ್ನು ಕಟ್ಟಿ ನಿಲ್ಲಿಸುವ ಸಾಂಸ್ಕೃತಿಕ ಚಳವಳಿಯಾಗಿ ಕನ್ನಡ ಸಿನಿಮಾರಂಗ ಬೆಳೆದು ಬಂದಿದೆ.

ಕನ್ನಡದ ಭಾಷಾ ಚಳವಳಿಗಳಿಗೆ ಮತ್ತು ಸಾಹಿತ್ಯ ಚಳವಳಿಗಳಿಗೆ ಕನ್ನಡ ಸಿನಿಮಾರಂಗ ನಿರಂತರವಾಗಿ ಕನ್ನಡಿಯಾಗಿದೆ. 70-80 ರ ದಶಕದಲ್ಲಿ ಕಾರ್ಮಿಕ ಚಳವಳಿ ಜೋರಾಗಿದ್ದ ಹೊತ್ತಲ್ಲಿ “ಕಾರ್ಮಿಕ ಕಳ್ಳನಲ್ಲ” “ಸರ್ವರ್ ಸೋಮಣ್ಣ” ರೀತಿಯ ಹತ್ತಾರು ಸಿನಿಮಾಗಳು ಬಂದವು.

ರೈತ ಹೋರಾಟ ಜೋರಾಗಿದ್ದ ಸಂದರ್ಭದಲ್ಲಿ ರೈತರ ಬದುಕು, ಭೂಮಿಯ ಮೇಲಿನ ಅವರ ಹಕ್ಕು, ಸಾಲದ ಬಾಧೆ ಮತ್ತು ವ್ಯವಸ್ಥೆಯ ವಿರುದ್ಧದ ಹೋರಟಕ್ಕೆ ಕನ್ನಡಿ ಹಿಡಿಯುವ
ಶಿವರಾಮ ಕಾರಂತರ ಕಾದಂಬರಿ ಆಧಾರಿತ, ​ಭೂ ರಹಿತ ದಲಿತ ರೈತನ ಹೋರಾಟದ “ಚೋಮನ ದುಡಿ”ಯಂತಹ ಸಿನಿಮಾಗಳು ಬಂದಿವೆ. ರೈತರ ಬದುಕಿಗೆ ಘನತೆ ಕಟ್ಟಿಕೊಡುವ, ಕೃಷಿಯ ಘನತೆಯನ್ನು ಎತ್ತಿ ಹಿಡಿಯುವ “ಬಂಗಾರದ ಮನುಷ್ಯ” ಸಿನಿಮಾ ವಿಶ್ವ ಶ್ರೇಷ್ಠ ಸಿನಿಮಾಗಳ ಸಾಲಿನಲ್ಲಿ ನಿಂತಿದೆ.

ಬರಗಾಲ ಮತ್ತು ರಾಜಕೀಯ ವ್ಯವಸ್ಥೆಯ ವಿರುದ್ಧ ಹೋರಾಟ ಬಿಂಬಿಸುವ “ಬರ” ಸಿನಿಮಾ 1982 ರಲ್ಲಿ ತೆರೆಗೆ ಬಂತು.
ಕರ್ನಾಟಕದಲ್ಲಿ ಕಾಗೋಡು ಚಳವಳಿಯ ರೈತ ಹೋರಾಟದ ಪರಿಣಾಮಗಳನ್ನು ಹೇಳುವ ಹಾಗೂ ರೈತರ ಸಂಘಟನೆ, ಸಾಲ ಮನ್ನಾಕ್ಕಾಗಿ ನಡೆಯುವ ಚಳವಳಿಗಳು ಮತ್ತು ಜಮೀನ್ದಾರಿ ಪದ್ಧತಿಯ ವಿರುದ್ಧದ ಹೋರಾಟವನ್ನು ನೇರವಾಗಿ ಬಿಂಬಿಸುವ “ರೈತ ಭಾರತ” ಮತ್ತು “ಕ್ರೌರ್ಯ” ರೀತಿಯ ಸಿನಿಮಾಗಳು ಬಂದವು.

ಹಳ್ಳಿಯ ಸಂಪತ್ತು ಮತ್ತು ಮಾರ್ಕೆಟ್ ಮಾಫಿಯಾ ವಿರುದ್ಧದ ಹೋರಾಟವನ್ನು‌ ‘ಯಜಮಾನ’ ಸಿನಿಮಾ ಅರ್ಥ ಮಾಡಿಸಿತು ಎಂದು ವಿವರಿಸಿದರು.

​ಹೀಗೆ ಸಾಮಾಜಿಕ ಕಳಕಳಿಗಳ ಜೊತೆಗೇ ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಸಿನಿಮಾಗಳು ಒಟ್ಟಾರೆ “ಕನ್ನಡತನ” ಅಂದರೆ ಏನು ಎನ್ನುವುದನ್ನು, ಕನ್ನಡತನದ ಮೌಲ್ಯವನ್ನು ನಿರ್ಧರಿಸಿದವು.

ಆಗೆಲ್ಲಾ ಕೇವಲ ಗಲ್ಲಾಪೆಟ್ಟಿಗೆಯ ಯಶಸ್ಸಲ್ಲ, ಜನರ ಮನಸ್ಸು ಗೆಲ್ಲುವ ಉತ್ಸಾಹ ನಮ್ಮ ಸಿನಿಮಾಗಳಲ್ಲಿತ್ತು. “ಇಂಥಾ ಕನ್ನಡ ಚಿತ್ರರಂಗಕ್ಕೆ ಈಗ ಮಚ್ಚಿನ ಹುಚ್ಚು ಹಿಡಿದಿದೆ”

ಯಾವುದೇ ಮೌಲ್ಯಗಳಿಲ್ಲದ “ಮಚ್ಚಿ” ನ ಹೀರೋಯಿಸಂ ಅನ್ನೇ ನಂಬಿಕೊಂಡಿರುವ ಚಿತ್ರಗಳಿಂದಾಗಿ ವಾರ್ಷಿಕ ಚಿತ್ರಗಳ ಸಂಖ್ಯೆ ಮಿತಿ ಮೀರುತ್ತಿವೆ ಎಂದರು.

ಹೀಗಾಗಿ ಅಂದಿನ ಸಿನಿಮಾಗಳಿಗೂ ಇಂದಿನ ಸಿನಿಮಾಗಳಿಗೂ ಗುಣಮಟ್ಟದಲ್ಲಿ ಬಹಳ ವ್ಯತ್ಯಾಸ ಕಾಣುತ್ತಿದೆ.
ಅಭಿರುಚಿ ಇಲ್ಲದ ಬರೀ ದುಡ್ಡಿರುವ ನಿರ್ಮಾಪಕರು,
ಅತಿಯಾಗುತ್ತಿರುವ ಹೊಸಬರ ಸಿನಿಮಾಗಳ ಅಬ್ಬರದಲ್ಲಿ ಅನುಭವಿಗಳಾಗಿರುವ ಹಳಬರಿಗೆ ಬಲವಂತದ ನಿವೃತ್ತಿ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜನರನ್ನು ಚಿತ್ರಮಂದಿರಕ್ಕೆ ಕರೆತರುವ ನಟ, ನಟಿಯರನ್ನು ಬೆಳೆಸದೆ ಈಗ ಕನ್ನಡ ಸಿನಿಮಾಗಳಿಗೆ ಜನ‌ ಬರುತ್ತಿಲ್ಲ ಎಂದು ಬೇಸರ ಪಡುವಂತಾಗಿದೆ. ಆದರೆ ತಾಂತ್ರಿಕ ಕ್ರಾಂತಿಯ ಹೊತ್ತಲ್ಲೂ ಜಾಗತಿಕ ಮನ್ನಣೆ ಗಳಿಸಿದ ಸಿನಿಮಾಗಳನ್ನು ಕನ್ನಡ ಚಿತ್ರರಂಗ ಕೊಟ್ಟಿದೆ.
‘ಕೆ.ಜಿ.ಎಫ್’, ‘ಕಾಂತಾರ’, ‘ಚಾರ್ಲಿ 777’, ‘ವಿಕ್ರಾಂತ್ ರೋಣ’ ಮುಂತಾದ ಚಿತ್ರಗಳು ಕನ್ನಡದ ತಾಕತ್ತನ್ನು ಇಡೀ ಜಗತ್ತಿಗೆ ಪರಿಚಯಿಸಿವೆ. ನಮ್ಮ ಮಣ್ಣಿನ ಕಥೆಗಳು, ನಮ್ಮ ಆಚರಣೆಗಳು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆಯುತ್ತಿವೆ ಎಂದು ವಿವರಿಸಿದರು.

ತಾಂತ್ರಿಕ ಕ್ರಾಂತಿ
ಇಂದು ಕನ್ನಡ ಚಿತ್ರರಂಗ ತನ್ನ ಗಡಿಯನ್ನು ದಾಟಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದೆ. ಒಂದು ಕಾಲದಲ್ಲಿ “ಕನ್ನಡ ಸಿನಿಮಾಗಳನ್ನು ಯಾರು ನೋಡುತ್ತಾರೆ?” ಎಂದವರಿಗೆ ಇಂದು ಈ ನಮ್ಮ ಸಿನಿಮಾಗಳೇ ಉತ್ತರ ನೀಡುತ್ತಿವೆ.
ಹೀಗಾಗಿ ಕನ್ನಡ ಚಿತ್ರರಂಗ ಹಳತು ಮತ್ತು ಹೊಸತನ್ನು ಮೇಳೈಸಿದ ಒಂದು ರೀತಿಯ ಹೈಬ್ರಿಡ್ ಮಾದರಿಯನ್ನು ರೂಪಿಸಿಕೊಂಡರೆ ಮತ್ತೆ ಚಂದನವನಕ್ಕೆ ಮೊದಲಿನ ಸುವರ್ಣ ವೈಭವ ಮರಳಬಹುದು ಎಂದರು.

ಇಲ್ಲದವರ ಕನಸುಗಳನ್ನು‌ ಸಾಕಾರಗೊಳಿಸುವ ಹಾಗೂ ಸಾಕ್ಷಾತ್ಕಾರಗೊಳಿಸುವ ಬಹು ಪರಿಣಾಮಕಾರಿ‌ ಕಲಾ ಮಾಧ್ಯಮ ಎನ್ನುವ ಚರಿತ್ರೆ ನಮ್ಮ ಚಂದನವನಕ್ಕೆ ಇದೆ.
ಉತ್ತಮವಾದದ್ದನ್ನು ಕಲ್ಪಿಸಿಕೊಳ್ಳುವ , ಕಲ್ಪಿಸಿಕೊಂಡಿದ್ದನ್ನು ಸಾಕಾರಗೊಳಿಸಲು ಮನರಂಜನೆಯ ಮೂಲಕ ಸ್ಫೂರ್ತಿ ನೀಡುವ ಸಿನಿಮಾ ಪರಂಪರೆ ಚಂದನವನಕ್ಕಿದೆ ಎಂದರು.

ಮಚ್ಚಿನ‌ ಹುಚ್ಚು ಕನ್ನಡ ಸಿನಿಮಾ ಪರಂಪರೆಯ ಬೇರುಗಳನ್ನು ಯದ್ವಾ ತದ್ವಾ ಕತ್ತರಿಸಿ ಕೊನೆಗೆ ಪ್ರೇಕ್ಷಕರಿಲ್ಲದೆ ಅನಾಥವಾಗಿ
ಪ್ಯಾನ್-ಇಂಡಿಯಾ ಸಿನಿಮಾ ಮಾಡುವ ಗೀಳಿನಲ್ಲಿ ನಮ್ಮ ಚಿತ್ರಗಳು ತಮ್ಮ “ಕನ್ನಡತನ” ಅಥವಾ ಪ್ರಾದೇಶಿಕ ಸೊಗಡನ್ನು ಕಳೆದುಕೊಳ್ಳಬಾರದು. ಕನ್ನಡ ಚಿತ್ರರಂಗಕ್ಕೆ ಹಳೆಯ ಹಿರಿಮೆಯ ಬಲವಿದೆ, ಇಂದಿನ ತಂತ್ರಜ್ಞಾನದ ವೇಗವಿದೆ. ಈ ಎರಡನ್ನೂ ಸಮತೋಲನದಲ್ಲಿ ತೆಗೆದುಕೊಂಡು ಹೋದರೆ ಮುಂದಿನ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಕಷ್ಟವೇನಲ್ಲ ಎಂದರು.

ಒಂದೊಳ್ಳೆ ಸಿನಿಮಾ ಆಗಬೇಕಾದರೆ ಅದಕ್ಕೆ ನಾಯಕ ನಾಯಕಿಯಷ್ಟೆ ಇದ್ದರೆ ಸಾಕು ಎಂಬ ಆಲೋಚನೆಯಿಂದ ಹೊರಬಂದು ಕಥೆ ಕಟ್ಟುವ ಕಥೆಗಾರ, ಕಟ್ಟಿದ ಕಥೆಯನ್ನು ತೆರೆ ಮೇಲೆ ತರಲು ಹೆಣಗುವ ನಿರ್ದೇಶಕ, ಅದಕ್ಕೆ ಒಂದುಗೂಡುವ ತಂತ್ರಜ್ಞಾನರಿಗೂ ಸರಿಯಾದ ಮನ್ನಣೆ ಸಿಗುವ ಯಶಸ್ವೀ ಹೈಬ್ರಿಡ್ ಮಾದರಿಯನ್ನು “ಚಂದನವನ” ಕಟ್ಟಿಕೊಳ್ಳಲಿ ಎಂದು ಆಶಿಸಿದರು.

ವಾಣಿಜ್ಯ ಮಂಡಳಿ ಮುಂದಿಟ್ಟ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಗಣಿಸಲಿದೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಮತ್ತು ನಟ ನಿರ್ದೇಶಕ ರಮೇಶ್ ಅರವಿಂದ್ ಅವರು ವೇದಿಕೆಯಲ್ಲಿದ್ದರು.


Share

You cannot copy content of this page