ಮೈಸೂರು :ಜಂಟಿ ಕೃಷಿ ನಿರ್ದೇಶಕರು (ಜಾಗೃತ ಕೋಶ) ರವರ ಮಾರ್ಗದರ್ಶನದಲ್ಲಿ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯ ಕೊಡಗಳ್ಳಿ ಗ್ರಾಮದಲ್ಲಿರುವ ಕೋಳಿ ಫಾರ್ಮ್ ಒಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 600 ಬ್ಯಾಗ್ ಯೂರಿಯಾ ರಸಗೊಬ್ಬರವನ್ನು ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.
ಜಪ್ತಿ ಮಾಡಲಾದ ರಸಗೊಬ್ಬರದ ಅಂದಾಜು ಮೌಲ್ಯ ಸುಮಾರು ₹14,40,000 ಆಗಿದೆ. ರೈತರಿಗೆ ವಿತರಿಸಬೇಕಾದ ರಸಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸಲು ಯತ್ನಿಸಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಮೈಸೂರು ಕೃಷಿ ಇಲಖೆಯ ಉಪ ನಿರ್ದೇಶಕ, ಟಿ.ನರಸೀಪುರದ ಸಹಾಯಕ ನಿರ್ದೇಶಕ ಹಾಗೂ ಬನ್ನೂರಿನ ಕೃಷಿ ಅಧಿಕಾರಿ ಇವರುಗಳು ಹಾಜರಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮವನ್ನು ಟಿ.ನರಸೀಪುರದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವರ ಮೂಲಕ ಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ರೈತರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ,ಅಕ್ರಮ ರಸಗೊಬ್ಬರ ದಾಸ್ತಾನು, ಹಾಗೂ ಕಾಳಸಂತೆ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
