ಸಮಗ್ರ ಸುದ್ದಿ

ವಿವಿಧ ಕ್ಷೇತ್ರಗಳ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Share

ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2026ರ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.

ಇಬ್ಬರು ಸಾಧಕರಿಗೆ ಪದ್ಮವಿಭೂಷಣ, ಆರು ಸಾಧಕರಿಗೆ ಪದ್ಮಭೂಷಣ ಮತ್ತು 58 ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಯಿತು.

ಚಲನಚಿತ್ರ ನಟ ಧರ್ಮೇಂದ್ರ ಸಿಂಗ್ ಡಿಯೋಲ್ ಅವರು ಕಲಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಅವರ ಪತ್ನಿ ಮತ್ತು ಲೋಕಸಭಾ ಸಂಸದೆ ಹೇಮಾ ಮಾಲಿನಿ ಅವರು ಪ್ರಶಸ್ತಿ ಸ್ವೀಕರಿಸಿದರು.

ಪಿಟೀಲು ವಾದಕ ಡಾ. ಎನ್. ರಾಜಮ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇಂದು ನಡೆದ ಸಮಾರಂಭದಲ್ಲಿ ಕರ್ನಾಟಕದ ಮೂವರು ಸಾಧಕರಿಗೆ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಕಲಾ ಕ್ಷೇತ್ರದಲ್ಲಿ ನೀಡಿದ ಕೊಡಗುಗೆಗಾಗಿ ಶತಾವಧಾನಿ ಡಾ. ಆರ್. ಗಣೇಶ್ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು. ಸಾಮಾಜಿಕ ಸೇವೆ ವಿಭಾಗದಲ್ಲಿ ಪುಸ್ತಕ ಮನೆ ಖ್ಯಾತಿಯ ಅಂಕೇಗೌಡ.ಎಂ ಮತ್ತು ಎಸ್.ಜಿ.ಸುಶೀಲಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.

ಪದ್ಮಭೂಷಣ ವಿಭಾಗದಲ್ಲಿ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಮತ್ತು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಸಾರ್ವಜನಿಕ ವ್ಯವಹಾರಗಳ ಕ್ಷೇತ್ರದಲ್ಲಿನ ಸೇವೆಗಾಗಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.

ಕೈಗಾರಿಕೋದ್ಯಮಿ ಉದಯ್ ಸುರೇಶ್ ಕುಮಾರ್ ಕೋಟಕ್ ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ನೀಡಿದ ಕೊಡುಗೆಗಾಗಿ ಪದ್ಮಭೂಷಣ ಪ್ರಶಸ್ತಿ ಪಡೆದರು, ಡಾ. ಕಲ್ಲಿಪಟ್ಟಿ ರಾಮಸಾಮಿ ಪಲೈಸ್ವಾಮಿ, ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪದ್ಮಭೂಷಣ ಪ್ರಶಸ್ತಿ ಪಡೆದರು.

ಇದೇ ವೇಳೆ ಕನ್ನಡಿಗರಾದ ಅಂಕೇಗೌಡರು, ಎಸ್.ಜಿ.ಸುಶೀಲಮ್ಮ ಅವರ ಜೊತೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಸೇರಿದಂತೆ ಒಟ್ಟು 58 ಗಣ್ಯರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು.

ಸಮಾರಂಭದಲ್ಲಿ, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕ ಸಚಿವರು ಉಪಸ್ಥಿತರಿದ್ದರು.


Share

You cannot copy content of this page