ಸಮಗ್ರ ಸುದ್ದಿ

ಮುಂಗಾರು ಸಿದ್ಧತೆ, ವಿಪತ್ತು ನಿರ್ವಹಣೆಗೆ ಸದಾ ಸನ್ನದ್ಧರಾಗಿರಲು ಕರೆ |ಯಲಹಂಕ ಕೆರೆಯಲ್ಲಿ ಮುಂಗಾರು ಪ್ರವಾಹ ನಿರ್ವಹಣೆ ಸನ್ನದ್ಧತೆ ಅಣಕು ಪ್ರದರ್ಶನ

Share

ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂಗಾರು ಮಳೆಯ ಪೂರ್ವಸಿದ್ಧತಾ ಭಾಗವಾಗಿ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ “ವಿಪತ್ತು ನಿರ್ವಹಣೆಗೆ” ಸದಾ ಸನ್ನದ್ಧರಾಗಿ ಕಾರ್ಯನಿರ್ವಹಿಸಲು ನಗರಪಾಲಿಕೆಯ ಅಧಿಕಾರಿಗಳು ಹಾಗೂ ನಿಯಂತ್ರಣ ಕೊಠಡಿಯ ಸಿಬ್ಬಂದಿಗಳು ಸೇರಿದಂತೆ ಎನ್‌ಡಿಆರ್‌ಎಫ್, ಎಸ್ ಡಿಆರ್ ಎಫ್, ಟೆಲಿಕಾಂ, ಅಗ್ನಿಶಾಮಕ ಮತ್ತು ತುರ್ತುಸೇವೆಗಳು ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕರೆ ನೀಡಲಾಯಿತು.

ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರು, ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಪೊಮ್ಮಲ ಸುನೀಲ್ ಕುಮಾರ್ ರವರ ಸೂಚನೆಯಂತೆ, ಅಪರ ಆಯುಕ್ತರು (ಕಂದಾಯ – ಪ್ರಭಾರ) ಹಾಗೂ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ, ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್ ರವರುಗಳ ನೇತೃತ್ವದಲ್ಲಿ ಮಳೆಗಾಲದ ಸಿದ್ಧತೆಗಳ ಅಂಗವಾಗಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ವಿಭಾಗಗಳ ಸಿಬ್ಬಂದಿ, ಯಂತ್ರೋಪಕರಣಗಳು ಹಾಗೂ ತುರ್ತು ಕಾರ್ಯಾಚರಣೆ ತಂಡಗಳ ಸನ್ನದ್ಧತಾ ಕಾರ್ಯಕ್ರಮ ಮತ್ತು ಪರಿಶೀಲನೆ ನಡೆಸಲಾಯಿತು.

ಸಿದ್ಧತೆಯ ಪರಿಶೀಲನೆ:

ಮಳೆಗಾಲದಲ್ಲಿ ಕಾರ್ಯನಿರ್ವಹಿಸುವ ವಿಪತ್ತು ನಿರ್ವಹಣಾ ತಂಡಗಳು ಹಾಗೂ ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆ (NDRF Karnataka) ಸೇರಿದಂತೆ ವಿವಿಧ ಸಿಬ್ಬಂದಿ ಮತ್ತು ಯಂತ್ರೋಪಕರಣಗಳ ಸನ್ನದ್ಧತೆಯನ್ನು ಪರಿಶೀಲಿಸಲಾಯಿತು.

ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ:

ಈ ವೇಳೆ ಎನ್‌ಡಿಆರ್‌ಎಫ್ (NDRF) ಹಾಗೂ ಎಸ್‌ಡಿಆರ್‌ಎಫ್ (SDRF) ಸಿಬ್ಬಂದಿಯಿಂದ ಪ್ರವಾಹ ಮತ್ತು ನೀರಿನಲ್ಲಿ ಮುಳುಗುವ ಅವಘಡಗಳ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಕುರಿತು ಪ್ರಾಯೋಗಿಕ ಪ್ರದರ್ಶನ ನಡೆಸಲಾಯಿತು.

Contact Rescue ಹಾಗೂ Non-Contact Rescue ವಿಧಾನಗಳ ಮೂಲಕ ನೀರಿನಲ್ಲಿ ಸಿಲುಕಿದವರನ್ನು ಸುರಕ್ಷಿತವಾಗಿ ರಕ್ಷಿಸುವ ವಿಧಾನಗಳನ್ನು ಪ್ರದರ್ಶಿಸಲಾಯಿತು. ಮುಳುಗಿದವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತರುವ ವಿಧಾನಗಳ ಜೊತೆಗೆ, ತುರ್ತು ಸಂದರ್ಭಗಳಲ್ಲಿ ಮನೆಯಲ್ಲಿ ಲಭ್ಯವಿರುವ ವಸ್ತುಗಳು – ಖಾಲಿ ಬಾಟಲಿಗಳು, ಥರ್ಮಕೋಲ್ ಹಾಗೂ ತೆಂಗಿನಕಾಯಿಗಳನ್ನು ಬಳಸಿಕೊಂಡು ತಾತ್ಕಾಲಿಕ ಲೈಫ್ ಜಾಕೆಟ್ ತಯಾರಿಸುವ ಬಗ್ಗೆ ಮಾಹಿತಿ ನೀಡಲಾಯಿತು.

ಇದೇ ವೇಳೆ Golden Time ನ ಮಹತ್ವವನ್ನು ತಿಳಿಸುವ CPR ಪದ್ಧತಿಯನ್ನು ಮಾಡಿ ತೋರಿಸಲಾಯಿತು. ಮಗು, ಮಹಿಳೆ ಹಾಗೂ ಪುರುಷರಿಗೆ CPR ನೀಡುವ ವಿಭಿನ್ನ ವಿಧಾನಗಳ ಕುರಿತು ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಪ್ರಾಯೋಗಿಕ ಮಾಹಿತಿ ನೀಡಲಾಯಿತು.

ಎನ್‌ಡಿಆರ್‌ಎಫ್ ಕಮಾಂಡರ್ ಅಖಿಲೇಶ್ ಕುಮಾರ್ ಚೌಗಲೆ ಅವರು ಮಾತನಾಡಿ, ಮುಂಗಾರು ಮಳೆ ಶೀಘ್ರದಲ್ಲೇ ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಗೆ ಪ್ರವೇಶಿಸಲಿರುವ ಹಿನ್ನೆಲೆ ತುರ್ತು ರಕ್ಷಣಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮುನ್ನವೇ ಸಾರ್ವಜನಿಕರು ಪ್ರಾಥಮಿಕ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಮಳೆಗಾಲದ ಅವಧಿಯಲ್ಲಿ ಕರ್ನಾಟಕ ಕರಾವಳಿ ಪ್ರದೇಶ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಟೆಲಿಕಾಂ ತುರ್ತು ಸಂವಹನ ವ್ಯವಸ್ಥೆ ಪ್ರದರ್ಶನ:

ಬೆಂಗಳೂರು ಉತ್ತರ ನಗರ ನಿಗಮವು (BNCC) ಯಲಹಂಕ ಕೆರೆಯಲ್ಲಿ ಆಯೋಜಿಸಿದ್ದ ಪೂರ್ವ-ಮುಂಗಾರು ಸಿದ್ಧತಾ ಅಣಕು ಪ್ರದರ್ಶನದಲ್ಲಿ ದೂರಸಂಪರ್ಕ ಇಲಾಖೆಯ (ಕರ್ನಾಟಕ LSA) ಸಹ ನಿರ್ದೇಶಕರಾದ ರಾಜಕುಮಾರ್ ಹಾಗೂ ಸುಬ್ರಮಣಿ (JTO) ಭಾಗವಹಿಸಿದ್ದರು.

ವೊಡಾಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆಯು ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರ ಪರವಾಗಿ ತುರ್ತು ಸಂವಹನ ವ್ಯವಸ್ಥೆಯನ್ನು ಸ್ಥಾಪಿಸಿ, ICR (Intra Circle Roaming) Setup ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಸಂಪರ್ಕ ವ್ಯವಸ್ಥೆಯನ್ನು ನಿರ್ವಹಿಸುವ ವಿವಿಧ ಸನ್ನಿವೇಶಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

ಈ ವೇಳೆ Vodafone Idea, Airtel, Jio ಹಾಗೂ BSNL ಸೇರಿದಂತೆ ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರು ಭಾಗವಹಿಸಿದ್ದರು.

ಸಮನ್ವಯ ಗ್ರೂಪ್ ಮೂಲಕ ತ್ವರಿತ ಕಾರ್ಯಾಚರಣೆ:

ಮುಂಗಾರು ಮಳೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ನಗರ ಪಾಲಿಕೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ತುರ್ತು ಪರಿಸ್ಥಿತಿ ಅಥವಾ ಸಮಸ್ಯೆಗಳು ಉಂಟಾದಲ್ಲಿ ನಗರಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನೊಳಗೊಂಡ Co-ordination Group ಮೂಲಕ ಪರಸ್ಪರ ಸಮನ್ವಯ ಸಾಧಿಸಿ ತಕ್ಷಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು.

ಸ್ವಚ್ಛತೆ ಹಾಗೂ ತುರ್ತು ಪ್ರತಿಕ್ರಿಯೆಗೆ ಆದ್ಯತೆ:

ರಸ್ತೆ ಬದಿಯ ಶೋಲ್ಡರ್ ಡ್ರೇನ್‌ಗಳು, ಗ್ರೇಟಿಂಗ್ ಪ್ರದೇಶಗಳು ಹಾಗೂ ಚರಂಡಿಗಳಲ್ಲಿನ ಹೂಳು ಮತ್ತು ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಮಳೆಗಾಲದಲ್ಲಿ ನಾಗರಿಕರಿಂದ ಬರುವ ದೂರುಗಳಿಗೆ ಶಾಶ್ವತ ಮತ್ತು ತಾತ್ಕಾಲಿಕ ನಿಯಂತ್ರಣ ಕೊಠಡಿಗಳ ಮೂಲಕ ತ್ವರಿತ ಸ್ಪಂದನೆ ನೀಡಬೇಕು ಎಂದು ಸೂಚಿಸಲಾಯಿತು.

ಸಾರ್ವಜನಿಕ ಸುರಕ್ಷತೆಗೆ ಮುನ್ನೆಚ್ಚರಿಕಾ ಕ್ರಮ:

ಮಳೆಗಾಲದಲ್ಲಿ ರಸ್ತೆ ಸುರಕ್ಷತೆ, ಸಾರ್ವಜನಿಕ ಸಂಚಾರ ಸುಗಮತೆ ಹಾಗೂ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ.

ಈ ವೇಳೆ ಮುಖ್ಯ ಅಭಿಯಂತರರಾದ ರಾಘವೇಂದ್ರ ಪ್ರಸಾದ್ ಹಾಗೂ ಯಮುನಾ, ವಿಪತ್ತು ನಿರ್ವಹಣಾ ಸಮಾಲೋಚಕರು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ರಕ್ಷಣಾ ದಳ, ಹೋಂ ಗಾರ್ಡ್, BSF, ಅಗ್ನಿಶಾಮಕ ದಳ, BESCOM, Vi, Airtel, Jio, BSNL ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.


Share

You cannot copy content of this page