ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ಸೆಮಿಕಂಡಕ್ಟರ್ ಕ್ಷೇತ್ರ, ಸ್ಟಾರ್ಟ್ ಅಪ್‍ಗಳು, ಡಿಜಿಟಲ್ ನಾವೀನ್ಯತೆ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಹೊಸ ಮೈಲುಗಲ್ಲುಗಳನ್ನು ತಲುಪುತ್ತಿದೆ. ಈ ಮೂಲಕ ನಮ್ಮ ಯುವಜನತೆಗೆ ಹಿಂದೆಂದೂ ಕಾಣದಂತಹ ಅವಕಾಶಗಳು ಸೃಷ್ಟಿಯಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ತಿಳಿಸಿದ್ದಾರೆ.
ಇಂದು ‘ಯೂತ್ ಫಾರ್ ನೇಷನ್’ ಆಯೋಜಿಸಿದ್ದ “ಯುವ ಮನಸ್ಸುಗಳೊಂದಿಗೆ ಸಂವಾದ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಯುವಜನತೆಯ ಪಾತ್ರ ಮತ್ತು ಯುವ ನಾಯಕತ್ವದ ಪ್ರಾಮುಖ್ಯತೆಯ ಕುರಿತು ಅವರೊಂದಿಗೆ ಅರ್ಥಪೂರ್ಣ ಚರ್ಚೆಗಳನ್ನು ನಡೆಸಿದರು.
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಯುವಜನರ ಆಕಾಂಕ್ಷೆಗಳಿಗೆ ದ್ರೋಹ ಬಗೆದಿದೆ. ಕಾಂಗ್ರೆಸ್ ಆಡಳಿತದಲ್ಲಿ ಮಿತಿಮೀರಿದ ಭ್ರಷ್ಟಾಚಾರ ಮತ್ತು ದುರಾಡಳಿತವು, ಭಾರತದ ಯುವಜನತೆಯ ಭವಿಷ್ಯ ಮತ್ತು ಸಾಮರ್ಥ್ಯ ದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕಿರುವ ಸಂಪೂರ್ಣ ದೂರದೃಷ್ಟಿಯ ಕೊರತೆಯನ್ನು ಬಟಾಬಯಲು ಮಾಡಿದೆ ಎಂದು ಅವರು ನುಡಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಪ್ರಮುಖರು ಭಾಗವಹಿಸಿದ್ದರು.
