ಬೆಂಗಳೂರು: ಇಂದು ಕೃಷಿ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚದ ಏರಿಕೆ, ಮಾರುಕಟ್ಟೆ ಅಸ್ಥಿರತೆ ಮತ್ತು ಕಾರ್ಮಿಕ ಸಮಸ್ಯೆಗಳು ರೈತನ ಬದುಕನ್ನು ಸಂಕಷ್ಟಕ್ಕೆ ತಳ್ಳಿವೆ. ಈ ಸವಾಲುಗಳಿಗೆ ಉತ್ತರ ಕೊಡುವ ಶಕ್ತಿ ಇಂದಿನ ತಂತ್ರಜ್ಞಾನ ಮತ್ತು ಕೃಷಿ ಸ್ಟಾರ್ಟ್‌ಅಪ್‌ಗಳಲ್ಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಅಗ್ರಿ ಸ್ಟಾರ್ಟ್ ಅಪ್ ಕ್ಲಾನ್ ಕೇವ್ 2.0 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವರು, ನಮ್ಮ ಸರ್ಕಾರ ಕೃಷಿಯನ್ನು ಕೇವಲ ಬದುಕಿನ ಮಾರ್ಗವಾಗಿ ನೋಡುವುದಿಲ್ಲ — ಅದನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಡಿಜಿಟಲ್ ಕೃಷಿ, ಡ್ರೋನ್ ತಂತ್ರಜ್ಞಾನ, ಡೇಟಾ ಆಧಾರಿತ ಬೆಳೆ ನಿರ್ವಹಣೆ, ಮೌಲ್ಯವರ್ಧನೆ ಮತ್ತು ನೇರ ಮಾರುಕಟ್ಟೆ ವ್ಯವಸ್ಥೆಗಳಿಗೆ ನಮ್ಮ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಇಂದು ದೇಶದಲ್ಲಿ ಸಾವಿರಾರು Agri Startups ಹುಟ್ಟಿಕೊಂಡಿವೆ. ಅದರಲ್ಲೂ ಬೆಂಗಳೂರು ಸ್ಟಾರ್ಟ್ ಅಪ್ ಗಳ ಹಬ್ ಆಗಿ ಮುಂಚೂಣಿಯಲ್ಲಿದೆ. ಯುವಕರು “ಉದ್ಯೋಗ ಹುಡುಕುವವರು” ಆಗದೆ, “ಉದ್ಯೋಗ ಸೃಷ್ಟಿಸುವವರು” ಆಗಬೇಕು ಎಂಬುದು ನಮ್ಮ ಆಶಯ ಎಂದು ಸಚಿವರು ತಿಳಿಸಿದರು.
ರೈತ ಉತ್ಪಾದಕರ ಸಂಘಗಳು (FPOs), ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಯುವ ಉದ್ಯಮಿಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಗ್ರಾಮೀಣ ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆ ಸಾಧ್ಯ.
ರಾಜ್ಯದ ಕೃಷಿ ಇಲಾಖೆ ರೈತರ ಆದಾಯ ಹೆಚ್ಚಿಸುವುದು, ನವೀನ ತಂತ್ರಜ್ಞಾನವನ್ನು ಗ್ರಾಮ ಮಟ್ಟಕ್ಕೆ ತಲುಪಿಸುವುದು ಮತ್ತು ಯುವಕರಿಗೆ ಕೃಷಿ ಆಧಾರಿತ ಉದ್ಯಮಗಳಲ್ಲಿ ಅವಕಾಶ ಸೃಷ್ಟಿಸುವುದಕ್ಕೆ ಬದ್ಧವಾಗಿದೆ ಎಂದು ಹೇಳಿದರು.
ಈ Agri Startup Conclave 2.0 ಹೊಸ ಆಲೋಚನೆಗಳಿಗೆ ದಾರಿ ತೋರಲಿ, ಯುವಕರಿಗೆ ಪ್ರೇರಣೆ ನೀಡಲಿ ಹಾಗೂ ರೈತರ ಬದುಕಿನಲ್ಲಿ ನಿಜವಾದ ಪರಿವರ್ತನೆ ತರಲಿ ಎಂದು ಆಶಿಸುತ್ತೇನೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿಯವರು ತಿಳಿಸಿದರು.
ಇದೇ ವೇಳೆ ಅಗ್ರಿಸ್ಟಾರ್ಟ್ ಅಪ್ ಗಳು ಜಿಕೆವಿಕೆ ಆವರಣದಲ್ಲಿ ಇಟ್ಟಿದ್ದ ಸ್ಟಾಲ್ ಗಳಿಗೆ ಸಚಿವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ರಾಜೇಂದ್ರ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ.ಸುರೇಶ್, ಕುಲಸಚಿವ ಮಧುಸೂದನ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
