ಬೆಂಗಳೂರು: ಹಾಲಿ ಸ್ವಂತ ಕಟ್ಟಡಗಳು ಇಲ್ಲದೇ ಇರುವಂತಹ ಮತ್ತು ಬಹಳ ಹಳೇಯ ಕಟ್ಟಡಗಳನ್ನು ಹೊಂದಿರುವ ನಾಡ ಕಛೇರಿಗಳನ್ನು ಗುರುತಿಸಿ ಮೊದಲ ಹಂತದಲ್ಲಿ 94 ನಾಡ ಕಛೇರಿಗಳನ್ನು ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ಮುಂದುವರೆದು ಇನ್ನೂ 56 ನಾಡ ಕಛೇರಿಗಳನ್ನು ನಿರ್ಮಿಸಲು ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೂಲಕ ಒಟ್ಟು 150 ನಾಡ ಕಛೇರಿಗಳಿಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಲು ತೀರ್ಮಾನಿಸಿದಂತಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ರಾಜ್ಯಾದ್ಯಂತ 771 ಹೋಬಳಿ ಮಟ್ಟದ ನಾಡ ಕಛೇರಿಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು 54 ಸೇವೆಗಳನ್ನು ಪಡೆಯಲು ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ನಾಡ ಕಛೇರಿಗಳಿಗೆ ಭೇಟಿ ನೀಡುತ್ತಾರೆ. ಅನೇಕ ಪ್ರಮಾಣ ಪತ್ರಗಳು, ದಾಖಲೆಗಳು ಮಾತ್ರವಲ್ಲದೆ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗಾಗಿಯೂ ಭೇಟಿ ನೀಡುತ್ತಿರುತ್ತಾರೆ. ಇದಲ್ಲದೆ, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು (ಆರ್‌ಐ) ಗ್ರಾಮ ಆಡಳಿತ ಅಧಿಕಾರಿಗಳ (ವಿಎ) ಬಳಿಯೂ ಕೆಲಸಕ್ಕಾಗಿ ಪ್ರತಿದಿನ ಸಾರ್ವಜನಿಕರು ಭೇಟಿ ನೀಡುತ್ತಾರೆ. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ನಾಡಕಛೇರಿಗಳು ಕಾರ್ಯನಿರ್ವಹಿಸುತ್ತಿವೆ.
ಇಂತಹ ಜನ ಸಂಪರ್ಕವಿರುವ ಕಛೇರಿಗಳಿಗೆ ಅನೇಕ ಕಡೆಗಳಲ್ಲಿ ಸ್ವಂತ ಕಟ್ಟಡಗಳಿಗಲ್ಲ. ಮತ್ತಷ್ಟು ಕಡೆ ಅಧಿಕಾರಿಗಳು ಹಳೇ ಕಟ್ಟಡಗಳಲ್ಲಿ ಅಥವಾ ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಕುಳಿತು ಕಾರ್ಯನಿರ್ವಹಿಸುವಂತಹ ಸ್ಥಿತಿ ಇದೆ. ಸಾರ್ವಜನಿಕರ ಅನಾನುಕೂಲದ ಜತೆಗೆ ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೆಲಸ ಮಾಡಲು ಸುಸಜ್ಜಿತ ಕಛೇರಿ ಕಟ್ಟಡದ ಕೊರತೆ ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಸರ್ಕಾರ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಹಾಗೂ ಸಿಬ್ಬಂದಿಗೆ ಸುಸಜ್ಜಿತ ಕಛೇರಿ ಕಟ್ಟಡ ಒದಗಿಸಲು ತೀರ್ಮಾನಿಸಲಾಯಿತು.
ಈ ಹಿಂದೆ ನಾಡ ಕಛೇರಿ ಕಟ್ಟಡ ನಿರ್ಮಿಸಲು ಕೇವಲ ರೂ.18 ಲಕ್ಷ ಗಳನ್ನು ಮಾತ್ರ ಒದಗಿಸಲಾಗುತ್ತಿತ್ತು. ಇದರಿಂದ ಸೂಕ್ತ ಮತ್ತು ಸಮರ್ಪಕ ಕಟ್ಟಡ ನಿರ್ಮಾಣ ಅಸಾಧ್ಯವಾಗಿತ್ತು. ಪರಿಣಾಮ ಸಾರ್ವಜನಿಕರಿಗೆ ಮತ್ತು ಸಿಬ್ಬಂದಿಗಳಿಗೆ ಅವಶ್ಯಕ ಸೌಲಭ್ಯ ನೀಡುವುದು ಅಸಾಧ್ಯವಾಗಿತ್ತು. ಹಾಗಾಗಿ ಜನರ ಅವಶ್ಯಕತೆಯನ್ನು ಪರಿಗಣಿಸಿ ಪ್ರಸ್ತುತ ಕಟ್ಟಡದ ವಿನ್ಯಾಸವನ್ನೇ ಬದಲಿಸಿ, ಸುಸಜ್ಜಿತವಾತ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ನಗರ ಪ್ರದೇಶಗಳಲ್ಲಿ ರೂ.75 ಲಕ್ಷ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂ.55 ಲಕ್ಷ ಗಳ ವೆಚ್ಚದಲ್ಲಿ ನಾಡ ಕಛೇರಿಗಳನ್ನು ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ಇವುಗಳಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಹಾಗೂ ಸಿಬ್ಬಂದಿಗಳಿಗೆ ಸುಸಜ್ಜಿತ ಕಚೇರಿ ಒದಗಿಸುವ ನಮ್ಮ ಉದ್ದೇಶ ಈಡೇರಲಿದೆ ಎಂದು ಸಚಿವರು ತಿಳಿಸಿದರು.
