ಸಮಗ್ರ ಸುದ್ದಿ

ಹೊಸ ಮೃಗಾಲಯ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಈಶ್ವರ ಖಂಡ್ರೆ | ಆನೆಧಾಮಕ್ಕೆ ಶೀಘ್ರವೇ ಟೆಂಡರ್: ಈಶ್ವರ ಖಂಡ್ರೆ

Share

ಹಾಸನ: ಮಾನವ-ಆನೆ ಸಂಘರ್ಷ ತಗ್ಗಿಸಲು 2000 ಹೆಕ್ಟೆರ್ ಪ್ರದೇಶದಲ್ಲಿ ಆನೆಧಾಮ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದ್ದು, 8-10 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಹಾಸನ ನಗರದ ಗೆಂಡೆಕಟ್ಟೆ ಅರಣ್ಯ ಅತಿಥಿಗೃಹದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನೂರಾರು ಆನೆಗಳು ಕಾಡಿನ ಹೊರಗೇ ಇದ್ದು, ಆನೆಗಳಿಂದ ಬೆಳೆ ಮತ್ತು ಜೀವಹಾನಿ ಆಗದಂತೆ ತಡೆಯಲು ಆನೆಧಾಮ ನಿರ್ಮಿಸಲಾಗುತ್ತಿದೆ ಎಂದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ಈ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದರು.

ಹೊಸ ಮೃಗಾಲಯ ಪ್ರಸ್ತಾಪ ಇಲ್ಲ:

ಹಾಸನದಲ್ಲಿ ಮೃಗಾಲಯ ಸ್ಥಾಪಿಸುವ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದು ಹೊಸ ಮೃಗಾಲಯ ಸ್ಥಾಪಿಸಲು ಕೇಂದ್ರದ ಅನುಮತಿ ಪಡೆಯಬೇಕಾಗುತ್ತದೆ. ಅನುದಾನವನ್ನೂ ನೀಡಬೇಕಾಗುತ್ತದೆ. ನಿರ್ವಹಣೆಯ ಸಮಸ್ಯೆಯೂ ಇದೆ ಎಂದರು.

ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯವಿದ್ದು, ಇದರ ಜೊತೆಗೆ ಹಲವು ಝೂಗಳು ಕಾರ್ಯ ನಿರ್ವಹಿಸುತ್ತಿವೆ. ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯದ ಆದಾಯದಿಂದ ಬೇರೆ ಮೃಗಾಲಯದ ಖರ್ಚುವೆಚ್ಚ ಸರಿದೂಗಿಸಲಾಗುತ್ತಿದೆ. ಹೀಗಾಗಿ ಹೊಸ ಮೃಗಾಲಯ ಸ್ಥಾಪನೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಡೆನೂರು 100 ಎಕರೆಭೂಮಿ ಮರು ವಶ:
ರಾಜ್ಯದಲ್ಲಿ ಅರಣ್ಯ ಇಲಾಖೆಗೆ ಸೇರಿದ ಯಾವುದೇ ಬೆಲೆಬಾಳುವ ಭೂಮಿಯನ್ನು ಮರು ವಶಪಡಿಸಿಕೊಳ್ಳಲು ಸರ್ಕಾರ ಕ್ರಮವಹಿಸಿದ್ದು, ಹಾಸನ ನಗರದ ಬಳಿ ಇರುವ ಮಡೇನೂರಿನಲ್ಲಿ 100 ಎಕರೆ ಅರಣ್ಯ ಪ್ರದೇಶವನ್ನು ಮರು ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಸೆಕ್ಷನ್ 4 ಆದ ಬಳಿಕ ಸೆಕ್ಷನ್ 17 ಅಂದರೆ ಅರಣ್ಯ ಎಂದು ಘೋಷಿಸುವ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದ್ದು, ವ್ಯವಸ್ಥಾಪನಾಧಿಕಾರಿಗಳ (ಫಾರೆಸ್ಟ್ ಸೆಟ್ಲ್ ಮೆಂಟ್ ಆಫೀಸರ್) ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page