ಸಮಗ್ರ ಸುದ್ದಿ

ಟೋಯಿಂಗ್ ಮಾಡುವ ಅನಾಥ ವಾಹನಗಳ ನಿಲುಗಡೆಗೆ ಪಾಲಿಕೆವಾರು ಸ್ಥಳಗಳನ್ನು ಅಂತಿಮಗೊಳಿಸಿ : ಮಹೇಶ್ವರ್ ರಾವ್

Share

ಬೆಂಗಳೂರು:ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಟೋಯಿಂಗ್ ಮಾಡುವ ಅನಾಥ ವಾಹನಗಳ ನಿಲುಗಡೆಗೆ ಪಾಲಿಕೆವಾರು ಸ್ಥಳಗಳನ್ನು ಅಂತಿಮಗೊಳಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳೊಂದಿಗೆ ನಡೆದ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟೋಯಿಂಗ್ ಮಾಡಿದ ವಾಹನಗಳನ್ನು ನಿಲುಗಡೆ ಮಾಡುವ ಸಲುವಾಗಿ ಉತ್ತರ ನಗರ ಪಾಲಿಕೆಯಲ್ಲಿ ಈಗಾಗಲೇ ಸ್ಥಳವನ್ನು ಗುರುತಿಸಲಾಗಿದೆ. ಕೇಂದ್ರ ಮತ್ತು ದಕ್ಷಿಣ ನಗರ ಪಾಲಿಕೆಗಳಲ್ಲಿ ಸ್ಥಳ ಗುರುತಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಪೂರ್ವ ಹಾಗೂ ಪಶ್ಚಿಮ ನಗರ ಪಾಲಿಕೆಗಳಲ್ಲಿಯೂ ತ್ವರಿತವಾಗಿ ಸ್ಥಳಗಳನ್ನು ಗುರುತಿಸುವಂತೆ ಸೂಚನೆ ನೀಡಿದರು.

ಕಲ್ವರ್ಟ್ ನಿರ್ಮಾಣಕ್ಕೆ ಅನುಮತಿ ನೀಡಿ:

ಕೋಗಿಲು ಜಂಕ್ಷನ್‌ನ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಬಳಿ ಕಲ್ವರ್ಟ್ ನಿರ್ಮಾಣ ಮಾಡುವ ಸಲುವಾಗಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದ್ದು, ಅದಕ್ಕೆ ಕೂಡಲೇ ಅನುಮೋದನೆ ನೀಡುವಂತೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಂದಾಪುರ–ಹೊಸೂರು ರಸ್ತೆಯ ಬಳಿ ಪ್ರೀಕಾಸ್ಟ್ ಕಲ್ವರ್ಟ್ ಬಾಕ್ಸ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸದರಿ ಸ್ಥಳದಲ್ಲಿ ಬೆಸ್ಕಾಂ ಕೇಬಲ್ ಸ್ಥಳಾಂತರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎನ್‌.ಎಚ್‌.ಎ.ಐ ಹಾಗೂ ಬೆಸ್ಕಾಂ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ಕೂಡಲೇ ಸಮಸ್ಯೆಯನ್ನು ಬಗೆಹರಿಸಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ವಾರದೊಳಗೆ ಸಮೀಕ್ಷಾ ವರದಿ ನೀಡಿ:

ಅರ್ಕಾವತಿ ಬಡಾವಣೆಗೆ ಹೊಂದಿಕೊಂಡಿರುವ ಜಕ್ಕೂರು ಕೆರೆಯ ಪಕ್ಕದಲ್ಲಿರುವ ಸಂಪಿಗೆಹಳ್ಳಿ ಮುಖ್ಯ ರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿದಂತೆ ಬಿಡಿಎ ಹಾಗೂ ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವಾರದೊಳಗೆ ಸಮೀಕ್ಷಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ಜಲಮಂಡಳಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ:

ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಬೇಕಿರುವ ನಾಗವಾರ ರಸ್ತೆ, ಟ್ಯಾನರಿ ರಸ್ತೆ, ಲೋವರ್ ಅಗರಂ ರಸ್ತೆ, ತಿಮ್ಮಯ್ಯ ರಸ್ತೆ, ನೇತಾಜಿ ರಸ್ತೆ, ಸುಲ್ತಾನ್‌ಪಾಳ್ಯ ರಸ್ತೆ ಹಾಗೂ ನಾಗರಭಾವಿ ಮುಖ್ಯ ರಸ್ತೆಯಲ್ಲಿ ಕಾಮಗಾರಿ ಆರಂಭಿಸಬೇಕಿದೆ. ಆದರೆ, ಇದಕ್ಕೆ ಮುನ್ನ ಜಲಮಂಡಳಿ ವತಿಯಿಂದ ಕೈಗೆತ್ತಿಕೊಂಡಿರುವ ಪೈಪ್‌ಲೈನ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಅಗ್ನಿಶಾಮಕ ವಿಭಾಗ:

ನಗರದಲ್ಲಿ 20 ಅಗ್ನಿಶಾಮಕ ಠಾಣೆಗಳು ಕಾರ್ಯನಿರ್ವಹಿಸಲಿದ್ದು, ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಆಯಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಅಗ್ನಿಶಾಮಕ ಠಾಣೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಅಗ್ನಿಶಾಮಕ ಠಾಣೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ದಿಣ್ಣೂರು ರಸ್ತೆ ಅಗಲೀಕರಣ ಕಾಮಗಾರಿಯನ್ನು ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಹಾಲಿಡೇ ವಿಲೇಜ್ ರಸ್ತೆಯಲ್ಲಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಸೂಚನೆ ನೀಡಿದರು.

ಹರಳೂರು ಮುಖ್ಯ ರಸ್ತೆಯಲ್ಲಿ ಜಲಮಂಡಳಿ ರಸ್ತೆ ಅಗೆದಿರುವ ಹಿನ್ನೆಲೆಯಲ್ಲಿ ಪುನಃಸ್ಥಾಪನಾ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಯಲಹಂಕ ಓಲ್ಡ್ ಟೌನ್‌ನಲ್ಲಿ ಕೈಗೆತ್ತಿಕೊಂಡಿರುವ ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಬನ್ನೇರುಘಟ್ಟ ರಸ್ತೆಯಲ್ಲಿ ಜಲಮಂಡಳಿ ಕಾಮಗಾರಿಯನ್ನು ಎರಡು ದಿನಗಳಲ್ಲಿ ಪೂರ್ಣಗೊಳಿಸಿ, ದಕ್ಷಿಣ ನಗರ ಪಾಲಿಕೆಯಿಂದ ಡಾಂಬರೀಕರಣ ಕಾರ್ಯ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಕೆ.ಎನ್. ರಮೇಶ್, ಬೆಂ.ಘ.ನಿ.ನಿ.ದ ಸಿಇಒ ಕರೀಗೌಡ, ಅಪರ ಆಯುಕ್ತರು, ಪ್ರಧಾನ ಅಭಿಯಂತರರು, ಮೆಟ್ರೋ, ಪೊಲೀಸ್, ಡಲ್ಟ್, ಅಗ್ನಿಶಾಮಕ, ಎನ್‌.ಎಚ್‌.ಎ.ಐ, ರೈಲ್ವೆ, ಜಲಮಂಡಳಿ, ಬೆಸ್ಕಾಂ ಮತ್ತು ಬೆಂಗಳೂರು ನಗರ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page